ಭಾನುವಾರ, ನವೆಂಬರ್ 28, 2021
22 °C
ಸಂತೋಷ್ ಟ್ರೋಫಿ ಫುಟ್‌ಬಾಲ್ ಟೂರ್ನಿಯ ಅರ್ಹತಾ ಸುತ್ತಿನ ಹಣಾಹಣಿ: ತಮಿಳುನಾಡಿಗೆ ಜಯ

ಫುಟ್‌ಬಾಲ್‌: ಆಂಧ್ರ ಮಣಿಸಿದ ಕರ್ನಾಟಕ ಅಗ್ರ ಸ್ಥಾನಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಂದ್ಯದ ಕೊನೆಯ ಹಂತದಲ್ಲಿ ಕಮಲೇಶ್ ಗಳಿಸಿದ ಗೋಲಿನ ಮೂಲಕ ಆಂಧ್ರ ತಂಡವನ್ನು ಮಣಿಸಿದ ಕರ್ನಾಟಕ, ಸಂತೋಷ್ ಟ್ರೋಫಿ ಫುಟ್‌ಬಾಲ್ ಟೂರ್ನಿಯ ದಕ್ಷಿಣ ವಲಯ ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನ ಗಳಿಸಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಎ’ ಗುಂಪಿನ ಪಂದ್ಯ ಗೋಲುರಹಿತ ಡ್ರಾದತ್ತ ಸಾಗಿತ್ತು. ಆದರೆ 90ನೇ ನಿಮಿಷದಲ್ಲಿ ಕಮಲೇಶ್ ಜಾದೂ ಮಾಡಿದರು. ಈ ಮೂಲಕ ರೋಚಕ ಗೆಲುವು ತಂದುಕೊಟ್ಟರು.ಇದು ಕರ್ನಾಟಕದ ಸತತ ಎರಡನೇ ಜಯವಾಗಿದ್ದು ಆರು ಪಾಯಿಂಟ್‌ಗಳು ತಂಡದ ಬಳಿ ಇವೆ. 

ಬಲಿಷ್ಠ ಆತಿಥೇಯರ ವಿರುದ್ಧ ಆಂಧ್ರ ತಂಡ ಸ್ಪಷ್ಟ ರಣನೀತಿಯೊಂದಿಗೆ ಕಣಕ್ಕೆ ಇಳಿದಿತ್ತು. ಹೀಗಾಗಿ ಪ್ರತಿ ಹಂತದಲ್ಲೂ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಆದರೆ ಇದೇ ಲಯವನ್ನು ಪಂದ್ಯದ ಮುಕ್ತಾಯದ ವರೆಗೂ ಮುಂದುವರಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ಆಡಿದ ಎರಡೂ ಪಂದ್ಯಗಳಲ್ಲಿ ಸೋಲುವುದರೊಂದಿಗೆ ತಂಡ ಟೂರ್ನಿಯಿಂದ ಹೊರಬಿತ್ತು. 

ಮತ್ತೊಂದು ಪಂದ್ಯದಲ್ಲಿ ತಮಿಳುನಾಡು 1–0ಯಿಂದ ತೆಲಂಗಾಣವನ್ನು ಮಣಿಸಿತು. ಮೊದಲ ಪಂದ್ಯದಲ್ಲಿ 0–4ರ ಸೋಲನುಭವಿಸಿದ್ದ ತಮಿಳುನಾಡು ಈ ಪಂದ್ಯದಲ್ಲಿ ಚೇತರಿಸಿಕೊಂಡು ಅಮೋಘ ಆಟವಾಡಿತು. ರಕ್ಷಣಾ ವಿಭಾಗದ ಆಟಗಾರರು ನಿರೀಕ್ಷೆಗೆ ತಕ್ಕಂತೆ ಆಡಿ ಗೋಲು ಬಿಟ್ಟುಕೊಡದಂತೆ ನೋಡಿಕೊಂಡರು. 

ಮೊದಲಾರ್ಧದಲ್ಲಿ ಗೋಲು ಗಳಿಸುವ ಎರಡು ಅಪೂರ್ಣ ಅವಕಾಶಗಳು ತಮಿಳುನಾಡಿಗೆ ಲಭಿಸಿದ್ದವು. ಆದರೆ ಚೆಂಡು ಗುರಿ ಮುಟ್ಟಲಿಲ್ಲ. ದ್ವಿತೀಯಾರ್ಧದ ಆಟ ಆರಂಭವಾಗಿ ಮೂರನೇ ನಿಮಿಷದಲ್ಲಿ ನಾಯಕ ವಿಜಯ್ ನಾಗಪ್ಪ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. 

ಫ್ರೀ ಕಿಕ್‌ನಲ್ಲಿ ವಿಜಯ್ ಒದ್ದ ಚೆಂಡು ಗಾಳಿಯಲ್ಲಿ ತೇಲಿ ಗೋಲುಪೆಟ್ಟಿಯೊಳಗೆ ಸೇರಿತು. ತೆಲಂಗಾಣ ಗೋಲ್ ಕೀಪರ್ ಹುಸೇನ್ ಅವರು ಕೈಯೊಡ್ಡಿ ತಡೆಯಲು ನಡೆಸಿದ ಪ್ರಯತ್ನ ವಿಫಲವಾಯಿತು.

ಗುಂಪಿನಿಂದ ಒಂದು ತಂಡಕ್ಕೆ ಮಾತ್ರ ಮುಖ್ಯ ಸುತ್ತು ಪ್ರವೇಶಿಸುವ ಅವಕಾಶವಿದೆ. ಕರ್ನಾಟಕ ಈ ವರೆಗೆ ಅಜೇಯವಾಗಿದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆಯುವ ಭರವಸೆಯಲ್ಲಿದೆ. ಕೊನೆಯ ಪಂದ್ಯದಲ್ಲಿ ಶನಿವಾರ ತೆಲಂಗಾಣವನ್ನು ಎದುರಿಸಲಿದೆ. ಅಂದು ಮೊದಲ ಪಂದ್ಯದಲ್ಲಿ ತಮಿಳುನಾಡು ಗೆದ್ದು ಮಧ್ಯಾಹ್ನ ಕರ್ನಾಟಕ ಸೋತರೆ ಗೋಲು ಗಳಿಕೆಯ ಆಧಾರದಲ್ಲಿ ಮುಂದಿನ ಹಂತವನ್ನು ನಿರ್ಣಯಿಸಲಾಗುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು