ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತಿಮೀರಿದ ಪ್ಲಾಸ್ಟಿಕ್‌ ಬ್ಯಾಗ್‌ ಬಳಕೆ

ಕಡಿವಾಣ ಹಾಕಲು ವರ್ತಕರು ಹಾಗೂ ಗ್ರಾಹಕ ಅಸಹಕಾರ
Last Updated 5 ಜೂನ್ 2018, 11:07 IST
ಅಕ್ಷರ ಗಾತ್ರ

ಮಂಡ್ಯ: ಪ್ಲಾಸ್ಟಿಕ್‌ ಬ್ಯಾಗ್‌ ನಿಷೇಧವಿದ್ದರೂ ನಗರದಲ್ಲಿ ವ್ಯಾಪಾರಿಗಳು ಹಾಗೂ ಗ್ರಾಹಕರು ಮಿತಿಮೀರಿ ಬಳಕೆ ಮಾಡುತ್ತಿದ್ದಾರೆ. ಇದರ ಮೇಲಿನ ಅವಲಂಬನೆ ದಿನೇ ದಿನೇ ಹೆಚ್ಚುತ್ತಿದ್ದು ಪರಿಸರ ಮಾಲಿನ್ಯ, ಅನಾರೋಗ್ಯ ಸಮಸ್ಯೆಗಳು ಹೆಚ್ಚಳವಾಗುತ್ತಿವೆ.

ಮಂಗಳವಾರ ವಿಶ್ವ ಪರಿಸರ ದಿನ. ‘ಪ್ಲಾಸ್ಟಿಕ್‌ ಮಾಲಿನ್ಯ ತಡೆಗಟ್ಟಿ’ ಈ ಬಾರಿ ದಿನಾಚರಣೆಯ ಘೋಷಣೆ. 20 ಮೈಕ್ರಾನ್‌ಗಿಂತ ಕಡಿಮೆ ಪ್ಲಾಸ್ಟಿಕ್‌ ಬಳಸಿ ಉತ್ಪಾದಿಸಿದ ಕೈಚೀಲಗಳ ಬಳಕೆಯನ್ನು ಸರ್ಕಾರ ನಿಷೇಧಿಸಿದೆ. ಆದರೆ ಸ್ಥಳೀಯ ಆಡಳಿತಗಳು ಆದೇಶ ಪಾಲನೆಯಲ್ಲಿ ನಿರ್ಲಕ್ಷ್ಯ ವಹಿಸಿರುವ ಕಾರಣ ಬೀದಿಬೀದಿಗಳು ಪ್ಲಾಸ್ಟಿಕ್‌ ಕಣವಾಗಿ ಮಾರ್ಪಟ್ಟಿವೆ.

ಸಣ್ಣ ಚಿಲ್ಲರೆ ಅಂಗಡಿಯಿಂದ ದೊಡ್ಡ ಮಾರುಕಟ್ಟೆ ಗಳವರೆಗೆ ಯಾವುದೇ ಅಡೆತಡೆ ಇಲ್ಲದೆ ಪ್ಲಾಸ್ಟಿಕ್‌ ಬಳಕೆ ನಡೆಯುತ್ತಿದೆ. ಹಲವು ಮೆಡಿಕಲ್‌ ಸ್ಟೋರ್‌ಗಳಲ್ಲಿ ಔಷಧಗಳನ್ನೂ ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಹಾಕಿ ಕೊಡುತ್ತಿದ್ದಾರೆ. ಜನರೂ ಕೂಡ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದು, ಶಾಶ್ವತ ಬಳಕೆಯ ಬಟ್ಟೆ ಬ್ಯಾಗ್‌ ಹಿಡಿದುಕೊಂಡು ಅಂಗಡಿಗೆ ಬರುವ ಅಭ್ಯಾಸ ಬೆಳೆಸಿಕೊಂಡಿಲ್ಲ. ಪ್ಲಾಸ್ಟಿಕ್‌ ನಿಷೇಧ ಆದೇಶ ಘೋಷಣೆಯಾದಾಗ ಮಾತ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರಸಭೆ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್‌ ಬ್ಯಾಗ್‌ ಜಪ್ತಿ ಮಾಡಿ, ದಂಡ ವಿಧಿಸುತ್ತಿದ್ದರು. ಆದರೆ ಕ್ರಮೇಣ ಎಲ್ಲವೂ ನಿಂತು ಹೋಗಿವೆ. ಪ್ಲಾಸ್ಟಿಕ್‌ ಬಳಕೆ ಎಗ್ಗಿಲ್ಲದೇ ನಡೆಯುತ್ತಿದೆ.

‘ಬ್ಯಾಗ್‌ ಕೊಡಲಿಲ್ಲ ಎಂದರೆ ಜನರು ವಸ್ತುಗಳನ್ನೇ ಕೊಳ್ಳುವುದಿಲ್ಲ. ಪ್ಲಾಸ್ಟಿಕ್‌ ಬ್ಯಾಗ್‌ ಕೊಡಬಾರದು ಎಂದಕೊಂಡರೆ ನಮಗೆ ವ್ಯಾಪಾರ ನಷ್ಟವಾಗುತ್ತದೆ. ಅನಿವಾರ್ಯವಾಗಿ ಅದನ್ನು ಬಳಸುತ್ತಿದ್ದೇವೆ. ಮಂಡ್ಯದಲ್ಲಿ ಸಿಗದಿದ್ದರೆ ಬೇರೆ ಊರುಗಳಿಂದ ಹೆಚ್ಚಿಗೆ ದರ ಕೊಟ್ಟು ತಂದು ಬಳಸುತ್ತಿದ್ದೇವೆ’ ಎಂದು ಹಣ್ಣಿನ ವ್ಯಾಪಾರಿ ಮೊಹಮ್ಮದ್‌ ತೌಫೀಕ್‌ ಹೇಳಿದರು.

‘ಪ್ಲಾಸ್ಟಿಕ್‌ ಬ್ಯಾಗ್‌ ಉತ್ಪಾದನೆ ಮೇಲೆ ಸಂಪೂರ್ಣ ಕಡಿವಾಣ ಹಾಕಿದ್ದೇವೆ. ಆದರೆ ವರ್ತಕರು ಹೊರಗಿನಿಂದ ತರಿಸುತ್ತಿರುವ ಮಾಹಿತಿ ಇದೆ. ನಗರ ಸಭೆ ಅಧಿಕಾರಿಗಳ ಜೊತೆಯೂ ದಾಳಿ ಮಾಡುತ್ತಿದ್ದೇವೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಸವಿತಾ ಹೇಳಿದರು.

‘ಪ್ಲಾಸ್ಟಿಕ್‌ ಬ್ಯಾಗ್‌ ಬಳಸದಂತೆ ಅರಿವು ಮೂಡಿಸಲು ಜೂನ್‌ 5ರಿಂದ ಸಪ್ತಾಹ ಆಚರಣೆ ಮಾಡುತ್ತಿದ್ದೇವೆ. ವಾರಪೂರ್ತಿ ವರ್ತಕರಿಗೆ ಅರಿವು ಮೂಡಿಸುತ್ತೇವೆ. ನಂತರವೂ ಬಳಸಿದರೆ ಪೊಲೀಸರ ನೆರವಿನೊಂದಿಗೆ ಜಪ್ತಿ ಮಾಡುತ್ತೇವೆ. ನಂತರ ಹೆಚ್ಚು ದಂಡ ವಿಧಿಸುತ್ತೇವೆ. ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳುತ್ತೇವೆ’ ಎಂದು ನಗರಸಭೆ ಪೌರಾಯುಕ್ತ ಮಾಯಣ್ಣಗೌಡ ಹೇಳಿದರು.

ಬಾಟಲ್‌ ಬಳಸುವಾಗ ಎಚ್ಚರಿಕೆ ಅಗತ್ಯ

ಪ್ಲಾಸ್ಟಿಕ್‌ ಬಾಟಲ್‌ಗಳನ್ನು ಮರು ಬಳಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಎಲ್ಲ ಪ್ಲಾಸ್ಟಿಕ್‌ ಬಾಟಲ್‌ಗಳ ಬುಡದಲ್ಲಿ ಅದರ ಗುಣಮಟ್ಟದ ಬಗ್ಗೆ ಸಂಕೇತಾಕ್ಷರಗಳನ್ನು ನೀಡಲಾಗಿರುತ್ತದೆ. ಪಿಇಟಿ, ಪಿಇಟಿಇ ಎಂಬ ಅಕ್ಷರಗಳು ಕಂಡುಬಂದರೆ ಅಂತಹವನ್ನು ಮರು ಬಳಸಕೂಡದು. ಅವುಗಳಲ್ಲಿ ವಿಷಕಾರಕ ರಾಸಾಯನಿಕಗಳಿರುತ್ತವೆ. ಪ್ಲಾಸ್ಟಿಕ್‌ ಮಗ್‌ಗಳಲ್ಲಿ ಪಿಎಸ್‌ ಎಂಬ ಸಂಕೇತಾಕ್ಷರ ಇದ್ದಾಗಲೂ ಅವುಗಳನ್ನು ಬಳಸಬಾರದು. ಅದರಲ್ಲಿ ಅಪಾಯಕಾರಿ ಕಾರ್ಸಿನೋಜೆನಿಕ್‌ ಅಂಶಗಳು ಬಿಡುಗಡೆಯಾಗುತ್ತವೆ. ಆದರೆ ಪಿಪಿ, ಎಚ್‌ಡಿಪಿಇ, ಎಲ್‌ಡಿಪಿ ಎಂಬ ಸಂಕೇತಾಕ್ಷರವುಳ್ಳ ಬಾಟಲ್‌ಗಳನ್ನು ಬಳಸಿದರೆ ಯಾವುದೇ ಅಪಾಯ ಇಲ್ಲ. ಇವುಗಳನ್ನು ಔಷಧ ತಯಾರಿಕಾ ಕಂಪನಿಗಳು ಬಳಸುತ್ತವೆ. ಸಿರಪ್‌, ಟಾನಿಕ್‌ಗಳಿಗೆ ಈ ಪ್ಲಾಸ್ಟಿಕ್‌ ಬಾಟಲ್‌ ಬಳಸಲಾಗುತ್ತದೆ.

ಆರೋಗ್ಯಕ್ಕೆ ಹಾನಿಕರ

ಪ್ಲಾಸ್ಟಿಕ್‌ನಲ್ಲಿ ವಿಷಯುಕ್ತ ರಾಸಾಯನಿಕ ಇರುವ ಕಾರಣ ಪ್ಲಾಸ್ಟಿಕ್‌ನಿಂದ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ದಿನನಿತ್ಯ ಬಳಸುವ ಪ್ಲಾಸ್ಟಿಕ್‌ ಲೋಟ, ತಟ್ಟೆ, ಪ್ಲಾಸ್ಟಿಕ್‌ ಭಿತ್ತಿ ಪತ್ರಗಳು, ತೋರಣ, ಬಾವುಟಗಳಲ್ಲಿರುವ ಅನಿಲ ಪರಿಸರದೊಂದಿಗೆ ಸೇರಿ ಗಾಳಿ ವಿಷಯುಕ್ತವಾಗುತ್ತದೆ. ಇದರಿಂದ ಸಂತಾನೋತ್ಪತ್ತಿ ಶಕ್ತಿ ಕುಂಠಿತ, ಅಸ್ತಮಾ, ಥೈರೈಡ್, ಹೃದಯ ರೋಗ, ಕ್ಯಾನ್ಸರ್‌ ರೋಗಕ್ಕೆ ತುತ್ತಾಗುವ ಅಪಾಯವಿದೆ ಎಂದು ವೈದ್ಯರು ಹೇಳುತ್ತಾರೆ.

ಪ್ರಾಣಿಗಳ ಆರೋಗ್ಯದ ಮೇಲೂ ಪ್ಲಾಸ್ಟಿಕ್‌ ಅಪಾರ ಸಮಸ್ಯೆ ಸೃಷ್ಟಿಸಿದೆ. ಆಹಾರ ಪದಾರ್ಥವನ್ನು ಪ್ಲಾಸ್ಟಿಕ್‌ ಬ್ಯಾಗ್‌ಗೆ ತುಂಬಿ ಬಿಸಾಡುವ ಕಾರಣ ಪ್ರಾಣಿಗಳು ಆಹಾರವನ್ನು ಪ್ಲಾಸ್ಟಿಕ್‌ ಸಮೇತ ತಿನ್ನುತ್ತಿವೆ. ಪ್ಲಾಸ್ಟಿಕ್‌ ಹೊಟ್ಟೆಯಲ್ಲಿ ಕರಗುವುದಿಲ್ಲ, ಇದರಿಂದ ಪ್ರಾಣಿಗಳ ಕರುಳಿಗೆ ಸಮಸ್ಯೆಯಾಗುತ್ತಿದೆ.  ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಬಿಸಾಡುವ ಬದಲು ಗುಂಡಿ ತೆಗೆದು ಹೂಳಬೇಕು ಎಂದು ತಜ್ಞರು ಹೇಳುತ್ತಾರೆ.

ಅಭಿಪ್ರಾಯಗಳು

ಜನಜಾಗೃತಿ ಅವಶ್ಯ

ಪ್ಲಾಸ್ಟಿಕ್‌ ಬಳಸದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪ್ಲಾಸ್ಟಿಕ್‌ ಬ್ಯಾಗ್‌ ಬಳಕೆಯಿಂದ ಆಗುವ ಅನಾಹುತಗಳನ್ನು ಜನರಿಗೆ ತಿಳಿಸುವಂತಹ ಕಾರ್ಯಗಾರಗಳನ್ನು ಏರ್ಪಡಿಸಿ ಅರಿವು ಮೂಡಿಸಬೇಕು. ಸದಾ ಜೊತೆಯಲ್ಲೊಂದು ಬ್ಯಾಗ್‌ ಇಟ್ಟುಕೊಳ್ಳುವಂತಹ ಅಭ್ಯಾಸವನ್ನು ಜನರು ರೂಢಿಸಿಕೊಳ್ಳಬೇಕು. ಸರ್ಕಾರ ಮಾತ್ರವಲ್ಲದೇ ಹಲವು ಸಂಘ–ಸಂಸ್ಥೆಗಳು ಕೂಡ ಇವುಗಳ ಬಗ್ಗೆ ಅರಿವು ಕಾರ್ಯಕ್ರಮ ಆಯೋಜನೆ ಮಾಡಬೇಕು
ರಾಮಲಿಂಗಯ್ಯ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರು

ವರ್ತಕರ ಅಸಹಕಾರ

ವರ್ತಕರು ಕಡ್ಡಾಯವಾಗಿ ಪ್ಲಾಸ್ಟಿಕ್‌ ಬ್ಯಾಗ್‌ ನೀಡಲು ನಿರಾಕರಿಸಿದರೆ ಮುಂದೆ ಗ್ರಾಹಕರು ಜೊತೆಯಲ್ಲಿ ಬ್ಯಾಗ್‌ ಇಟ್ಟುಕೊಂಡು ಬರುತ್ತಾರೆ. ಅಧಿಕಾರಿಗಳು ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅತಿ ಹೆಚ್ಚು ದಂಡ ವಿಧಿಸಬೇಕು. ಆ ಮೂಲಕವಾದರೂ ಅಪಾಯಕಾರಿ ಪ್ಲಾಸ್ಟಿಕ್‌ ಬ್ಯಾಗ್‌ಗಳ ಹಾವಳಿ ತಡೆಗಟ್ಟಬಹುದು
–ಎಂ.ಪಿ.ಮಹೇಂದ್ರಬಾಬು, ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಅಧ್ಯಕ್ಷರು

ಪ್ಲಾಸ್ಟಿಕ್‌ ಕ್ಯಾನ್ಸರ್‌ಕಾರಕ

ಪ್ಲಾಸ್ಟಿಕ್‌ 600 ವರ್ಷಗಳವರೆಗೂ ಮಣ್ಣಾಗದೇ ಉಳಿದುಬಿಡುತ್ತದೆ. ಕುಡಿಯುವ ನೀರಿನಲ್ಲೂ ಬೆರೆತುಹೋಗುವ ಅಪಾಯವಿರುತ್ತದೆ. ತಾಜಾ ಪ್ಲಾಸ್ಟಿಕ್‌ನಿಂದ ಹೆಚ್ಚು ಅಪಾಯವಿಲ್ಲ. ಆದರೆ ಅದಕ್ಕೆ ಬಣ್ಣಗೂಡಿಸಿದರೆ ಅತಿ ಹೆಚ್ಚು ಅಪಾಯ ಉಂಟು ಮಾಡುತ್ತದೆ. ಬಣ್ಣಗಳಲ್ಲಿ ಬಳಸುವ ರಾಸಾಯನಿಕಗಳು ಕ್ಯಾನ್ಸರ್‌ಕಾರಕ ಅಂಶಗಳಾಗಿವೆ. ಬೆಂಕಿ ಹಚ್ಚಿ ಸುಡುವುದರಿಂದ ಗಾಳಿ ಮಲಿನವಾಗುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ
ಡಾ.ಹರೀಶ್‌, ತಜ್ಞ ವೈದ್ಯರು. ಮಿಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT