ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಫುಟ್‌ಬಾಲ್‌ನ ‘ಚೈತ್ರ ಕಾಲ’

Last Updated 17 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಹೋದ ವಾರ ಅಶೋಕನಗರದ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳಲ್ಲಿ ಅದೇನೋ ಪುಳಕ. ಸದಾ ಪುರುಷರ ಪಂದ್ಯಗಳಿಗೆ ಸಾಕ್ಷಿಯಾಗುತ್ತಿದ್ದ ಬಿಎಫ್‌ಎಸ್‌ ಮೈದಾನದಲ್ಲಿ ಮಹಿಳೆಯರೂ ಮೋಡಿ ಮಾಡುತ್ತಿದ್ದುದನ್ನು ಕಂಡವರಿಗೆ ಅಚ್ಚರಿಯ ಜೊತೆ ಆನಂದವೂ ಆಗಿತ್ತು.

ಅಂಗಳದಲ್ಲಿ ಸೇರಿದ್ದ ಅಷ್ಟೂ ಮಂದಿಯನ್ನು ಖುಷಿಯ ಕಡಲಲ್ಲಿ ತೇಲುವಂತೆ ಮಾಡಿದ್ದು ಬೆಂಗಳೂರು ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌ನ (ಬಿಯುಎಫ್‌ಸಿ) ವನಿತೆಯರು.

ಮಿಸಾಕ ಎಫ್‌ಸಿ ಎದುರಿನ ಕರ್ನಾಟಕ ರಾಜ್ಯ ಸೂಪರ್‌ ಡಿವಿಷನ್‌ ಲೀಗ್‌ನ ಆ ಹಣಾಹಣಿಯಲ್ಲಿ ಬಿಯುಎಫ್‌ಸಿ ಆಟಗಾರ್ತಿಯರು ಗೋಲುಗಳ ಮಳೆಯನ್ನೇ (ಎಂಟು ಗೋಲು) ಸುರಿಸಿದ್ದರು. ಪರೋಮಿತಾ ಮತ್ತು ಪ್ರವೀಣಾ ಅವರ ಕಾಲ್ಚೆಂಡಿನಾಟದ ಸೊಬಗಿಗೆ ಹಲವರು ತಲೆದೂಗಿದ್ದರು. ಅನೌಷ್ಕಾ, ಸಸ್ಮಿತಾ, ರಸಿಗಾ ಮತ್ತು ಲಿಲಿ ಅವರಂತಹ ಯುವ ತಾರೆಯರೂ ಪ್ರಜ್ವಲಿಸಿದ್ದರು.

ರಾಜ್ಯದಲ್ಲಿ ಮಹಿಳಾ ಫುಟ್‌ಬಾಲ್‌, ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವುದಕ್ಕೆ ಆ ಪಂದ್ಯ ನಿದರ್ಶನದಂತಿತ್ತು.

ಕರ್ನಾಟಕದ ಫುಟ್‌ಬಾಲ್‌ಗೆ ವಿಶಿಷ್ಠ ಪರಂಪರೆ ಇದೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಪುರುಷರಂತೆ ಮಹಿಳೆಯರೂ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿರುವುದು ಗೋಚರಿಸುತ್ತದೆ. ಚಿತ್ರಾ ಗಂಗಾಧರನ್‌ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ್ದಾರೆ. ಏಷ್ಯಾ ಆಲ್‌ ಸ್ಟಾರ್ಸ್‌ ತಂಡವನ್ನು ಪ್ರತಿನಿಧಿಸಿದ ರಾಜ್ಯದ ಆಟಗಾರ್ತಿ ಎಂಬ ಹಿರಿಮೆ ಅವರದ್ದು. ಮೇರಿ ವಿಕ್ಟೋರಿಯಾ, ಪದ್ಮ ಪ್ರಿಯಾ ಅವರೂ ರಾಷ್ಟ್ರೀಯ ತಂಡದ ಪರ ಆಡಿ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ರಾಜ್ಯದ ಆಟಗಾರ್ತಿಯರ ಸಂಖ್ಯೆ ಕ್ಷೀಣಿಸುತ್ತಿದೆ. ಇದನ್ನು ಅರಿತಿರುವ ಮಹಿಳಾ ಫುಟ್‌ಬಾಲ್‌ಗೆ ಹೊಸ ಮೆರುಗು ನೀಡಲು ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ) ಟೊಂಕ ಕಟ್ಟಿ ನಿಂತಿದೆ. ಇದರ ಮೊದಲ ಹೆಜ್ಜೆಯೇ ಕರ್ನಾಟಕ ರಾಜ್ಯ ಸೂಪರ್‌ ಡಿವಿಷನ್‌ ಲೀಗ್‌.

ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ (ಎಐಎಫ್‌ಎಫ್‌) ಮಹಿಳಾ ಸಮಿತಿಯು 2016ರಿಂದ ‘ರಾಷ್ಟ್ರೀಯ ಮಹಿಳಾ ಲೀಗ್‌’ ಆಯೋಜಿಸುತ್ತಿದೆ. ವಿವಿಧ ರಾಜ್ಯಗಳಲ್ಲಿ ನಡೆಯುವ ಸೂಪರ್‌ ಡಿವಿಷನ್‌ ಲೀಗ್‌ಗಳಲ್ಲಿ ಪ್ರಶಸ್ತಿ ಗೆದ್ದ ತಂಡಗಳಿಗೆ ಈ ಲೀಗ್‌ನಲ್ಲಿ ಆಡಲು ಅವಕಾಶ ಕಲ್ಪಿಸಿದೆ. ಈ ಕುರಿತು ಎಐಎಫ್‌ಎಫ್‌ ಮಹಿಳಾ ಸಮಿತಿಯಿಂದ ಮಾಹಿತಿ ಪಡೆದಿರುವ ಕೆಎಸ್‌ಎಫ್‌ಎ ಈ ಸಲ ಆರು ತಂಡಗಳನ್ನೊಳಗೊಂಡ ಸೂಪರ್‌ ಡಿವಿಷನ್‌ ಲೀಗ್‌ ಆಯೋಜಿಸಿದೆ.

ಇದರಲ್ಲಿ ಪರಿಕ್ರಮ, ಬಿಯುಎಫ್‌ಸಿ, ಮಿಸಾಕ ಎಫ್‌ಸಿ, ಇಂಡಿಯನ್‌ ಫುಟ್‌ಬಾಲ್‌ ಫ್ಯಾಕ್ಟರಿ (ಐಎಫ್ಎಫ್‌), ಮಂಗಳೂರು ಯುನೈಟೆಡ್‌ ಕ್ಲಬ್‌ ಹಾಗೂ ಬೆಳಗಾವಿಯ ಸ್ಲಾಮ್‌ಜರ್ಸ್‌ ಎಫ್‌ಸಿ ತಂಡಗಳು ಆಡುತ್ತಿವೆ. ಹೀಗಾಗಿ ನಗರ ಮತ್ತು ಗ್ರಾಮೀಣ ಭಾಗದ ಆಟಗಾರ್ತಿಯರಿಗೂ ಅವಕಾಶ ಸಿಕ್ಕಂತಾಗಿದೆ.

ಮೊದಲೆಲ್ಲಾ ರಾಜ್ಯ ತಂಡವನ್ನು ಆಯ್ಕೆ ಮಾಡಲು ಔಪಚಾರಿಕವಾಗಿ ಆಯ್ಕೆ ಟ್ರಯಲ್ಸ್‌ ನಡೆಸಲಾಗುತ್ತಿತ್ತು. ಬಳಿಕ ಆ ತಂಡವನ್ನು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಕಳುಹಿಸಿಕೊಡಲಾಗುತ್ತಿತ್ತು. ಸೂಪರ್‌ ಡಿವಿಷನ್‌ ಲೀಗ್‌ ಶುರುವಾಗಿರುವುದರಿಂದ ಈ ಸಂಪ್ರದಾಯಕ್ಕೆ ಇನ್ನು ಮುಂದೆ ಕಡಿವಾಣ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಡಿಸೆಂಬರ್‌ನಲ್ಲಿ ಕೆಎಸ್‌ಎಫ್‌ಎ ಅಧ್ಯಕ್ಷರಾದ ಎನ್‌.ಎ.ಹ್ಯಾರಿಸ್‌ ಅವರ ಜೊತೆ ದೆಹಲಿಗೆ ಹೋದಾಗ ಅಲ್ಲಿ ಎಐಎಫ್‌ಎಫ್‌ ಮಹಿಳಾ ಸಮಿತಿಯವರನ್ನು ಭೇಟಿ ಮಾಡಿದ್ದೆವು. ರಾಜ್ಯದಲ್ಲಿ ಲೀಗ್‌ ನಡೆಸಿ ಅದರಲ್ಲಿ ಗೆದ್ದ ತಂಡಕ್ಕೆ ರಾಷ್ಟ್ರೀಯ ಮಹಿಳಾ ಲೀಗ್‌ನಲ್ಲಿ ಆಡುವ ಅವಕಾಶ ಕಲ್ಪಿಸುವುದಾಗಿ ಅವರು ಹೇಳಿದರು. ಹೀಗಾಗಿ ಆರು ತಂಡಗಳನ್ನು ಇಟ್ಟುಕೊಂಡು ಲೀಗ್‌ ಆಯೋಜಿಸಿದ್ದೇವೆ. ವಾರದಲ್ಲಿ ಎರಡು ದಿನ (ಭಾನುವಾರ ಮತ್ತು ಬುಧವಾರ) ರೌಂಡ್‌ ರಾಬಿನ್‌ ಮಾದರಿಯಲ್ಲಿ ಪಂದ್ಯಗಳು ನಡೆಯುತ್ತಿವೆ. ಇದರಲ್ಲಿ ಬೇರೆ ಬೇರೆ ಊರುಗಳ ಯುವತಿಯರು ಆಡುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆ ಪ್ರತಿಭಾನ್ವೇಷಣೆಯ ಕಾರ್ಯ ಸುಲಭವಾಗಲಿದೆ. ಜೊತೆಗೆ ರಾಜ್ಯ ತಂಡದ ಶಕ್ತಿ ಹೆಚ್ಚಿಸಲು ಇದು ನೆರವಾಗಲಿದೆ’ ಎಂದು ಕೆಎಸ್‌ಎಫ್ಎ ಸದಸ್ಯ ಸತ್ಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಬಾರಿ ಎಐಎಫ್‌ಎಫ್‌, ಸಿಆರ್‌ಎಸ್‌ ಎಂಬ ಹೊಸ ಪದ್ಧತಿಯನ್ನು ಜಾರಿಗೆ ತಂದಿದೆ. ಇದರನ್ವಯ ಲೀಗ್‌ನಲ್ಲಿ ಆಡುತ್ತಿರುವ ಎಲ್ಲಾ ಆಟಗಾರ್ತಿಯರೂ ಕಡ್ಡಾಯವಾಗಿ ಫೆಡರೇಷನ್‌ನಲ್ಲಿ ಹೆಸರುಗಳನ್ನು ನೋಂದಾಯಿಸಬೇಕು. ಸೂಪರ್‌ ಡಿವಿಷನ್‌ ಲೀಗ್‌ನಲ್ಲಿ ಚೆನ್ನಾಗಿ ಆಡುವವರನ್ನು ಬೇರೆ ರಾಜ್ಯಗಳ ಕ್ಲಬ್‌ಗಳು ಸೆಳೆದುಕೊಳ್ಳುವ ಅವಕಾಶವೂ ಇದೆ. ಹೀಗಾಗಿ ತುಂಬಾ ಅಚ್ಚುಕಟ್ಟಾಗಿ ಲೀಗ್‌ ನಡೆಸುತ್ತಿದ್ದೇವೆ’ ಎಂದರು.

‘ಎ’ ಡಿವಿಷನ್‌ ಮತ್ತು ಅಂತರ ಜಿಲ್ಲಾ ಟೂರ್ನಿಗಳ ಕಲ್ಪನೆ

15 ವರ್ಷ ಮೇಲ್ಪಟ್ಟವರಷ್ಟೇ ಸೂಪರ್‌ ಡಿವಿಷನ್‌ನಲ್ಲಿ ಆಡಲು ಅರ್ಹರಾಗಿದ್ದಾರೆ. ಇದರಿಂದ 12, 14 ಮತ್ತು 15ವರ್ಷದೊಳಗಿನವರು ಅವಕಾಶ ವಂಚಿತರಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸಂಸ್ಥೆಯು ‘ಎ’ ಡಿವಿಷನ್‌ ಲೀಗ್‌ ಆಯೋಜಿಸಲು ನಿರ್ಧರಿಸಿದೆ. ಇದರಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿವೆ. ಜೊತೆಗೆ ಗ್ರಾಮೀಣ ಭಾಗದ ಮಕ್ಕಳಿಗೆ ವೇದಿಕೆ ಕಲ್ಪಿಸಿ ಆ ಮೂಲಕ ರಾಜ್ಯದ ಎಲ್ಲಾ ಭಾಗಗಳಿಗೆ ಫುಟ್‌ಬಾಲ್‌ ಕಂಪು ಪಸರಿಸುವ ಗುರಿಯೊಂದಿಗೆ ಅಂತರ ಜಿಲ್ಲಾ ಮಹಿಳಾ ಟೂರ್ನಿ ನಡೆಸಲೂ ತೀರ್ಮಾನಿಸಿದೆ.

‘ಸೀನಿಯರ್‌ ಮತ್ತು ಜೂನಿಯರ್‌ ವಿಭಾಗಗಳಲ್ಲಿ ಅಂತರ ಜಿಲ್ಲಾ ಟೂರ್ನಿ ನಡೆಸಲು ತೀರ್ಮಾನಿಸಿದ್ದೇವೆ. ಪ್ರತಿ ವರ್ಷವೂ ಒಂದೊಂದು ಜಿಲ್ಲೆಯಲ್ಲಿ ಪಂದ್ಯಗಳು ನಡೆಯಲಿವೆ. ಸ್ಥಳೀಯ ಮಕ್ಕಳಲ್ಲಿ ಫುಟ್‌ಬಾಲ್‌ ಕುರಿತು ಆಸಕ್ತಿ ಬೆಳೆಸಲು ಇದು ಸಹಾಯಕವಾಗಲಿದೆ. ಕೆಎಸ್‌ಎಫ್ಎಯಿಂದ ನೇಮಕವಾಗಿರುವ ಇಬ್ಬರು ಇಲ್ಲವೆ ಮೂರು ಮಂದಿ ಅಧಿಕಾರಿಗಳು ಟೂರ್ನಿಯ ಎಲ್ಲಾ ಪಂದ್ಯಗಳನ್ನು ವೀಕ್ಷಿಸುತ್ತಾರೆ. ಉತ್ತಮವಾಗಿ ಆಡುವ ಆಟಗಾರ್ತಿಯರನ್ನು ಗುರುತಿಸಿ ಅಂತಹವರ ಪಟ್ಟಿಯನ್ನು ಸಂಸ್ಥೆಗೆ ನೀಡಲಿದ್ದಾರೆ. ಅವರಿಗೆ ನಾವು ಬೆಂಗಳೂರಿನಲ್ಲಿ ಉಚಿತ ಊಟ ಮತ್ತು ವಸತಿ ಸಹಿತ ವಿಶೇಷ ತರಬೇತಿ ನೀಡಲು ತೀರ್ಮಾನಿಸಿದ್ದೇವೆ’ ಎಂದು ಸತ್ಯನಾರಾಯಣ ಹೇಳುತ್ತಾರೆ.

‘ಹ್ಯಾರಿಸ್‌ ಅವರು ಫುಟ್‌ಬಾಲ್‌ ಬೆಳವಣಿಗೆಗೆ ಎಲ್ಲಾ ಬಗೆಯ ಸಹಕಾರ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಂತರ ಶಾಲೆ ಮತ್ತು ಅಂತರ ಕಾಲೇಜು ಟೂರ್ನಿಗಳನ್ನು ಆಯೋಜಿಸಲು ತೀರ್ಮಾನಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಫುಟ್‌ಬಾಲ್‌ ಚಟುವಟಿಕೆಗಳು ಗರಿಗೆದರಬೇಕೆಂಬುದು ಅವರ ಉದ್ದೇಶ. ಇದನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಹಿರಿಯ ಆಟಗಾರರ ತಂಡಗಳನ್ನು ರಚಿಸಿದ್ದಾರೆ. ಆ ತಂಡಗಳು ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಅಲ್ಲಿನ ಮಕ್ಕಳು ಮತ್ತು ಪೋಷಕರಲ್ಲಿ ಫುಟ್‌ಬಾಲ್‌ ಬಗ್ಗೆ ಅರಿವು ಮೂಡಿಸಲಿವೆ. ಬರುವ ದಿನಗಳಲ್ಲಿ ಹೆಚ್ಚೆಚ್ಚು ಲೀಗ್‌ಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಬಿಎಫ್‌ಎಸ್‌ ಕ್ರೀಡಾಂಗಣದಲ್ಲಿ ನಾಲ್ಕು ತಿಂಗಳ ಹಿಂದೆ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ರಾತ್ರಿ ಹೊತ್ತಿನಲ್ಲೂ ಅಭ್ಯಾಸ ನಡೆಸಲು ಮತ್ತು ಪಂದ್ಯಗಳನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಮಹಿಳಾ ಫುಟ್‌ಬಾಲ್‌ಗೆ ವೃತ್ತಿಪರ ಸ್ಪರ್ಶ

ಇದೇ ಮೊದಲ ಬಾರಿ ರಾಜ್ಯದಲ್ಲಿ ಮಹಿಳಾ ಫುಟ್‌ಬಾಲ್‌ಗೆ ವೃತ್ತಿಪರ ಸ್ಪರ್ಶ ನೀಡಲಾಗುತ್ತಿದೆ. ನಮ್ಮಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತರಿದ್ದಾರೆ. ಅವರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸೂಪರ್‌ ಡಿವಿಷನ್‌ ಲೀಗ್‌ ವೇದಿಕೆಯಾಗಲಿದೆ.

ಈ ಲೀಗ್‌ನಿಂದಾಗಿ ಮಹಿಳಾ ಫುಟ್‌ಬಾಲ್‌ಗೆ ಹೊಸ ಮೆರುಗು ಬರಲಿದೆ. ಮಹಿಳಾ ಫುಟ್‌ಬಾಲ್‌ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಎಸ್‌ಎಫ್‌ಎ ಮಹತ್ವದ ಹೆಜ್ಜೆ ಇಟ್ಟಿದೆ. ಸಂಸ್ಥೆಯ ಈ ಕಾರ್ಯ ಶ್ಲಾಘನೀಯ.
- ರಾಜ್‌ ಕಿರಣ್‌, ಐಎಫ್‌ಎಫ್‌ ತಂಡದ ಕೋಚ್‌

ಹೆಚ್ಚಲಿರುವ ಜನಪ್ರಿಯತೆ..

ಲೀಗ್‌ನಿಂದಾಗಿ ಮಹಿಳಾ ಫುಟ್‌ಬಾಲ್‌ನ ಜನಪ್ರಿಯತೆ ಹೆಚ್ಚಲಿದೆ. ಬಿಎಸ್‌ಎಫ್‌ ಕ್ರೀಡಾಂಗಣದಲ್ಲೇ ಪಂದ್ಯಗಳು ನಡೆಯುತ್ತಿರುವುದರಿಂದ ಸಾಕಷ್ಟು ಮಂದಿ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ. ಕ್ಲಬ್‌ಗಳು ಇನ್ನು ಮುಂದೆ ಮಹಿಳಾ ಫುಟ್‌ಬಾಲ್‌ ಅನ್ನು ಗಂಭೀರವಾಗಿ ಪರಿಗಣಿಸುತ್ತವೆ. ವನಿತೆಯರಿಗೆ ವಿಶೇಷ ತರಬೇತಿ ನೀಡಲು ಮುಂದಾಗುತ್ತವೆ. ರಾಜ್ಯದಲ್ಲಿ ಫುಟ್‌ಬಾಲ್‌ ಅನ್ನು ವೃತ್ತಿಪರವಾಗಿ ಸ್ವೀಕರಿಸುವವರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.

- ಚಿತ್ರಾ ಗಂಗಾಧರನ್‌, ಕರ್ನಾಟಕದ ಹಿರಿಯ ಆಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT