ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿ ವಾಸವಿದ್ದ ಮನೆಯೂ ಆತನದ್ದಲ್ಲ!

ಬೇನಾಮಿ ಹೆಸರಿನಲ್ಲಿ ಆಸ್ತಿ ಅನುಮಾನ
Last Updated 13 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಕ್ರಮ್ ಇನ್‌ವೆಸ್ಟ್‌ಮೆಂಟ್‌ ಕಂಪನಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ ಆರೋಪಿ ರಾಘವೇಂದ್ರ ಶ್ರೀನಾಥ್‌, ಬನಶಂಕರಿಯ 2ನೇ ಹಂತದಲ್ಲಿರುವ ಎರಡು ಅಂತಸ್ತಿನ ಮನೆಯಲ್ಲಿ ವಾಸವಿದ್ದ. ಆದರೆ, ಆ ಮನೆ ಅವನ ಹೆಸರಿನಲ್ಲಿಲ್ಲ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದ್ದ ಆರೋಪಿ, ನಾಲ್ವರು ಏಜೆಂಟರ ಮೂಲಕ 700ಕ್ಕೂ ಹೆಚ್ಚು ಮಂದಿಯಿಂದ ₹350 ಕೋಟಿಯಿಂದ ₹400 ಕೋಟಿಯಷ್ಟು ಹಣ ಸಂಗ್ರಹಿಸಿದ್ದಾನೆ. ಅದನ್ನು ವಾಪಸ್‌ ಸಹ ಕೊಟ್ಟಿಲ್ಲ. ಆ ಹಣ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ಪೊಲೀಸರ ಪ್ರತ್ಯೇಕ ತಂಡ ತನಿಖೆ ನಡೆಸುತ್ತಿದೆ.

ರಾಘವೇಂದ್ರ ಶ್ರೀನಾಥ್‌ ಜತೆಗೆ ಏಜೆಂಟರಾದ ಸೂತ್ರಂ ಸುರೇಶ್‌, ನರಸಿಂಹಮೂರ್ತಿ, ಪ್ರಹ್ಲಾದ್‌, ಕೆ.ಸಿ.ನಾಗರಾಜ್‌ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಅವರೆಲ್ಲರ ಆಸ್ತಿ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ.

‘ಕಂಪನಿ ನಿರ್ದೇಶಕನೂ ಆಗಿದ್ದ ರಾಘವೇಂದ್ರನ ಮನೆಗೆ ಹೋಗಿದ್ದೆವು. ಆತನ ಪತ್ನಿಯೂ ನಿರ್ದೇಶಕಿ ಆಗಿದ್ದು,  ತಲೆಮರೆಸಿಕೊಂಡಿದ್ದಾಳೆ. ಮನೆಯಲ್ಲಿ ಯಾರೂ ಇರಲಿಲ್ಲ. ಸಂಬಂಧಿಕರೊಬ್ಬರ ಬಳಿ ಇದ್ದ ಬೀಗದ ಕೀ ಬಳಸಿ ಬಾಗಿಲು ತೆರೆದು ಪರಿಶೀಲನೆ ನಡೆಸಿದೆವು. ಕೆಲ ಕಾಗದಪತ್ರಗಳು ಸಿಕ್ಕಿವೆ.  ಆರೋಪಿಯ ಸಂಬಂಧಿಕರೊಬ್ಬರ ಹೆಸರಿನಲ್ಲಿ ಆ ಮನೆ ಇರುವುದು ಗೊತ್ತಾಯಿತು. ಮನೆಯ ಮೌಲ್ಯ ₹1 ಕೋಟಿ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಯು ಹಣ ಹೂಡಿಕೆ ಮಾಡಿದ್ದ ಎನ್ನಲಾದ ಷೇರು ಮಾರುಕಟ್ಟೆಗೆ ಸಂಬಂಧಪಟ್ಟ ದಾಖಲೆಗಳನ್ನು ಕಲೆ ಹಾಕುತ್ತಿದ್ದೇವೆ. ಅವುಗಳನ್ನು ಪರಿಣಿತರಿಂದ ಪರಿಶೀಲನೆ ಮಾಡಿಸಿದ ನಂತರ, ಷೇರು ಮಾರುಕಟ್ಟೆಯಲ್ಲಿ ಆತ ಹೂಡಿಕೆ ಮಾಡಿದ್ದ ಹಣವೆಷ್ಟು ಎಂಬುದು ನಿಖರವಾಗಿ ಗೊತ್ತಾಗಲಿದೆ’ ಎಂದರು.

ಬೇನಾಮಿ ಹೆಸರಿನಲ್ಲಿ ಆಸ್ತಿ:
‘ಕೋಟ್ಯಂತರ ರೂಪಾಯಿಯನ್ನು ಗ್ರಾಹಕರು ಕಂಪನಿಗೆ ಚೆಕ್‌ ಮೂಲಕ ಪಾವತಿ ಮಾಡಿದ್ದಕ್ಕೆ ದಾಖಲೆಗಳಿವೆ. ಆ ಹಣವನ್ನು ಆರೋಪಿ ಬಳಸಿಕೊಂಡಿದ್ದಾನೆ. ಆತನ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲವೆಂಬುದು ತನಿಖೆಯಿಂದ ಗೊತ್ತಾಗಿದೆ. ಬೇನಾಮಿ ಹೆಸರಿನಲ್ಲಿ ಆತ ಆಸ್ತಿ ಮಾಡಿರುವ ಅನುಮಾನ ಇದೆ. ಹಣವನ್ನು ಸಂಬಂಧಿಕರ ಹೆಸರಿನಲ್ಲಿ ನಿಶ್ಚಿತ ಠೇವಣಿ (ಎಫ್‌ಡಿ) ಇಟ್ಟಿರುವ ಮಾಹಿತಿ ಇದೆ. ಅದನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಆರೋಪಿಯ ಚಿಕ್ಕಪ್ಪ, ಅವರ ಮಕ್ಕಳು ಸೇರಿದಂತೆ ಕೆಲ ಸಂಬಂಧಿಕರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಇರುವುದಕ್ಕೆ ದಾಖಲೆಗಳು ಸಿಕ್ಕಿವೆ. ಆ ಆಸ್ತಿಯನ್ನೆಲ್ಲ ತಾವೇ ಗಳಿಸಿದ್ದು ಎಂದು ಅವರೆಲ್ಲ ಹೇಳುತ್ತಿದ್ದಾರೆ. ಸಮರ್ಪಕ ದಾಖಲೆಗಳನ್ನು ಹಾಜರುಪಡಿಸುವಂತೆ ಹೇಳಿದ್ದೇವೆ. ಅವುಗಳ ಪರಿಶೀಲನೆ ನಡೆಸಿದ ಬಳಿಕವೇ ಆ ಆಸ್ತಿ ಯಾರದ್ದು ಎಂಬುದು ತಿಳಿಯಲಿದೆ’ ಎಂದರು.

ಏಜೆಂಟರದ್ದು ಕೋಟ್ಯಂತರ ರೂಪಾಯಿ ಆಸ್ತಿ ಪತ್ತೆ:
ಕಂಪನಿಯ ‘ವೆಲ್ತ್‌ ಮ್ಯಾನೇಜರ್‌’ ಆಗಿದ್ದ ಸೂತ್ರಂ ಸುರೇಶ್‌, ನರಸಿಂಹಮೂರ್ತಿ, ಪ್ರಹ್ಲಾದ್‌, ಕೆ.ಸಿ.ನಾಗರಾಜ್‌ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

‘ಗ್ರಾಹಕರಿಂದ ಸಂಗ್ರಹಿಸಿದ್ದ ಹಣವನ್ನೆಲ್ಲ ಏಜೆಂಟರು, ವಿಕ್ರಮ್ ಇನ್‌ವೆಸ್ಟ್‌ಮೆಂಟ್‌ ಕಂಪನಿ ಖಾತೆಗೆ ಜಮೆ ಮಾಡಿಸಿದ್ದಾರೆ. ಆರೋಪಿಯಿಂದ ಕಮಿಷನ್‌ ಮಾತ್ರ ಪಡೆದುಕೊಂಡಿದ್ದಾರೆ. ಸೂತ್ರಂ ಸುರೇಶ್‌ ಹೆಸರಿನಲ್ಲೇ ಹೆಚ್ಚಿನ ಆಸ್ತಿ ಇದೆ. ತಮ್ಮ ಸಂಪಾದನೆಯಿಂದ ಆಸ್ತಿ ಗಳಿಸಿರುವುದಾಗಿ ಏಜೆಂಟರು ಹೇಳುತ್ತಿದ್ದಾರೆ. ಹೀಗಾಗಿ, ಅವರ ಆಸ್ತಿ ಮುಟ್ಟುಗೋಲು ಸಂಬಂಧ  ತೀರ್ಮಾನ ಕೈಗೊಂಡಿಲ್ಲ’ ಎಂದರು.

ಕಸ್ಟಡಿ ಅವಧಿ ಮುಕ್ತಾಯ:
ಆರೋಪಿಗಳ ಕಸ್ಟಡಿ ಅವಧಿ ಮುಕ್ತಾಯವಾಗುವುದರಿಂದ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಅವರನ್ನು ಪೊಲೀಸರು ಬುಧವಾರ ಹಾಜರುಪಡಿಸಲಿದ್ದಾರೆ.

‘ವಂಚನೆಯಿಂದ ಗಳಿಸಿದ್ದ ಹಣ ಎಲ್ಲಿದೆ ಎಂಬ ಮಾಹಿತಿ ಇದುವರೆಗೂ ಗೊತ್ತಾಗಿಲ್ಲ.  ಆರೋಪಿಗಳನ್ನು ಇನ್ನಷ್ಟು ದಿನ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೋರಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

250 ಮಂದಿ ಠಾಣೆಗೆ
ಕಂಪನಿ ವಂಚನೆ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಬನಶಂಕರಿ ಠಾಣೆಗೆ ಬರುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ.

ಮಂಗಳವಾರವೂ 75 ಗ್ರಾಹಕರು ಠಾಣೆಗೆ ಬಂದು, ತಮಗಾದ ವಂಚನೆ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದರು. ಆರೋಪಿಗಳ ಬಂಧನವಾದಾಗಿನಿಂದ ಇದುವರೆಗೂ 250ಕ್ಕೂ ಹೆಚ್ಚು ಮಂದಿ ಠಾಣೆಗೆ ಬಂದು ವಂಚನೆ ಬಗ್ಗೆ ಹೇಳಿಕೊಂಡಿದ್ದಾರೆ.

‘ಬಾಲಾಜಿ ಅಗರಬತ್ತಿ ಕಂಪನಿ’ ಮಾಲೀಕ ಪಿ.ಆರ್. ಬಾಲಾಜಿ ನೀಡಿದ್ದ ದೂರಿನನ್ವಯ ಆರೋಪಿಗಳ ವಿರುದ್ಧ ಒಂದೇ ಎಫ್‌ಐಆರ್‌ ದಾಖಲಾಗಿದೆ. ಇನ್ನುಳಿದ ಗ್ರಾಹಕರ ಮಾಹಿತಿ ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಳ್ಳುವ ಬಗ್ಗೆ ಪೊಲೀಸರು ಪರಿಶೀಲಿಸುತ್ತಿದ್ದಾರೆ.

‘ಏನನ್ನೂ ಹೇಳುವ ಸ್ಥಿತಿಯಲ್ಲಿ ನಾನಿಲ್ಲ’
ಪೊಲೀಸರು ಕಸ್ಟಡಿಗೆ ಪಡೆದಾಗಿನಿಂದಲೂ ಆರೋಪಿ ರಾಘವೇಂದ್ರ, ಕಂಪನಿ ವಹಿವಾಟು ಹಾಗೂ ಹಣದ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ‘ಏನನ್ನೂ ಹೇಳುವ ಸ್ಥಿತಿಯಲ್ಲಿ ನಾನಿಲ್ಲ’ ಎಂದಷ್ಟೇ ಆತ ಹೇಳುತ್ತಿದ್ದಾನೆ. ಇದರಿಂದಾಗಿ, ಹಣದ ಮಾಹಿತಿ ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟವಾಗುತ್ತಿದೆ.

‘ಕಂಪನಿ ಖಾತೆಗೆ ಜಮೆ ಆಗಿದ್ದ ಹಣವನ್ನು ಆರೋಪಿಯೇ ಡ್ರಾ ಮಾಡಿಕೊಂಡಿದ್ದಾನೆ. ಆ ಹಣ ಏನಾಗಿದೆ ಎಂಬ ಬಗ್ಗೆ ಬಾಯ್ಬಿಡುತ್ತಿಲ್ಲ’ ಎಂದರು.

ಖಾತೆಯಲ್ಲಿ ಕೇವಲ ₹ 5,000
ಎಸ್‌ಬಿಐ ಸೇರಿದಂತೆ ನಗರದ ಹಲವು ಬ್ಯಾಂಕ್‌ಗಳಲ್ಲಿ ರಾಘವೇಂದ್ರ, ಆತನ ಪತ್ನಿ ಸುನೀತಾ ಹಾಗೂ ಕಂಪನಿ ಹೆಸರಿನಲ್ಲಿದ್ದ 12 ಖಾತೆಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅವುಗಳ ಪೈಕಿ ಎರಡು ಉಳಿತಾಯ ಖಾತೆಗಳಲ್ಲಿ ಕೇವಲ ₹5,000ದಷ್ಟು ಹಣವಿದೆ ಎಂದು ಗೊತ್ತಾಗಿದೆ.

‘ಆರೋಪಿಗಳ ಯಾವುದೇ ಖಾತೆಯಲ್ಲೂ ನಾವು ಅಂದುಕೊಂಡಷ್ಟು ಹಣವಿಲ್ಲ. ಗ್ರಾಹಕರಿಗೆ ವಂಚಿಸುವ ಉದ್ದೇಶದಿಂದಲೇ ಸಂಚು ರೂಪಿಸಿ ಆರೋಪಿಗಳು ಕೃತ್ಯ ಎಸಗಿರುವ ಅನುಮಾನ ಬರುತ್ತಿದೆ. ಹೀಗಾಗಿ, ಹಣದ ಬಗ್ಗೆ ಸಣ್ಣ ಸುಳಿವು ಸಿಗುತ್ತಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT