ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊನಾಲ್ಡೊ ಎರಡು ಗೋಲು: ಪ್ರಶಸ್ತಿ ಸನಿಹ ಯುವೆಂಟಸ್‌

Last Updated 21 ಜುಲೈ 2020, 12:33 IST
ಅಕ್ಷರ ಗಾತ್ರ

ಟುರಿನ್‌, ಇಟಲಿ: ಪಂದ್ಯದ ದ್ವಿತೀಯಾರ್ಧದ ಅವಧಿಯ ಮೂರು ನಿಮಿಷಗಳ ಅಂತರದಲ್ಲಿ ಪೋರ್ಚುಗಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮೋಡಿ ಮಾಡಿದರು. ಅವರು ಗಳಿಸಿದ ಎರಡು ಗೋಲುಗಳ ಬಲದಿಂದ ಯುವೆಂಟಸ್‌ ತಂಡವು ಸೋಮವಾರ ರಾತ್ರಿ 2–1ರಿಂದ ಲಾಜಿಯೊ ತಂಡವನ್ನು ಮಣಿಸಿತು. ಇದರೊಂದಿಗೆ ಸೀರಿ ‘ಎ’ ಫುಟ್‌ಬಾಲ್‌ ಟೂರ್ನಿಯಲ್ಲಿ ಯುವೆಂಟಸ್‌, ಸತತ ಒಂಬತ್ತನೇ ಬಾರಿ ಪ್ರಶಸ್ತಿ ಗೆಲ್ಲುವತ್ತ ದಾಪುಗಾಲಿಟ್ಟಿದೆ.

ಟೂರ್ನಿಯಲ್ಲಿ ಇನ್ನೂ ನಾಲ್ಕು ಸುತ್ತುಗಳು ಬಾಕಿ ಇವೆ. ಪಾಯಿಂಟ್ಸ್‍ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿರುವ ಯುವೆಂಟಸ್‌, ಇಂಟರ್‌ ಮಿಲಾನ್‌ಗಿಂತ ಎಂಟು ಹಾಗೂ ಅಟ್ಲಾಂಟಾ ತಂಡಕ್ಕಿಂತ ಒಂಬತ್ತು ಪಾಯಿಂಟ್ಸ್‌ ಮುಂದಿದೆ. ಪಟ್ಟಿಯಲ್ಲಿ ಲಾಜಿಯೊ ತಂಡ ನಾಲ್ಕನೇ ಸ್ಥಾನದಲ್ಲಿದ್ದು, ಯುವೆಂಟಸ್‌ಗಿಂತ 11 ಪಾಯಿಂಟ್ಸ್‌ ಹಿಂದೆ ಇದೆ.

ಪಂದ್ಯದ 51ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ರೊನಾಲ್ಡೊ ತಂಡದ ಗೋಲಿನ ಖಾತೆ ತೆರೆದರು. ಮೂರು ನಿಮಿಷಗಳ ಬಳಿಕ ಪಾಲೊ ಡಿಬಾಲ ನೀಡಿದ ಪಾಸ್‌ನಲ್ಲಿ ಸೊಗಸಾದ ಫೀಲ್ಡ್ ಗೋಲು ದಾಖಲಿಸಿ ಯುವೆಂಟಸ್‌ ತಂಡದಲ್ಲಿ ಸಂಭ್ರಮ ಉಕ್ಕುವಂತೆ ಮಾಡಿದರು.

ಲಾಜಿಯೊ ಪರ ಸಿರೊ ಇಮ್ಮೊಬಿಲ್‌ 83ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಕಾಲ್ಚಳಕ ತೋರಿದರು.

ರೊನಾಲ್ಡೊ ಅವರು ಸೀರಿ ’ಎ‘ (51), ಸ್ಪ್ಯಾನಿಷ್‌ ಲೀಗ್ (311)‌ ಹಾಗೂ ಪ್ರೀಮಿಯರ್‌ ಲೀಗ್‌ಗಳಲ್ಲಿ (84) ಕನಿಷ್ಠ 50 ಗೋಲು ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು.

ಹೋದ ವರ್ಷದ ಡಿಸೆಂಬರ್‌ನಲ್ಲಿ ಸೀರಿ ‘ಎ’ ಹಾಗೂ ಇಟಾಲಿಯನ್‌ ಸೂಪರ್‌ ಕಪ್‌ ಟೂರ್ನಿಯಲ್ಲಿ ಯುವೆಂಟಸ್‌ ಎರಡು ಬಾರಿ ಲಾಜಿಯೊ ತಂಡಕ್ಕೆ ಮಣಿದಿತ್ತು. ಕೋವಿಡ್‌ ಪಿಡುಗಿನ ಬಳಿಕ ಪಂದ್ಯಗಳು ಶುರು ಆದಾಗಿನಿಂದ ಮೂರು ಬಾರಿ ಲಾಜಿಯೊ ತಂಡವನ್ನು ಮಣಿಸುವ ಮೂಲಕ ಮುಯ್ಯಿ ತೀರಿಸಿಕೊಂಡಂತಾಗಿದೆ.

’ದಾಖಲೆಗಳು ಯಾವಾಗಲೂ ಮುಖ್ಯ. ಆದರೆ ಅದಕ್ಕಿಂತಲೂ ತಂಡದ ಗೆಲುವು ಅತ್ಯಂತ ಮಹತ್ವದ್ದು‘ ಎಂದು ಪಂದ್ಯದ ನಂತರ ರೊನಾಲ್ಡೊ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT