ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ನಾಡಿನಲ್ಲಿ ಇಂದು ಫುಟ್‌ಬಾಲ್‌ ಹಬ್ಬಕ್ಕೆ ಚಾಲನೆ

ಐಎಸ್‌ಎಲ್‌ ಆರನೇ ಆವೃತ್ತಿ: ಮೊದಲ ಪಂದ್ಯದಲ್ಲಿ ಎಟಿಕೆ–ಕೇರಳ ಪೈಪೋಟಿ
Last Updated 19 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಕೊಚ್ಚಿ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಆರನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.

ಐದು ತಿಂಗಳ ಕಾಲ ನಡೆಯುವ ಫುಟ್‌ಬಾಲ್‌ ಹಬ್ಬಕ್ಕೆ ಭಾನುವಾರ ‘ದೇವರ ನಾಡಿ’ನಲ್ಲಿ ಚಾಲನೆ ಸಿಗಲಿದೆ.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ಮತ್ತು ಎಟಿಕೆ ತಂಡಗಳು ಎದುರಾಗಲಿವೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಎಟಿಕೆ ತಂಡದ ಸಹ ಮಾಲೀಕತ್ವ ಹೊಂದಿದ್ದಾರೆ.

ಲೀಗ್‌ನಲ್ಲಿ ಎರಡು ಬಾರಿ ರನ್ನರ್ಸ್‌ ಅಪ್‌ ಆಗಿರುವ ಕೇರಳ ಎಫ್‌ಸಿ, ಈ ಬಾರಿ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ನೆದರ್ಲೆಂಡ್ಸ್‌ನ ಈಲ್ಕೊ ಶಿಟೋರಿ ಅವರನ್ನು ಕೋಚ್‌ ಆಗಿ ನೇಮಿಸಿದೆ. ಜೊತೆಗೆ ವಿದೇಶಿ ಆಟಗಾರರಾದ ಬಾರ್ಥೊಲೊಮೆವ್‌ ಒಗ್‌ಬೆಚೆ, ಗಿಯಾನಿ ಜುಯಿವರ್ಲೂನ್‌, ಮರಿಯೊ ಆರ್ಕ್ವೆಸ್‌ ಮತ್ತು ರಫೆಲ್‌ ಮೆಸ್ಸಿ ಬವುಲಿ ಅವರನ್ನು ತನ್ನತ್ತ ಸೆಳೆದುಕೊಂಡಿದೆ.

ಹಿಂದಿನ ಆವೃತ್ತಿಯಲ್ಲಿ ತಂಡದ ಆಧಾರಸ್ಥಂಭಗಳಾಗಿದ್ದ ಅನಾಸ್‌ ಎಡತೋಡಿಕಾ ಮತ್ತು ಸಂದೇಶ್‌ ಜಿಂಗಾನ್‌ ಈ ಬಾರಿ ಬೇರೆ ತಂಡಗಳಲ್ಲಿ ಆಡುತ್ತಿದ್ದಾರೆ. ಅವರ ಅನುಪಸ್ಥಿತಿ ತಂಡಕ್ಕೆ ಕಾಡುವ ಸಾಧ್ಯತೆ ಇದೆ.

ಎರಡು ಬಾರಿಯ ಚಾಂಪಿಯನ್‌ ಎಟಿಕೆ, ಲೀಗ್‌ನಲ್ಲಿ ಜಯದ ಮುನ್ನುಡಿ ಬರೆಯುವ ವಿಶ್ವಾಸದಲ್ಲಿದೆ. ಆ್ಯಂಟೋನಿಯೊ ಹಬಾಸ್‌ ಅವರ ಮಾರ್ಗದರ್ಶನ ಹೊಂದಿರುವ ಈ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ.

ಜಾನ್‌ ಜಾನ್ಸನ್‌, ಪ್ರೀತಮ್‌ ಕೋಟಾಲ್‌, ಪ್ರಣಯ್‌ ಹಲ್ದಾರ್‌, ಎಡು ಗಾರ್ಸಿಯಾ ಮತ್ತು ಜಾಬಿ ಜಸ್ಟಿನ್‌ ಅವರು ಮಿಂಚುವ ತವಕದಲ್ಲಿದ್ದಾರೆ.

ವರ್ಣರಂಜಿತ ಚಾಲನೆ: ಲೀಗ್‌ಗೆ ವರ್ಣರಂಜಿತ ಚಾಲನೆ ನೀಡಲು ಆಯೋಜಕರು ಸಿದ್ಧತೆ ಮಾಡಿಕೊಂಡಿದ್ದಾರೆ.

ಸಂಜೆ ಆರು ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್‌ ತಾರೆಗಳಾದ ಟೈಗರ್‌ ಶ್ರಾಫ್‌ ಮತ್ತು ದಿಶಾ ಪಠಾಣಿ ಅವರ ನೃತ್ಯದ ಸೊಬಗು ಅನಾವರಣಗೊಳ್ಳಲಿದೆ. ನಟ ದುಲ್ಕರ್‌ ಸಲ್ಮಾನ್‌ ಅವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

ಆರಂಭ: 6.45ಕ್ಕೆ.
ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌.

**
ಲೀಗ್‌ನಲ್ಲಿ ಭಾಗಹಿಸುವ ತಂಡಗಳು
ಎಟಿಕೆ, ಬೆಂಗಳೂರು ಎಫ್‌ಸಿ, ಚೆನ್ನೈಯಿನ್‌ ಎಫ್‌ಸಿ, ಎಫ್‌ಸಿ ಗೋವಾ, ಹೈದರಾಬಾದ್‌ ಎಫ್‌ಸಿ, ಜೆಮ್‌ಶೆಡ್‌ಪುರ ಎಫ್‌ಸಿ, ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ, ಮುಂಬೈ ಸಿಟಿ ಎಫ್‌ಸಿ, ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ಮತ್ತು ಒಡಿಶಾ ಎಫ್‌ಸಿ.

**

ಅಂಕಿ ಅಂಶ
373:
ಇದುವರೆಗೂ ನಡೆದ ಒಟ್ಟು ಪಂದ್ಯಗಳು
956:ಲೀಗ್‌ನಲ್ಲಿ ದಾಖಲಾಗಿರುವ ಒಟ್ಟು ಗೋಲುಗಳು
588: ಇದುವರೆಗೂ ಲೀಗ್‌ನಲ್ಲಿ ಆಡಿದ ವಿವಿಧ ದೇಶಗಳ ಆಟಗಾರರು
70,56,825: ಹಿಂದಿನ ಐದು ಆವೃತ್ತಿಗಳ ಪಂದ್ಯಗಳನ್ನು ವೀಕ್ಷಿಸಿದವರ ಒಟ್ಟು ಸಂಖ್ಯೆ
254:ಐದನೇ ಆವೃತ್ತಿಯಲ್ಲಿ ದಾಖಲಾದ ಒಟ್ಟು ಗೋಲುಗಳು
ಎಫ್‌ಸಿ ಗೋವಾ (154): ಲೀಗ್‌ನಲ್ಲಿ ಅತೀ ಹೆಚ್ಚು ಗೋಲು ಹೊಡೆದ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT