ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್: ಮುಂಬೈಗೆ ಸೋಲುಣಿಸಿದ ಗೋವಾ

ಇಂದು ನಾರ್ತ್‌ಈಸ್ಟ್–ಜೆಎಫ್‌ಸಿ ಹಣಾಹಣಿ
Last Updated 24 ಅಕ್ಟೋಬರ್ 2018, 17:15 IST
ಅಕ್ಷರ ಗಾತ್ರ

ಗೋವಾ: ಬಲಿಷ್ಠ ಎದುರಾಳಿಗಳ ವಿರುದ್ಧ ಪ್ರಬಲ ತಂತ್ರಗಳನ್ನು ಹೆಣೆದ ಎಫ್‌ಸಿ ಗೋವಾ ತಂಡದವರು ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್‌) ಬುಧವಾರದ ಪಂದ್ಯ ದಲ್ಲಿ ಭರ್ಜರಿ ಜಯ ಸಾಧಿಸಿದರು.

ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಈ ತಂಡ ಮುಂಬೈ ಸಿಟಿ ಎಫ್‌ಸಿಯನ್ನು 5–0 ಗೋಲುಗಳಿಂದ ಸೋಲಿಸಿತು.

ಫೆರಾನ್ ಕೊರೊಮಿನಾಸ್‌ ಏಳನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಗಳಿಸಿದ ಗೋಲಿನೊಂದಿಗೆ ಗೋವಾ ಖಾತೆ ತೆರೆಯಿತು. ಜಾಕಿಚಾಂದ್ ಸಿಂಗ್‌ (55ನೇ ನಿಮಿಷ), ಎಡು ಬೇಡಿಯಾ (61ನೇ ನಿಮಿಷ), ಮಿಗ್ವೆಲ್ ಫರ್ನಾಂಡಿಸ್‌ (84, 90ನೇ ನಿಮಿಷ) ಗೆಲುವಿನ ಅಂತರ ಹೆಚ್ಚಿಸಲು ಕಾರಣರಾದರು.

ನಾರ್ತ್‌ಈಸ್ಟ್– ಜೆಎಫ್‌ಸಿ ಹಣಾ ಹಣಿ: ಗುವಾಹಟಿ: ಗುರುವಾರ ಇಲ್ಲಿನ ಇಂದಿರಾಗಾಂಧಿ ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ನಾರ್ತ್‌ಈಸ್ಟ್ ಯುನೈಟೆಡ್ ತಂಡ ಜೆಮ್‌ಶೆಡ್‌ಪುರ ಎಫ್‌ಸಿ ವಿರುದ್ಧ ಸೆಣಸಲಿದೆ. ಐದನೇ ಆವೃತ್ತಿಯಲ್ಲಿ ಇಲ್ಲಿಯ ವರೆಗೆ ಉತ್ತಮ ಸಾಮರ್ಥ್ಯ ತೋರಿರುವ ನಾರ್ತ್ ಈಸ್ಟ್ ತಂಡ ಗೆಲುವಿನ ಭರವಸೆಯಲ್ಲಿದೆ. ಜೆಮ್‌ ಶೆಡ್‌ಪುರ ತಂಡವೂ ಅಮೋಘ ಆಟವಾಡಿದ್ದು ಈ ವರೆಗೆ ಒಂದು ಪಂದ್ಯದಲ್ಲೂ ಸೋತಿಲ್ಲ.

ನಾರ್ತ್ ಈಸ್ಟ್‌ ಮೊದಲ ಪಂದ್ಯದಲ್ಲಿ ಗೋವಾ ವಿರುದ್ಧ ಡ್ರಾ ಮಾಡಿ ಕೊಂಡಿತ್ತು. ಎಟಿಕೆ ವಿರುದ್ಧ ಏಕೈಕ ಗೋಲಿನಿಂದ ಜಯಿಸಿತ್ತು. ಮೂರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್‌ಸಿಯನ್ನು 4–3ರಿಂದ ಮಣಿಸಿತ್ತು. ಮುಂಬೈ ವಿರುದ್ಧದ ಪಂದ್ಯದಲ್ಲಿ 2-0ಯಿಂದ ಗೆದ್ದಿದ್ದ ಜೆಮ್‌ಶೆಡ್‌ಪುರ ನಂತರ ಬಿಎಫ್‌ಸಿ ಮತ್ತು ಎಟಿಕೆ ವಿರುದ್ಧ ಡ್ರಾ ಸಾಧಿಸಿತ್ತು.

ರೆಹನೇಶ್‌ಗೆ ಎರಡು ಪಂದ್ಯಗಳ ನಿಷೇಧ

ನಾರ್ತ್‌ ಈಸ್ಟ್ ಯುನೈಟೆಡ್‌ನ ಗೋಲ್‌ಕೀಪರ್‌ ಟಿ.ಪಿ.ರೆಹನೇಶ್‌ ಅವರ ಮೇಲೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಎರಡು ಪಂದ್ಯಗಳ ನಿಷೇಧ ಹೇರಿದೆ. ₹ 2 ಲಕ್ಷ ದಂಡವನ್ನೂ ವಿಧಿಸಿದೆ.

ಅಂಗಣದಲ್ಲಿ ಅಶಿಸ್ತಿನಿಂದ ವರ್ತಿಸಿದ್ದಕ್ಕೆ ಅವರನ್ನು ಆಂತರಿಕ ತನಿಖೆಗೆ ಒಳಪಡಿಸಲಾಗಿತ್ತು. ಚೆನ್ನೈಯಿನ್ ಎಫ್‌ಸಿ ಎದುರು ಇದೇ ತಿಂಗಳ 18ರಂದು ನಡೆದಿದ್ದ ಪಂದ್ಯದಲ್ಲಿ ಆಡದಂತೆ ನಿಷೇಧ ಹೇರಲಾಗಿತ್ತು. ಈಗ ಮತ್ತೆ ಎರಡು ಪಂದ್ಯಗಳಿಂದ ನಿಷೇಧ ಹೇರಲಾಗಿದೆ. ಹೀಗಾಗಿ ಜಮ್‌ಶೆಡ್‌ಪುರ ವಿರುದ್ಧ ಗುರುವಾರ ನಡೆಯಲಿರುವ ಪಂದ್ಯ ಮತ್ತು 30ರಂದು ಡೆಲ್ಲಿ ಡೈನಾಮೊಸ್ ಎದುರಿನ ಪಂದ್ಯಕ್ಕೆ ಅವರು ಲಭ್ಯ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT