ಶನಿವಾರ, ಏಪ್ರಿಲ್ 4, 2020
19 °C

ಐಎಸ್‌ಎಲ್‌: ಚೆನ್ನೈಯಿನ್‌–ಗೋವಾ ಸೆಮಿ ‘ಫೈಟ್‌’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ : ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಆರನೇ ಆವೃತ್ತಿಯ ಫುಟ್‌ಬಾಲ್‌ ಟೂರ್ನಿ ಅಂತಿಮ ಘಟ್ಟ ತಲುಪಿದೆ.

ಮೊದಲ ಸೆಮಿಫೈನಲ್‌ನ ಪ್ರಥಮ ಲೆಗ್‌ನ ಪೈಪೋಟಿಯಲ್ಲಿ ಚೆನ್ನೈಯಿನ್‌ ಎಫ್‌ಸಿ ಮತ್ತು ಎಫ್‌ಸಿ ಗೋವಾ ತಂಡಗಳು ಎದುರಾಗಲಿವೆ. ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ಈ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ಮೂಡಿಬರುವ ನಿರೀಕ್ಷೆ ಇದೆ.

ಈ ಬಾರಿಯ ಟೂರ್ನಿಯ ಆರಂಭದಲ್ಲೇ ಸತತ ಸೋಲುಗಳನ್ನು ಕಂಡಿದ್ದ ಚೆನ್ನೈಯಿನ್‌ ತಂಡ ಲೀಗ್‌ ಹಂತದಲ್ಲೇ ಹೊರಬೀಳುವ ಆತಂಕ ಎದುರಿಸಿತ್ತು. ಒವೆನ್‌ ಕೋಯಲ್‌ ಅವರು ಮುಖ್ಯ ಕೋಚ್‌ ಹುದ್ದೆ ಅಲಂಕರಿಸಿದ ಬಳಿಕ ಈ ತಂಡ ಪವಾಡ ಮಾಡಿತು. 12 ಪಂದ್ಯಗಳ ಪೈಕಿ ಏಳರಲ್ಲಿ ಗೆದ್ದು ಮೂರರಲ್ಲಿ ಡ್ರಾ ಮಾಡಿಕೊಂಡಿತು. ಇದರೊಂದಿಗೆ ಒಟ್ಟು 24 ಪಾಯಿಂಟ್ಸ್‌ ಗಳಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತ್ತು.

ಲಿಥುವೇನಿಯಾದ ನೆರಿಜಸ್‌ ವಲಸ್ಕಿಸ್‌ ಈ ತಂಡದ ಆಧಾರಸ್ಥಂಭವಾಗಿದ್ದಾರೆ. ಲೀಗ್‌ನಲ್ಲಿ ಒಟ್ಟು 13 ಗೋಲು ಗಳಿಸಿರುವ ಅವರು ಗೋವಾ ವಿರುದ್ಧವೂ ಗರ್ಜಿಸುವ ಹುಮ್ಮಸ್ಸಿನಲ್ಲಿದ್ದಾರೆ. ಆ್ಯಂಡ್ರೆ ಶೆಂಬ್ರಿ, ಅನಿರುದ್ಧ್‌ ಥಾಪಾ, ಎಲಿ ಸಬಿಯಾ ಮತ್ತು ರಫೆಲ್‌ ಕ್ರಿವೆಲ್ಲಾರೊ ಅವರೂ ಗೋವಾ ತಂಡದ ರಕ್ಷಣಾ ವಿಭಾಗಕ್ಕೆ ಸವಾಲಾಗಬಲ್ಲರು.

ಈ ಬಾರಿಯ ಲೀಗ್‌ನಲ್ಲಿ ಅಗ್ರಸ್ಥಾನದೊಂದಿಗೆ ನಾಲ್ಕರ ಘಟ್ಟಕ್ಕೆ ಅರ್ಹತೆ ಗಳಿಸಿರುವ ಗೋವಾ ಕೂಡಾ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಸತತ ಐದು ಪಂದ್ಯಗಳಲ್ಲಿ ಜಯಿಸಿರುವ ಈ ತಂಡ ವಿಶ್ವಾಸದ ಉತ್ತುಂಗದಲ್ಲಿದೆ.

ಮುಂಚೂಣಿ ವಿಭಾಗದಲ್ಲಿ ಈ ತಂಡ ಶಕ್ತಿಯುತವಾಗಿದೆ. ಫೆರಾನ್‌ ಕೊರೊಮಿನಸ್‌ ಮತ್ತು ಹ್ಯೂಗೊ ಬೌಮಸ್‌ ಅವರು ಕ್ರಮವಾಗಿ 14 ಮತ್ತು 11 ಗೋಲುಗಳನ್ನು ದಾಖಲಿಸಿದ್ದಾರೆ. ಜಾಕಿಚಂದ್‌ ಸಿಂಗ್‌ ಅವರ ಮೇಲೂ ಭರವಸೆ ಇಡಬಹುದಾಗಿದೆ. 

ಪಂದ್ಯದ ಆರಂಭ: ರಾತ್ರಿ 7.30.

ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು