ಕೋಲ್ಕತ್ತ: ಟೈಬ್ರೇಕರ್‌ನಲ್ಲಿ ಗೋಲ್‌ಕೀಪರ್ ವಿಶಾಲ್ ಕೈತ್ ಅವರ ಎರಡು ಅಮೋಘ ತಡೆಗಳಿಂದ ಹಾಲಿ ಚಾಂಪಿಯನ್ ಮೋಹನ್ ಬಾಗನ್ ತಂಡ ಡುರಾಂಡ್ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಮಂಗಳವಾರ ಬೆಂಗಳೂರು ಎಫ್‌ಸಿ ವಿರುದ್ಧ 4–3 ಗೋಲುಗಳಿಂದ (ನಿಗದಿ ಅವಧಿ 2–2) ಜಯಗಳಿಸಿತು.
ಕೋಲ್ಕತ್ತದ ತಂಡ ಶನಿವಾರ (ಆ. 31) ನಡೆಯುವ ಫೈನಲ್‌ನಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ತಂಡವನ್ನು ಎದುರಿಸಲಿದೆ. ಈಸ್ಟ್ ಬೆಂಗಾಲ್ ಫೈನಲ್ ತಲುಪುತ್ತಿರುವುದು ಇದು 30ನೇ ಸಲ. 17 ಸಲ ಆ ತಂಡ ಚಾಂಪಿಯನ್ ಕಿರೀಟ ಧರಿಸಿದೆ.
ಟೈಬ್ರೇಕರ್‌ನಲ್ಲಿ ಕೋಲ್ಕತ್ತದ ತಂಡ 0–2 ಗೋಲುಗಳಿಂದ ಹಿಂದಿತ್ತು. ಈ ಹಂತದಲ್ಲಿ ಕೈತ್, ಬಿಎಫ್‌ಸಿಯ ಹಾಲಿಚರಣ್ ನಾರ್ಜರಿ ಮತ್ತು ಅಲೆಕ್ಸಾಂಡರ್ ಜೊವಾವಿಕ್ ಅವರ ಎರಡು ಗೋಲು ಯತ್ನಗಳನ್ನು ತಡೆದು ತಂಡ ಅಮೋಘ ರೀತಿಯಲ್ಲಿ ಗೆಲ್ಲಲು ನೆರವಾದರು. ಕಳೆದ ವಾರ ಪಂಜಾಬ್ ಎಫ್‌ಸಿ ವಿರುದ್ಧ ಗೆಲುವಿನಲ್ಲೂ ಕೈತ್ ಅವರ ಪಾಲು ಇತ್ತು.
ಜಾನ್ ಕುಮಿಂಗ್ಸ್, ಮನ್ವೀರ್ ಸಿಂಗ್, ಲಿಸ್ಟನ್ ಕೊಲಾಕೊ ಮತ್ತು ದಿಮಿತ್ರಿ ಪೆಟ್ರಾಟೊಸ್ ಅವರು ಟೈಬ್ರೇಕರ್‌ನಲ್ಲಿ ಬಾಗನ್ ಪರ ಗೋಲು ಗಳಿಸಿದರು. ನಾಯಕ ಸುಬಾಷಿಸ್ ಬೋಸ್ ಅವರು 30ನೇ ನಿಮಿಷ ಗಾಯಾಳಾಗಿ ಹೊರಹೋದ ಕಾರಣ ಪೆಟ್ರಾಟೋಸ್ ಉಳಿದ ಅವಧಿಗೆ ತಂಡವನ್ನು ಮುನ್ನಡೆಸಿದರು.
ಬೆಂಗಳೂರು ಎಫ್‌ಸಿ ತಂಡದ ಗೋಲುಗಳು ಎಡ್ಗರ್ ಮೆಂಡೆಝ್, ರಾಹುಲ್ ಬೆಕೆ ಮತ್ತು ಪೆಡ್ರೊ ಕಾಪೊ ಮೂಲಕ ಬಂದವು.
ನಿಗದಿ ಅವಧಿಯ ಆಟದಲ್ಲಿ ಬಿಎಫ್‌ಸಿಯ ದಿಗ್ಗಜ ಆಟಗಾರ ಸುನೀಲ್ ಚೆಟ್ರಿ 42ನೇ ನಿಮಿಷ ಗೋಲು ಗಳಿಸಿದರೆ, ವಿನಿತ್ ವೆಂಕಟೇಶ್ 50ನೇ ನಿಮಿಷ ಮುನ್ನಡೆ ಹೆಚ್ಚಿಸಿದರು.
ಬಾಗನ್ ಸ್ಫೂರ್ತಿಯುತವಾಗಿ ಆಡಿ ಚೇತರಿಸಿಕೊಂಡಿತು. ದಿಮಿತ್ರಿ ಪೆಟ್ರಾಟೊಸ್ 68ನೇ ನಿಮಿಷ ಮೊದಲ ಗೋಲು ಹೊಡೆದರೆ, ಅನಿರುದ್ಧ ಥಾಪಾ ಪಂದ್ಯ ಮುಗಿಯಲು ಆರು ನಿಮಿಷಗಳಿರುವಾಗ ಸ್ಕೋರ್ ಸಮ ಮಾಡಲು ನೆರವಾದರು.