ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಯುವ ವರ್ಗಕ್ಕೆ ಬಾರದ ಅಚ್ಛೆ ದಿನ್

Last Updated 28 ಜನವರಿ 2018, 10:12 IST
ಅಕ್ಷರ ಗಾತ್ರ

ದಾವಣಗೆರೆ: ಗೌರವಧನಕ್ಕೆ ದುಡಿಯುವ ಅಂಗನವಾಡಿ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ ನಿಗದಿಗೊಳಿಸಬೇಕು ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಒತ್ತಾಯಿಸಿದರು. ಪಾಲಿಕೆ ಆವರಣದ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಭಾರತ ಕಮ್ಯುನಿಸ್ಟ್‌ ಪಕ್ಷದ 23ನೇ ಕರ್ನಾಟಕ ರಾಜ್ಯ ಸಮ್ಮೇಳನದಲ್ಲಿ ಶನಿವಾರ ‘ಕಾಯಕ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಅಂಗನವಾಡಿ ಕಾರ್ಯಕರ್ತೆಯರು ಹಲವಾರು ವರ್ಷಗಳಿಂದ ಗೌರವಧನ ದಲ್ಲೇ ಬದುಕುತ್ತಿದ್ದಾರೆ. ಅವರನ್ನು ಇದುವರೆಗೂ ಕಾರ್ಮಿಕರೆಂದು ಪರಿಗಣಿಸದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಪ್ರಧಾನಿ ಆಗುತ್ತಿದ್ದಂತೆ ಅಚ್ಛೆ ದಿನ್ ಬರುತ್ತವೆ ಎಂದು ನಂಬಿಸಲಾಗಿತ್ತು. ಅದರಂತೆ ಈ ದೇಶದ ದುಡಿಯುವ ವರ್ಗದ ಜನರಿಗೆ ಉತ್ತಮ ಸಂಬಳ ಸಿಗಬೇಕಾಗಿತ್ತು. ಆದರೆ, ಬಡವರು ಬಡವರಾಗಿಯೇ ಇದ್ದಾರೆ. ಶ್ರೀಮಂತರು ಮಾತ್ರ ಇನ್ನಷ್ಟು ಶ್ರೀಮಂತರಾಗಿದ್ದಾರೆ. ಶ್ರೀಮಂತರಿಗಷ್ಟೇ ಅಚ್ಚೇ ದಿನಗಳು ಬಂದಿವೆ ಎಂದು ಟೀಕಿಸಿದರು.

ಬಿಜೆಪಿ, ಆರ್‌ಎಸ್‌ಎಸ್‌ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಹಾಗಾಗಿಯೇ, ಅವುಗಳಿಗೆ ಸ್ವಾತಂತ್ರ್ಯದ ಅರ್ಥ ತಿಳಿದಿಲ್ಲ. ಧಾರ್ಮಿಕ ಮೂಲಭೂತವಾದಿ, ಮಾನವ ವಿರೋಧಿ ಕೋಮುವಾದದಲ್ಲಿ ಅವು ಮುಳುಗಿವೆ ಎಂದು ದೂರಿದರು.

ಸಿಪಿಐ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಸೈಯದ್‌ ಅಜೀಜ್‌ ಪಾಷಾ ಮಾತನಾಡಿ, ದೇಶದ ಸಂಪತ್ತಿನ ಸೃಷ್ಟಿಕರ್ತರಾದ ಶ್ರಮಜೀವಿಗಳ ಕೈಗೆ ರಾಜಕೀಯ ಅಧಿಕಾರ ಸಿಗಬೇಕು. ದೇಶದ ಏಕತೆ, ಸಮಗ್ರತೆ ಮತ್ತು ಕಟ್ಟಕಡೆಯ ಬಡವನನ್ನೂ ಒಳಗೊಂಡ ಪರಿಸರಸ್ನೇಹಿ ಅಭಿವೃದ್ಧಿ ನಮ್ಮ ಗುರಿಯಾಗಬೇಕು ಎಂದು ಹೇಳಿದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ್‌ ಮಾತನಾಡಿ, ‘ಮಹದಾಯಿ ನದಿ ನೀರಿನ ವಿಷಯದಲ್ಲಿ ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ರಾಜಕೀಯ ಪೈಪೋಟಿ ಕಂಡುಬರುತ್ತಿದ್ದು, ಈ ಸಮಸ್ಯೆಯ ಮೂಲ ಅಂಶವಾದ ಕರ್ನಾಟಕ ರಾಜ್ಯಕ್ಕೆ 7.5 ಟಿಎಂಸಿ ಅಡಿ  ಕುಡಿಯುವ ನೀರಿನ ತಾತ್ಕಾಲಿಕ ಬಳಕೆಗೆ ಅಡ್ಡಿಯಾಗುತ್ತಿದೆ’ ಎಂದು ಟೀಕಿಸಿದರು.

ಬಹಿರಂಗ ಸಮಾವೇಶಕ್ಕೂ ಮೊದಲು ಜಯದೇವ ವೃತ್ತದಿಂದ ಬೃಹತ್‌ ಮೆರವಣಿಗೆ ನಡೆಯಿತು. ಭಾರತೀಯ ಜನಕಲಾ ಸಮಿತಿ, ಇಷ್ಟಾ ತಂಡದ ಸದಸ್ಯರು ಜಾಗೃತಿ ಗೀತೆ ಹಾಡಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಂಡಳಿ ಸಹ ಕಾರ್ಯದರ್ಶಿ ಎಚ್‌.ಜಿ.ಉಮೇಶ್‌ ಸ್ವಾಗತಿಸಿದರು.

ಸಮಾವೇಶದಲ್ಲಿ ಎಐಟಿಯುಸಿ ರಾಜ್ಯ ಸಮಿತಿ ಅಧ್ಯಕ್ಷ ಎಚ್‌.ವಿ.ಅನಂತ ಸುಬ್ಬರಾವ್‌, ಜಿಲ್ಲಾ ಮಂಡಳಿ ಖಜಾಂಚಿ ಆನಂದರಾಜ್‌, ಸಹ ಕಾರ್ಯದರ್ಶಿ ಆವರಗೆರೆ ಚಂದ್ರು, ಸಿ‍ಪಿಐ ಮುಖಂಡರಾದ ಟಿ.ಎಸ್‌.ನಾಗರಾಜ್, ಆವರಗೆರೆ ವಾಸು, ಮಹಮ್ಮದ್‌ ಬಾಷಾ, ಗುಡಿಹಳ್ಳಿ ಹಾಲೇಶ್, ಟಿ.ಎಚ್‌.ನಾಗರಾಜ್, ಎ.ಜ್ಯೋತಿ, ಎಂ.ಬಿ.ಶಾರದಮ್ಮ, ಎಂ.ಜಯ್ಯಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT