ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್ ಫುಟ್‌ಬಾಲ್ ಟೂರ್ನಿ: ಇಶಾನ್ ಪಂಡಿತ ಮ್ಯಾಜಿಕ್

ಅಂತಿಮ ನಿಮಿಷದಲ್ಲಿ ನಾಟಕೀಯ ತಿರುವು ಕಂಡ ಪಂದ್ಯ: ಜೆಎಫ್‌ಸಿಗೆ ರೋಚಕ ಗೆಲುವು
Last Updated 6 ಜನವರಿ 2022, 19:31 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್: ಅಂತಿಮ ಹಂತದಲ್ಲಿ ಮ್ಯಾಜಿಕ್ ಮಾಡಿದ ಇಶಾನ್ ಪಂಡಿತ ಅವರು ಜೆಮ್ಶೆಡ್‌ಪುರ್ ಎಫ್‌ಸಿಗೆ ಜಯದ ಕಾಣಿಕೆ ನೀಡಿದರು. ಗುರುವಾರ ರಾತ್ರಿ ಇಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ರೋಚಕ ಹಣಾಹಣಿಯಲ್ಲಿ ಜೆಮ್ಶೆಡ್‌ಪುರ 3–2ರಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಮಣಿಸಿತು.

ನಾಲ್ಕನೇ ನಿಮಿಷದಲ್ಲೇ ನಾರ್ತ್ ಈಸ್ಟ್ ಯುನೈಟೆಡ್ ತಂಡ ಮುನ್ನಡೆ ಸಾಧಿಸಿ ಸಂಭ್ರಮಿಸಿತು. ಸುಹೈಲ್ ವಡಕ್ಕೇಪೀಡಿಗ ನೀಡಿದ ಪಾಸ್‌ನಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ದೇಶಾನ್ ಬ್ರೌನ್‌ ಅವರು ಖುಷಿಯಲ್ಲಿ ನಲಿದಾಡಿದರು. ಮೊದಲಾರ್ಧದ ಮುಕ್ತಾಯದ ಕೊನೆಯ ಹಂತದ ವರೆಗೂ ಈ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ತಂಡ ಯಶಸ್ವಿಯಾಗಿತ್ತು.

ಆದರೆ 44ನೇ ನಿಮಿಷದಲ್ಲಿ ಜೋರ್ಡಾನ್ ಮರೆ ಅವರು ಜಾದೂ ಮಾಡಿದರು. ಈ ಆವೃತ್ತಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಗ್ರೆಗ್‌ ಸ್ಟೀವರ್ಟ್‌ ಅವರು ಫ್ರೀ ಕಿಕ್‌ನಲ್ಲಿ ನಿಖರವಾಗಿ ನೀಡಿದ ಚೆಂಡನ್ನು ಹೆಡ್ ಮಾಡಿ ಜೋರ್ಡಾನ್ ಸಮಬಲದ ಗೋಲು ಗಳಿಸಿದರು. ದ್ವಿತೀಯಾರ್ಧದಲ್ಲಿ ಜೆಮ್ಶೆಡ್‌ಪುರ ಆಕ್ರಮಣಕ್ಕೆ ಒತ್ತು ನೀಡಿತು. 56ನೇ ನಿಮಿಷದಲ್ಲಿ ಇದಕ್ಕೆ ಫಲ ಕಂಡಿತು.

ಸೆಮಿನ್ಲೆನ್ ಡೊಂಗೆಲ್ ಮತ್ತು ಜೋರ್ಡಾನ್ ಮರೆ ಅವರ ಸಮಯೋಚಿತ ಆಟದ ಬಲದಿಂದ ಚೆಂಡನ್ನು ಪಡೆದ ಬೋರಿಸ್ ಸಿಂಗ್ಜೆಮ್ಶೆಡ್‌ಪುರಕ್ಕಾಗಿ ಗೋಲು ಗಳಿಸಿದರು. 90ನೇ ನಿಮಿಷದಲ್ಲಿ ಪಂದ್ಯ ರೋಚಕವಾಯಿತು. ದೇಶಾನ್ ಬ್ರೌನ್ ವೈಯಕ್ತಿಕ ಎರಡನೇ ಗೋಲು ಗಳಿಸಿ ನಾರ್ತ್‌ ಈಸ್ಟ್‌ಗೆ ಸಮಬಲ ಗಳಿಸಿಕೊಟ್ಟರೆ ಕ್ಷಣಾರ್ಧದಲ್ಲಿ ತಿರುಗೇಟು ನೀಡಿದ ಇಶಾನ್ ಪಂಡಿತ ಚೆಂಡನ್ನು ಬಲೆಯೊಳಗೆ ಸೇರಿಸಿ ಜೆಮ್ಶೆಡ್‌ಪುರಕ್ಕೆ ಜಯ ತಂದುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT