ಸೋಮವಾರ, ಮೇ 17, 2021
23 °C
ಐದನೇ ಆವೃತ್ತಿಗೆ ತಂಡಗಳು ಸಜ್ಜು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಗೆಲುವು ಒಂದೇ ಮಂತ್ರ-ಯಶಸ್ಸಿಗೆ ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಐದನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಟೂರ್ನಿಗೆ ತಂಡಗಳು ಕೂಡ ಸಜ್ಜಾಗುತ್ತಿದ್ದು ಗೆಲುವಿನ ಮಂತ್ರ ಜಪಿಸಲು ಆರಂಭಿಸಿವೆ. ಪ್ರಶಸ್ತಿ ಎತ್ತಿ ಹಿಡಿಯುವ ತಂತ್ರಗಳಿಗೆ ಮೊರೆ ಹೋಗಿವೆ.

ನಗರದ ಹೋಟೆಲ್‌ ಜೆ.ಡಬ್ಲ್ಯು.ಮ್ಯಾರಿಯಟ್‌ನಲ್ಲಿ ಗುರುವಾರ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಮೂರು ತಂಡಗಳಾದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ), ಚೆನ್ನೈಯಿನ್ ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ಆಟಗಾರರು ಮತ್ತು ಕೋಚ್‌ಗಳು ಈ ವರ್ಷದ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು.

ಬಿಎಫ್‌ಸಿ ಕಳೆದ ಬಾರಿ ಚೊಚ್ಚಲ ಟೂರ್ನಿಯನ್ನು ಆಡಿತ್ತು. ಮೊದಲ ಯತ್ನದಲ್ಲೇ ಫೈನಲ್ ಪ್ರವೇಶಿಸಿ ಗಮನ ಸೆಳೆದಿತ್ತು. ಆದರೆ ಅಂತಿಮ ಹಣಾಹಣಿಯಲ್ಲಿ ಚೆನ್ನೈಯಿನ್ ಎಫ್‌ಸಿ ಎದುರು ಸೋತು ನಿರಾಸೆ ಅನುಭವಿಸಿತ್ತು.

ಆ ನೋವನ್ನು ಮರೆತು ಹೊಸ ಆವೃತ್ತಿಯಲ್ಲಿ ಹೊಸ ಯೋಜನೆಗಳೊಂದಿಗೆ ಕಣಕ್ಕೆ ಇಳಿಯಲು ತಂಡ ಸಜ್ಜಾಗಿದೆ. ಹೊಸ ಕೋಚ್‌ ಚಾರ್ಲ್ಸ್‌ ಕ್ವದ್ರತ್‌ ಈ ವಿಷಯವನ್ನು ಸ್ಪಷ್ಟಪಡಿಸಿದರು.

‘ಐಎಸ್‌ಎಲ್‌ನಲ್ಲಿ ಆಡುವ ಎಲ್ಲ ತಂಡಗಳೂ ಬಲಿಷ್ಠವಾಗಿವೆ. ಆದ್ದರಿಂದ ಪ್ರಬಲ ಸ್ಪರ್ಧೆ ಇರುವುದು ನಿಜ. ಆದರೆ ನಮ್ಮ ತಂಡದ ಆಟಗಾರರು ಯಾವುದೇ ಸವಾಲನ್ನು ಎದುರಿಸಲು ಸಜ್ಜಾಗಿದ್ದಾರೆ’ ಎಂದು ಕ್ವದ್ರತ್‌ ತಿಳಿಸಿದರು.

‘ಮೊದಲು ಆರಂಭದ ಕೆಲವು ಪಂದ್ಯಗಳನ್ನು ಗೆಲ್ಲುವುದು ನಮ್ಮ ಉದ್ದೇಶ. ಟೂರ್ನಿ ಮುಂದುವರಿದಂತೆ ಪರಿಸ್ಥಿತಿಗೆ ತಕ್ಕಂತೆ ತಂಡ ಆಡಲಿದೆ. ನಾವು ಈಗಲೇ ಫೈನಲ್‌ ಕನಸು ಕಂಡಿಲ್ಲ. ಸದ್ಯ ಲೀಗ್ ಹಂತದ ಪಂದ್ಯಗಳ ಮೇಲೆ ಗಮನ ಇರಿಸಿದ್ದೇವೆ’ ಎಂದು ಅವರು ವಿವರಿಸಿದರು.

ಗೋಲ್‌ ಕೀಪರ್‌ ಗುರುಪ್ರೀತ್‌ ಸಿಂಗ್ ಸಂಧು ಮಾತನಾಡಿ ‘ಕಳೆದ ವರ್ಷ ಫೈನಲ್‌ನಲ್ಲಿ ಸೋಲಿಸಿದ ತಂಡವೇ ಈ ಬಾರಿ ನಮ್ಮ ಮೊದಲ ಎದುರಾಳಿ. ಹೋದ ವರ್ಷದ ಸೋಲಿಗೆ ಸೇಡು ತೀರಿಸುವ ಇರಾದೆಯಿಂದ ನಾವು ಕಣಕ್ಕೆ ಇಳಿಯುವುದಿಲ್ಲ. ಇತರ ಪಂದ್ಯಗಳಂತೆ ನಮಗೆ ಈ ಪಂದ್ಯ ಕೂಡ’ ಎಂದರು.

‘ಕೆಲವು ಆಟಗಾರರು ಬೇರೆ ತಂಡಗಳಿಗೆ ತೆರಳಿದ್ದಾರೆ. ನಮ್ಮಲ್ಲಿಗೆ ಕೆಲವು ಹೊಸ ಆಟಗಾರರು ಬಂದಿದ್ದಾರೆ. ಹೊಸ ಆಟಗಾರರು ಆದಷ್ಟು ಶೀಘ್ರ ತಂಡ ವಾತಾವರಣಕ್ಕೆ ಹೊಂದಿಕೊಂಡು ಯಶಸ್ಸಿಗಾಗಿ ಶ್ರಮಿಸುವ ಭರವಸೆ ಇದೆ’ ಎಂದು ಧಿಮಾಸ್ ಡೆಲ್ಗಾಡೊ ಹೇಳಿದರು.

ಚೆನ್ನೈಯಿನ್ ಎಫ್‌ಸಿಯ ಜಾನ್ ಗ್ರೆಗರಿ, ಜೆಜೆ ಲಾಲ್‌ಪೆಖ್ಲುವಾ ಮತ್ತು ಇನಿಗೊ ಕಾಲ್ಡರನ್‌, ಕೇರಳ ಬ್ಲಾಸ್ಟರ್ಸ್ ಎಫ್‌ಸಿಯ ಡೇವಿಡ್ ಜೇಮ್ಸ್‌, ಅನಾಸ್ ಎಡತೋಡಿಕಾ ಮತ್ತು ಕರೇಜ್‌ ಪೆಕುಸನ್ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು