ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನಗಳಿಗೆ ಚಕ್ರವ್ಯೂಹ ಈ ರಸ್ತೆ ವಿಭಜಕ

Last Updated 10 ಏಪ್ರಿಲ್ 2018, 19:42 IST
ಅಕ್ಷರ ಗಾತ್ರ

ಬೆಂಗಳೂರು: ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಮುಂಭಾಗದಲ್ಲಿ ಅಳವಡಿಸಿರುವ ರಸ್ತೆ ವಿಭಜಕಗಳಿಂದಾಗಿ ವಾಹನಗಳ ಸರಾಗ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಅಲ್ಲದೆ ಬಸ್‌ ಪ್ರಯಾಣಿಕರು ಪಡಿಪಾಟಲು ಪಡುತ್ತಿದ್ದಾರೆ.

ಮೆಟ್ರೊ ನಿಲ್ದಾಣದಿಂದ ಕೆ.ಆರ್‌.ಪುರದ ಕಡೆ ತೆರಳುವ ಬಸ್‌ಗಳಿಗಾಗಿ ಬಿಬಿಎಂಪಿಯ ಟ್ರಾಫಿಕ್‌ ಎಂಜಿನಿಯರಿಂಗ್‌ ಸೆಲ್‌ (ಟಿಇಸಿ) ಇಲ್ಲಿ ಪ್ರತ್ಯೇಕ ಬಸ್‌ ಪಥ ನಿರ್ಮಿಸಿದೆ. ಅದಕ್ಕಾಗಿ ಇರುವ ರಸ್ತೆಯಲ್ಲೇ ವಿಭಜಕಗಳನ್ನು ಅಳವಡಿಸಿದೆ. ಮೆಟ್ರೊ ನಿಲ್ದಾಣದ ಪ್ರವೇಶದ್ವಾರದ ಮುಂಭಾಗದಿಂದ ಆರಂಭವಾಗುವ ಈ ಪಥದಲ್ಲಿಯೇ ಮೆಟ್ರೊ ಫೀಡರ್‌ ಬಸ್‌ಗಳು ನಿಲ್ಲುತ್ತವೆ. ಹೆಚ್ಚು ಜನರು ಹತ್ತುವವರೆಗೂ ಈ ಬಸ್‌ಗಳು ಹೊರಡುವುದಿಲ್ಲ. ಇದರಿಂದ ಬೇರೆ ಬಸ್‌ಗಳು ಈ ಟ್ರ್ಯಾಕ್‌ನಲ್ಲಿ ಸಂಚರಿಸಲು ಆಗುತ್ತಿಲ್ಲ.

ಬಸ್‌ಗಾಗಿ ಬಿಸಿಲಲ್ಲಿ ಕಾಯಬೇಕು: ಸಂಪರ್ಕ ಸಾರಿಗೆಗಳಿಂದ ಟ್ರ್ಯಾಕ್‌ ಬಂದ್‌ ಆದಾಗ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳನ್ನು ಮುಖ್ಯರಸ್ತೆಯಲ್ಲೇ ನಿಲ್ಲಿಸಲಾಗುತ್ತಿದೆ. ಇಲ್ಲವೇ ಅವುಗಳನ್ನು ಸುದ್ದಗುಂಟೆಪಾಳ್ಯದ ತಿರುವಿನಲ್ಲಿರುವ ಸಿಗ್ನಲ್‌ನಲ್ಲಿ ನಿಲ್ಲಿಸಲಾಗುತ್ತಿದೆ. ಸುಸಜ್ಜಿತ ತಂಗುದಾಣಗಳಿದ್ದರೂ, ಜನರು ನಡುರಸ್ತೆಯಲ್ಲಿ ಬಿಸಿಲಲ್ಲಿ ನಿಂತು ಬಸ್‌ಗಾಗಿ ಕಾಯುವ ದುಸ್ಥಿತಿ ಬಂದಿದೆ. ಸಣ್ಣಪುಟ್ಟ ಅಪಘಾತಗಳು ಸಂಭವಿಸಿ ಕೆಲವರು ಗಾಯಗೊಂಡಿದ್ದಾರೆ.

ನಿಲ್ದಾಣದ ಮುಂಭಾಗದಲ್ಲಿ ಗರಿಷ್ಠ ಮೂರು ಫೀಡರ್‌ ಬಸ್‌ಗಳನ್ನು ನಿಲ್ಲಿಸಲು ಸ್ಥಳಾವಕಾಶವಿದೆ. ಆದರೆ, ಹೆಚ್ಚು ಪ್ರಯಾಣಿಕರ ನಿರೀಕ್ಷೆಯಲ್ಲಿ ಮೂರಕ್ಕಿಂತ ಹೆಚ್ಚು ಬಸ್‌ಗಳು ನಿಂತಾಗ, ಮೆಟ್ರೊ ನಿಲ್ದಾಣದ ಪಾರ್ಕಿಂಗ್‌ನ ಪ್ರವೇಶ ದ್ವಾರ ಮತ್ತು ಹೊರಬರುವ ದ್ವಾರಗಳು ಬಂದ್‌ ಆಗುತ್ತವೆ. ಹಾಗಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಇದಲ್ಲದೆ, ಇಲ್ಲಿ ಆಟೊಗಳನ್ನು ಯದ್ವಾತದ್ವಾ ಆಗಿ ನಿಲ್ಲಿಸುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ. 

‘ಈ ಬಸ್‌ ಪಥ ಅವೈಜ್ಞಾನಿಕ. ತಂಗುದಾಣಕ್ಕೆ ಬಿಎಂಟಿಸಿ ಬಸ್‌ಗಳು ಸರಾಗವಾಗಿ ಬಂದು ಹೋಗಲು ಈ ವಿಭಜಕವನ್ನು  ತೆರವುಗೊಳಿಸಬೇಕು’ ಎಂದು ಇಂದಿರಾನಗರ ನಿವಾಸಿ ಸಿ.ಎಂ.ವೆಂಕಟಸ್ವಾಮಿ ಒತ್ತಾಯಿಸಿದರು.

ನೋ–ಪಾರ್ಕಿಂಗ್‌ ಫಲಕ ಬೇಕು: ‘ಫೀಡರ್‌ ಬಸ್‌ಗಳು ನಿಲ್ಲುವ ಜಾಗದಲ್ಲೇ ಖಾಸಗಿ ವಾಹನಗಳನ್ನು ನಿಲ್ಲಿಸುತ್ತಾರೆ. ಮುಂದಕ್ಕೆ ಹೋಗುವಂತೆ ತಿಳಿಸಿದರೆ, ಅದರ ಸಿಬ್ಬಂದಿ ನಮ್ಮ ಜತೆಗೆ ಜಗಳಕ್ಕೆ ಇಳಿಯುತ್ತಾರೆ. ಇಲ್ಲಿ ನೋ–ಪಾರ್ಕಿಂಗ್‌ ಫಲಕಗಳನ್ನು ಅಳವಡಿಸಬೇಕು’ ಎಂದು ಹೆಸರು ಹೇಳಲು ಇಚ್ಚಿಸದ ಬಿಎಂಟಿಸಿ ಸಿಬ್ಬಂದಿಯೊಬ್ಬರು ತಿಳಿಸಿದರು.

ಸುದ್ದಗುಂಟೆಪಾಳ್ಯದ ಸಿಗ್ನಲ್‌ನಿಂದ ಮೆಟ್ರೊ ನಿಲ್ದಾಣದವರೆಗಿನ ಪಾದಚಾರಿ ಮಾರ್ಗದಲ್ಲಿ ಹೊಸ ಅಂಗಡಿಗಳು ತಲೆ ಎತ್ತುತ್ತಿವೆ. ಇದರಿಂದ ವಿಶಾಲವಾಗಿದ್ದ ಪಾದಚಾರಿ ಮಾರ್ಗ ಕಿರಿದಾಗಿದೆ. ಜನರ ಓಡಾಟಕ್ಕೆ ಅನನುಕೂಲವಾಗುತ್ತಿದೆ.

‘ಇಲ್ಲಿನ ಪಾದಚಾರಿ ಮಾರ್ಗದ ಮೇಲೆ ಬೈಕ್‌ ಮತ್ತು ಆಟೋಗಳು ಹತ್ತದಂತೆ ತಡೆಯಲು ಕಂಬಗಳನ್ನು ಅಳವಡಿಸಬೇಕು’ ಎಂದು ನಾಗವಾರಪಾಳ್ಯದ ನಿವಾಸಿ ಸುದರ್ಶನ್‌ ಸಲಹೆ ನೀಡಿದರು.

‘ಟ್ರ್ಯಾಕ್‌ ಮರುವಿನ್ಯಾಸದ ಚರ್ಚೆ ನಡೆದಿದೆ’

‘ಸಂಚಾರ ಪೊಲೀಸರ ಸಲಹೆ ಹಾಗೂ ಸೂಚನೆ ಮೇರೆಗೆ ರಸ್ತೆ ವಿಭಜಕವನ್ನು ನಿರ್ಮಿಸಿದ್ದೇವೆ. ಅವರು ಸೂಚನೆ ನೀಡಿದರೆ ತೆರವುಗೊಳಿಸಲು ಸಿದ್ಧರಿದ್ದೇವೆ’ ಎಂದು ಟಿಇಸಿ ವಿಭಾಗದ ಹೆಸರು ಹೇಳಲು ಇಚ್ಛಿಸದ ಎಂಜಿನಿಯರ್‌ ತಿಳಿಸಿದರು.

‘ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಮಾತ್ರ ಮೆಟ್ರೊ ನಿಲ್ದಾಣ ಮುಂಭಾಗದಲ್ಲಿ ಸಂಚಾರ ದಟ್ಟಣೆ ಇರುತ್ತದೆ. ಬಸ್‌ಟ್ರ್ಯಾಕ್‌ನಿಂದ ಆಗುತ್ತಿರುವ ತೊಂದರೆಗಳನ್ನು ಪರಿಹರಿಸಲು ಟ್ರ್ಯಾಕ್‌ ಮರುವಿನ್ಯಾಸ ಮಾಡುವ ಚರ್ಚೆ ನಡೆದಿದೆ’ ಎಂದು ಇಂದಿರಾನಗರ ಸಂಚಾರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT