ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಬಿಎಫ್‌ಸಿ ಜಯಭೇರಿ

Last Updated 22 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಮಡಗಾಂವ್‌: ದ್ವಿತೀಯಾರ್ಧದಲ್ಲಿ ನಾಯಕ ಸುನಿಲ್‌ ಚೆಟ್ರಿ ಗಳಿಸಿದ ಗೋಲಿನ ನೆರವಿನಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಪಂದ್ಯದಲ್ಲಿ ಗೆದ್ದಿದೆ.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪೈಪೋಟಿಯಲ್ಲಿ ಬಿಎಫ್‌ಸಿ 2–1 ಗೋಲುಗಳಿಂದ ಆತಿಥೇಯ ಎಫ್‌ಸಿ ಗೋವಾ ತಂಡವನ್ನು ಸೋಲಿಸಿತು.

ಸುನಿಲ್‌ ಚೆಟ್ರಿ ಬಳಗ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 34ನೇ ನಿಮಿಷದಲ್ಲಿ ರಾಹುಲ್‌ ಭೆಕೆ ಖಾತೆ ತೆರೆದರು. ರಾಹುಲ್‌ ಅವರು ಎಡಗಾಲಿನಿಂದ ‘ಫ್ಲಿಕ್‌’ ಮಾಡಿದ ಚೆಂಡು ಎದುರಾಳಿ ಗೋಲುಪೆಟ್ಟಿಗೆಯ ಬಲೆಗೆ ಮುತ್ತಿಕ್ಕುತ್ತಿದ್ದಂತೆ ಚೆಟ್ರಿ ಪಾಳಯದಲ್ಲಿ ಸಂಭ್ರಮ ಮೇಳೈಸಿತು.

ದ್ವಿತೀಯಾರ್ಧದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. 47ನೇ ನಿಮಿಷದಲ್ಲಿ ಗೋವಾ ತಂಡದ ಮೊಹಮ್ಮದ್‌ ಅಲಿ ಮತ್ತು 59ನೇ ನಿಮಿಷದಲ್ಲಿ ಬಿಎಫ್‌ಸಿ ತಂಡದ ದಿಮಾಸ್‌ ಡೆಲ್ಗಾಡೊ ಅವರು ಒರಟು ಆಟ ಆಡಿದ್ದರಿಂದ ಅವರಿಗೆ ಪಂದ್ಯದ ರೆಫರಿ ‘ಕೆಂಪು ಕಾರ್ಡ್‌’ ತೋರಿಸಿ ಅಂಗಳದಿಂದ ಆಚೆ ಕಳುಹಿಸಿದರು. ಹೀಗಾಗಿ ಉಭಯ ತಂಡಗಳು 10 ಮಂದಿಯೊಂದಿಗೆ ಆಡುವ ಅನಿವಾರ್ಯತೆ ಎದುರಿಸಿದವು.

72ನೇ ನಿಮಿಷದಲ್ಲಿ ಗೋವಾ ತಂಡದ ಜಾಕಿಚಂದ್‌ ಸಿಂಗ್‌ ಗೋಲು ಬಾರಿಸಿ 1–1 ಸಮಬಲಕ್ಕೆ ಕಾರಣರಾದರು. ಹೀಗಾಗಿ ಆಟದ ರೋಚಕತೆ ಹೆಚ್ಚಿತು. ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಸಮಯ ಉಳಿಯಲು ಬಿಎಫ್‌ಸಿ ನಾಯಕ ಚೆಟ್ರಿ ಅವಕಾಶ ನೀಡಲಿಲ್ಲ. 77ನೇ ನಿಮಿಷದಲ್ಲಿ ಕಾಲ್ಚಳಕ ತೋರಿದ ಅವರು ಪ್ರವಾಸಿ ತಂಡ ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT