ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಚೆಟ್ರಿ ಬಳಗಕ್ಕೆ ಜಯದ ವಿಶ್ವಾಸ, ಎಟಿಕೆಎಂಬಿ ಸವಾಲು

Last Updated 2 ಡಿಸೆಂಬರ್ 2022, 14:34 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡವನ್ನು ಮಣಿಸಿ ಆತ್ಮವಿಶ್ವಾಸದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಟೂರ್ನಿಯಲ್ಲಿ ಶನಿವಾರ ಎಟಿಕೆ ಮೋಹನ್ ಬಾಗನ್ ಸವಾಲಿಗೆ ಸಜ್ಜಾಗಿದೆ.

ಇಲ್ಲಿಯ ಕಂಠೀರವ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಣ ಪೈಪೋಟಿಗೆ ವೇದಿಕೆ ಸಜ್ಜುಗೊಂಡಿದೆ. ಕಳೆದ ಶನಿವಾರ ಮಡಗಾಂವ್‌ನಲ್ಲಿ ನಡೆದ ಪಂದ್ಯದಲ್ಲಿ ಜಾವಿ ಹೆರ್ನಾಂಡೆಜ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಬಿಎಫ್‌ಸಿ 2–0ಯಿಂದ ಗೋವಾಕ್ಕೆ ಸೋಲುಣಿಸಿತ್ತು. ಸತತ ನಾಲ್ಕು ಪಂದ್ಯಗಳಲ್ಲಿ ಸೋತ ಬಳಿಕ ಲಭಿಸಿದ ಈ ಗೆಲುವು ತಂಡದಲ್ಲಿ ಹೊಸ ಉತ್ಸಾಹ ತಂದಿದೆ.

ಟೂರ್ನಿಯಲ್ಲಿ ಆಡಿದ ಏಳು ಪಂದ್ಯಗಳಿಂದ ಬಿಎಫ್‌ಸಿ ಕೇವಲ ಎರಡು ಗೆಲುವು ದಾಖಲಿಸಿದೆ. ಒಂದರಲ್ಲಿ ಡ್ರಾ ಮಾಡಿಕೊಂಡು ನಾಲ್ಕು ಪಂದ್ಯಗಳಲ್ಲಿ ಸೋತಿದೆ. ಏಳು ಪಾಯಿಂಟ್ಸ್ ಗಳಿಸಿ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಆದರೆ ಮೋಹನ್ ಬಾಗನ್ 13 ಪಾಯಿಂಟ್ಸ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ ಆಡಿದ ಈ ಹಿಂದಿನ ಪಂದ್ಯದಲ್ಲಿ ಬಿಎಫ್‌ಸಿ 0–1ರಿಂದ ಈಸ್ಟ್ ಬೆಂಗಾಲ್‌ಗೆ ಮಣಿದಿತ್ತು.

‘ಎಟಿಕೆಂಬಿ ಎದುರಿನ ಹಣಾಹಣಿಯನ್ನೂ ಎಲ್ಲ ಪಂದ್ಯಗಳಂತೆಯೇ ಪರಿಗಣಿಸಲಿದ್ದೇವೆ. ಆ ತಂಡದ ಸಾಮರ್ಥ್ಯ ಮತ್ತು ದೌರ್ಬಲ್ಯದ ಅರಿವಿದೆ. ಗೋವಾ ಎದುರಿನ ಪಂದ್ಯದಲ್ಲಿ ತೋರಿದ ಲಯವನ್ನೇ ಇಲ್ಲಿಯೂ ಮುಂದುವರಿಸುವೆವು‘ ಎಂದು ಬಿಎಫ್‌ಸಿ ಮುಖ್ಯ ಕೋಚ್‌ ಸೈಮನ್ ಗ್ರೇಸನ್‌ ಹೇಳಿದ್ದಾರೆ.

ನಾಯಕ ಸುನಿಲ್ ಚೆಟ್ರಿ, ಫಿಜಿ ದೇಶದ ಪ್ರತಿಭೆ ರಾಯ್‌ಕೃಷ್ಣ, ಜಾವಿ ಹೆರ್ನಾಂಡೆಜ್ ಮೇಲೆ ಬಿಎಫ್‌ಸಿ ನಿರೀಕ್ಷೆ ಇಟ್ಟುಕೊಂಡಿದೆ. ಗಾಯಗೊಂಡಿರುವ ಪ್ರಿನ್ಸ್ ಇಬಾರ ಪಂದ್ಯಕ್ಕೆ ಲಭ್ಯರಿಲ್ಲ.

ಕಳೆದ ಪಂದ್ಯದಲ್ಲಿ ಹೈದರಾಬಾದ್‌ ಎಫ್‌ಸಿಗೆ ಸೋಲುಣಿಸಿರುವ ಎಟಿಕೆಎಂಬಿ ಕೂಡ ಇಲ್ಲಿ ಗೆಲುವಿನ ಛಲದಲ್ಲಿದೆ. ಹೀಗಾಗಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿ ಪೈಪೋಟಿ ನಿರೀಕ್ಷಿಸಬಹುದು.

ಚೆನ್ನೈನಲ್ಲಿ ನಡೆಯಲಿರುವ ಇನ್ನೊಂದು ಪ‍ಂದ್ಯದಲ್ಲಿ ಚೆನ್ನೈಯಿನ್‌ ಎಫ್‌ಸಿ ಮತ್ತು ಹೈದರಾಬಾದ್ ಎಫ್‌ಸಿ ಸೆಣಸಲಿವೆ. ಸಂಜೆ 5.30ರಿಂದ ಈ ಪಂದ್ಯ ನಡೆಯಲಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌, ಜಿಯೊ ಟಿವಿ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT