ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಮ್ಶೆಡ್‌ಪುರ ಎಫ್‌ಸಿ ಸೇರಿದ ಪೀಟರ್ ಹಾರ್ಟ್ಲಿ

ISL JFC Englishman Peter Hartley
Last Updated 6 ಸೆಪ್ಟೆಂಬರ್ 2020, 14:23 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಜೆಮ್ಶೆಡ್‌ಪುರ ಎಫ್‌ಸಿ ತಂಡದ ಫಾರ್ವರ್ಡ್ ವಿಭಾಗಕ್ಕೆ ಬಲ ತುಂಬಲು ಇಂಗ್ಲೆಂಡ್‌ನ ಪೀಟರ್ ಹಾರ್ಟ್ಲಿ ಬಂದಿದ್ದಾರೆ.

ಓವೆನ್ ಕೊಯ್ಲೆ ಕೋಚ್ ಆಗಿರುವ ಜೆಮ್ಶೆಡ್‌ಪುರ ಎಫ್‌ಸಿ ಮುಂದಿನ ಆವೃತ್ತಿಗೆ ಪೀಟರ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದು ಸ್ಕಾಟಿಷ್ ಪ್ರೀಮಿಯರ್‌ಷಿಪ್‌ನಲ್ಲಿ ಮದರ್‌ವೆಲ್ ಎಫ್‌ಸಿ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಬೆನ್ನಲ್ಲೇ ಐಎಸ್‌ಎಲ್‌ನಲ್ಲಿ ಆಡಲು ಅವಕಾಶ ಪಡೆದುಕೊಂಡಿದ್ದಾರೆ.

ಮದರ್‌ವೆಲ್ ಎಫ್‌ಸಿಯ ನಾಯಕತ್ವ ವಹಿಸಿದ್ದ ಪೀಟರ್ ಪ್ರಬಲ ತಂಡಗಳಾದ ಸೆಲ್ಟಿಕ್ ಮತ್ತು ರೇಂಜರ್ಸ್‌ನ ಸವಾಲನ್ನು ಮೆಟ್ಟಿನಿಂತು ತಂಡ ಮೂರನೇ ಸ್ಥಾನ ಗಳಿಸುವಂತೆ ಮಾಡಿದ್ದರು. 2007ರಲ್ಲಿ ಸೀನಿಯರ್ ವಿಭಾಗದಲ್ಲಿ ಆಡಲು ಆರಂಭಿಸಿದ ಪೀಟರ್ ಈ ವರೆಗೆ 418 ಪಂದ್ಯಗಳನ್ನು ಆಡಿದ್ದಾರೆ. 37 ಗೋಲು ಗಳಿಸಿದ್ದು 122 ಗೋಲುಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

’ಗೆಲುವಿಗಾಗಿ ಸದಾ ಹಾತೊರೆಯುತ್ತಿರುವ ಕ್ಲಬ್ ಜೆಮ್ಶೆಡ್‌ಪುರ ಎಫ್‌ಸಿ. ಇಂಥ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರುವುದು ಖುಷಿಯ ಸಂಗತಿ. ಓವೆನ್ ಕೊಯ್ಲೆ ಕೋಚ್ ಆಗಿರುವ ತಂಡದಲ್ಲಿ ಆಡಲು ಆಹ್ವಾನ ಬಂದಾಗ ಒಪ್ಪಿಕೊಳ್ಳಲು ಒಂದು ಕ್ಷಣವೂ ತಡ ಮಾಡಲಿಲ್ಲ. ಪ್ರತಿ ಪಂದ್ಯದಲ್ಲೂ ತಂಡದ ಗೆಲುವಿಗಾಗಿ ಮೇರೆ ಮೀರಿ ಪ್ರಯತ್ನಿಸುವೆ‘ ಎಂದು ಪೀಟರ್ ಹೇಳಿದ್ದಾರೆ.

ಸುದರ್ಲೆಂಡ್ ಎಎಫ್‌ಸಿ ಅಕಾಡೆಮಿಯಲ್ಲಿ ಬೆಳೆದ ಪೀಟರ್ ಎಡಗಾಲಿನಲ್ಲಿ ಪ್ರಾಬಲ್ಯ ಇರುವ ಆಟಗಾರ. 2000ನೇ ಇಸವಿಯಲ್ಲಿ, 12ನೇ ವಯಸ್ಸಿನಲ್ಲಿ ಸುದರ್ಲೆಂಡ್ ಯುವ ತಂಡದಲ್ಲಿ ಆಡಲು ಆರಂಭಿಸಿದ ಅವರು ವಿಶಿಷ್ಟ ಆಟದ ಶೈಲಿಯಿಂದಾಗಿ ಬೇಗನೇ ಉತ್ತಮ ಅವಕಾಶಗಳನ್ನು ಗಳಿಸಿಕೊಂಡರು.

ಇಂಗ್ಲಿಷ್ ಪ್ರೀಮಿಯರ್ ಲೀಗ್‌ನಲ್ಲೂ ಆಡಿದ ಅವರು ಲೇಸಸ್ಟರ್‌ ಸಿಟಿ ತಂಡದ ಎದುರು ಪದಾರ್ಪಣೆ ಪಂದ್ಯ ಆಡಿದ್ದರು.ಕೆಲವು ತಿಂಗಳು ಚೆಸ್ಟರ್‌ಫೀಲ್ಡ್ ಎಫ್‌ಸಿಯಲ್ಲಿದ್ದ ಅವರು 2009ರಲ್ಲಿ ಹರ್ಟಲ್‌ಪೂಲ್ ಎಫ್‌ಸಿ ಸೇರಿದರು. ಆ ತಂಡದಲ್ಲಿ ನಾಲ್ಕು ವರ್ಷ ಇದ್ದು ತಂಡದ ಪರವಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎನಿಸಿಕೊಂಡಿದ್ದರು. ಎರಡು ವರ್ಷ ತಂಡದ ನಾಯಕನೂ ಆಗಿದ್ದರು.

ಮದರ್‌ವೆಲ್ ಸೇರುವ ಮುನ್ನ ಅವರು ಸ್ಟೀವನೆಜ್, ಪ್ಲೈಮೌತ್ ಆರ್ಜೈಲ್, ಬ್ರಿಸ್ಟಲ್ ರೋವರ್ಸ್‌ ಮತ್ತು ಬ್ಲ್ಯಾಕ್‌ಪೂಲ್ ತಂಡಗಳಲ್ಲಿ ಕೆಲಕಾಲ ಆಡಿದ್ದರು. ಇಂಗ್ಲೆಂಡ್‌ನ ಎಫ್‌ಎ ಕಪ್, ಲೀಗ್ ಕಪ್‌ ಮುಂತಾದ ಟೂರ್ನಿಗಳಲ್ಲಿ ಆಡಿರುವ ಅವರು ಚೆಲ್ಸಿ, ಎವರ್ಟನ್, ಶೆಫೀಲ್ಡ್ ಯುನೈಟೆಡ್‌, ವಾಟ್‌ಫಾರ್ಡ್‌ ಮತ್ತು ವಿಗಾನ್ ಅಥ್ಲೆಟಿಕ್ಸ್ ಮುಂತಾದ ತಂಡಗಳ ವಿರುದ್ಧ ಆಡಿದ್ದಾರೆ.

’ಪೀಟರ್ ಹಾರ್ಟ್ಲಿ ತಂಡವನ್ನು ಸೇರಿರುವುದರಿಂದ ನಮ್ಮ ಶಕ್ತಿ ವೃದ್ಧಿಸಿದೆ. ಇಂಗ್ಲಿಷ್ ಲೀಗ್ ಮತ್ತು ಸ್ಕಾಟಿಷ್ ಲೀಗ್‌ಗಳಲ್ಲಿ ಆಡಿರುವ ಅವರು ಅಪಾರ ಅನುಭವ ಹೊಂದಿದ್ದಾರೆ’ ಎಂದು ಕೊಯ್ಲೆ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT