ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FIFA World Cup | ಘಾನಾ ಗೆಲುವಿನ ಯಾನ

ದಕ್ಷಿಣ ಕೊರಿಯಾ ವಿರುದ್ಧ 3–2 ಗೋಲುಗಳ ಜಯ
Last Updated 29 ನವೆಂಬರ್ 2022, 4:28 IST
ಅಕ್ಷರ ಗಾತ್ರ

ದೋಹಾ: ಮೊಹಮ್ಮದ್‌ ಕುದೂಸ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ರೋಚಕ ಗೆಲುವು ಪಡೆದ ಘಾನಾ ತಂಡ ವಿಶ್ವಕಪ್‌ ಟೂರ್ನಿಯ ನಾಕೌಟ್‌ ಹಂತ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಅಲ್‌ ರಯ್ಯಾನ್‌ನ ಎಜುಕೇಷನ್‌ ಸಿಟಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಘಾನಾ 3–2 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ಆಫ್ರಿಕಾದ ತಂಡ ಮೂರು ಪಾಯಿಂಟ್ಸ್‌ಗಳೊಂದಿಗೆ ‘ಎಚ್‌’ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿತು. ಸೋಲು ಅನುಭವಿಸಿದ ಕೊರಿಯಾ ತಂಡದ ನಾಕೌಟ್‌ ಪ್ರವೇಶದ ಸಾಧ್ಯತೆ ಬಹುತೇಕ ಅಸ್ತಮಿಸಿದೆ.

ಪ್ರಬಲ ಸೆಣಸಾಟ ನಡೆದ ಪಂದ್ಯದ 24ನೇ ನಿಮಿಷದಲ್ಲಿ ಮೊಹಮ್ಮದ್‌ ಸಲಿಸು ಅವರು ಘಾನಾ ತಂಡಕ್ಕೆ ಮುನ್ನಡೆ ತಂದಿತ್ತರು. 10 ನಿಮಿಷಗಳ ಬಳಿಕ ಕುದೂಸ್‌ ಅವರು ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.

ಮೊದಲ ಅವಧಿಯುದ್ದಕ್ಕೂ ಲಯ ಕಂಡುಕೊಳ್ಳಲು ವಿಫಲವಾದ ಕೊರಿಯಾ ಎರಡನೇ ಅವಧಿಯಲ್ಲಿ ಪುಟಿದೆದ್ದು ನಿಂತಿತು. ಚೊ ಗುಯೆ ಸುಂಗ್‌ ಅವರು 58 ಮತ್ತು 61ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದರು. ಇದರಿಂದ ಆಟದ ರೋಚಕತೆ ಹೆಚ್ಚಿತು.

ಗೆಲುವಿನ ಗೋಲು ಗಳಿಸಲು ಉಭಯ ತಂಡಗಳ ಆಟಗಾರರು ಮೇಲಿಂದ ಮೇಲೆ ಪ್ರಯತ್ನ ನಡೆಸಿದರು. ಕುದೂಸ್‌ ಅವರು 68ನೇ ನಿಮಿಷದಲ್ಲಿ ಗೋಲು ಗಳಿಸಿ ಘಾನಾ ತಂಡಕ್ಕೆ ಮತ್ತೆ ಮುನ್ನಡೆ ತಂದುಕೊಟ್ಟರು. ಗೋಲ್‌ಪೋಸ್ಟ್‌ನತ್ತ ಬಂದ ಕ್ರಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆಯಲು ಇನಕಿ ವಿಲಿಯಮ್ಸ್‌ ವಿಫಲರಾದರೂ, ಅಲ್ಲೇ ಇದ್ದ ಕುದೂಸ್‌ ಚಾಣಾಕ್ಷ ರೀತಿಯಲ್ಲಿ ಗುರಿ ಸೇರಿಸಿದರು.

ಅದೇ ಮುನ್ನಡೆಯನ್ನು ಕೊನೆಯವರೆಗೂ ಕಾಪಾಡಿಕೊಂಡ ಘಾನಾ ಗೆಲುವಿನ ನಗು ಬೀರಿತು. ಕೊರಿಯಾ ಆಟಗಾರರು ಸಮಬಲದ ಗೆಲುವಿಗೆ ಕೆಲವೊಂದು ಉತ್ತಮ ಪ್ರಯತ್ನ ನಡೆಸಿದರೂ, ಎದುರಾಳಿ ಡಿಫೆಂಡರ್‌ಗಳು ಮತ್ತು ಗೋಲ್‌ಕೀಪರ್‌ ತಡೆಯಾಗಿ ನಿಂತರು.

ಮೊದಲ ಪಂದ್ಯದಲ್ಲಿ ಪೋರ್ಚುಗಲ್‌ ಕೈಯಲ್ಲಿ 2–3 ರಲ್ಲಿ ಸೋತಿದ್ದ ಘಾನಾ ತಂಡಕ್ಕೆ ಈ ಗೆಲುವು ಹೆಚ್ಚಿನ ಆತ್ಮವಿಶ್ವಾಸ ನೀಡಿದೆ.

‘ಎಚ್‌’ ಗುಂಪಿನ ಕೊನೆಯ ಪಂದ್ಯದಲ್ಲಿ ಘಾನಾ ತಂಡ ಉರುಗ್ವೆ ವಿರುದ್ಧ ಆಡಲಿದ್ದರೆ, ಕೊರಿಯಾ ತಂಡ ಪೋರ್ಚುಗಲ್‌ನ ಸವಾಲು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT