ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಮರಡೋನಾ: ಎಡಗಾಲು ಆಟಗಾರನ ಎಡಪಂಥದ ಹಾದಿ

Last Updated 29 ನವೆಂಬರ್ 2020, 4:57 IST
ಅಕ್ಷರ ಗಾತ್ರ
ADVERTISEMENT
""
""

ಫುಟ್‌ಬಾಲ್ ಪ್ರಪಂಚದಲ್ಲಿ ಸಂಚರಿಸಿದರೆ ಎಡಗಾಲಿನಿಂದ ಚೆಂಡು ಒದೆಯುವ ಆಟಗಾರರು ಕಣ್ಣಿಗೆ ಬೀಳುವುದು ಕಡಿಮೆ. ಹೆಸರಾಂತ ಆಟಗಾರರ ಪಟ್ಟಿಯಲ್ಲಿ ಲಯೊನೆಲ್ ಮೆಸ್ಸಿ, ಡಿಯೆಗೊ ಮರಡೋನಾ, ಐಗರ್ ಕ್ಯಾಸಿಲಸ್, ಡೇವಿಡ್ ಸಿಲ್ವಾ, ರಿಯಾನ್ ಗಿಬ್ಸ್, ರಾಬರ್ಟೊ ಕಾರ್ಲೋಸ್‌, ರೌಲ್ ಗೊಂಜಾಲೆಜ್, ಪೌಲೊ ಮಾಲ್ದಿನಿ, ಆಶ್ಲಿ ಕೋಲ್‌, ಪ್ಯಾಟ್ರಿಕ್ ಇರಾ, ಎಸ್ತೆಬಾನ್ ಕೊಂಬಿಯಾಸೊ ಮುಂತಾದ ಖ್ಯಾತನಾಮರು ಈ ವಿಶಿಷ್ಟ ಪಟ್ಟಿಗೆ ಸೇರುತ್ತಾರೆ.

ಎಡಗಾಲು ಆಟಗಾರರ ಪೈಕಿ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಹೇಳಲಾಗುತ್ತದೆ. ಇತ್ತೀಚೆಗೆ ನಿಧನರಾದ ಡಿಯೆಗೊ ಮರಡೋನಾ ಕೂಡ ತಮ್ಮ ಮಾಂತ್ರಿಕ ಗೋಲುಗಳನ್ನೆಲ್ಲ ಗಳಿಸಿದ್ದು ಎಡಗಾಲಿನಲ್ಲೇ. ಅರ್ಜೆಂಟೀನಾದ ಮರಡೋನಾ ಅವರು ಎಡಗಾಲು ಆಟಗಾರ ಮಾತ್ರ ಆಗಿರಲಿಲ್ಲ. ಅವರ ಚಿಂತನೆಗಳಿಗೂ ‘ಎಡ’ ಸ್ಪರ್ಶವಿತ್ತು.

ಮಿಂಚಿನ ವೇಗ ಮತ್ತು ಮೋಹಕ ಡ್ರಿಬ್ಲಿಂಗ್ ಮೂಲಕ ಅಂಗಣದಲ್ಲಿ ಎದುರಾಳಿ ತಂಡದ ಆಟಗಾರರನ್ನು ಬೆಕ್ಕಸ ಬೆರಗಾಗಿಸುತ್ತಿದ್ದ ಮರಡೋನಾ ನಿಜಜೀವನದಲ್ಲಿ ಅಮಲಿನ ದಾಸರಾಗಿದ್ದರು. ಆದರೆ ಮತ್ತೊಂದೆಡೆ ವ್ಯವಸ್ಥೆಯ ವಿರುದ್ಧ ಮತ್ತು ಅಧಿಕಾರಶಾಹಿಯ ಎದುರು ಸೆಟೆದು ನಿಲ್ಲುವ ವ್ಯಕ್ತಿತ್ವವನ್ನೂ ಬೆಳೆಸಿಕೊಂಡಿದ್ದರು. ಬೇಸರಗೊಂಡಾಗ ಫಿಫಾ ವಿರುದ್ಧವೂ ಗಟ್ಟಿ ದನಿಯಲ್ಲಿ ಮಾತನಾಡುವ ಛಾತಿ ಅವರಿಗಿತ್ತು.ಫುಟ್‌ಬಾಲ್‌ ಕ್ರೀಡೆಯನ್ನು ಫಿಫಾ, ರೋಬೋಟ್‌ಗಳ ಆಟವನ್ನಾಗಿ ಮಾಡುತ್ತಿದೆ ಎಂದು ಅವರು ಹೇಳಿದ್ದರು. ಅಮೆರಿಕ ವಿರುದ್ಧವೂ ಧರ್ಮಗುರು ಪೋಪ್ ವಿರುದ್ಧವೂ ಮಾತನಾಡುವ ಗಟ್ಟಿತನ ಅವರಲ್ಲಿತ್ತು. ಎಡ ವಿಚಾರಧಾರೆಯ ಮತ್ತು ಸಮಾಜವಾದಿ ಧೋರಣೆಯ ನಾಯಕರ ಅಭಿಮಾನಿಯೂ ಆಗಿದ್ದರು ಅವರು.

ಮಾರ್ಕ್ಸ್‌ವಾದಿ, ಲೆನಿನ್‌ ವಾದಿ ಮುಖಂಡರು ಮತ್ತು ಲ್ಯಾಟಿನ್ ಅಮೆರಿಕದ ಹೋರಾಟಗಾರರಾಗಿದ್ದ ಚೆ ಗುವೇರಾ, ಫಿಡೆಲ್ ಕ್ಯಾಸ್ಟ್ರೊ, ಹ್ಯೂಗೊ ಚೌವೇಜ್‌ ಮುಂತಾದವರು ಮರಡೋನಾ ಅವರಿಗೆ ಆದರ್ಶವಾಗಿದ್ದರು. ಮರಡೋನಾ ತಮ್ಮ ಬಲತೋಳಿನಲ್ಲಿ ಚೆ ಗುವೇರಾ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಎಡಗಾಲಿನ ಮೀನಖಂಡದಲ್ಲಿ ಫಿಡೆಲ್ ಕ್ಯಾಸ್ಟ್ರೊ ಚಿತ್ರವನ್ನು ‘ಅಚ್ಚು’ ಮಾಡಿಕೊಂಡಿದ್ದರು.

ಕ್ಯೂಬಾ ಅಧ್ಯಕ್ಷರಾಗಿದ್ದ ಫಿಡೆಲ್ ಕ್ಯಾಸ್ಟ್ರೊ ಅವರನ್ನು ಆರಂಭದಲ್ಲಿ ಗೆಳೆಯನಾಗಿಯೂ ಕೊನೆಕೊನೆಯಲ್ಲಿ ಪಿತೃಸಮಾನರಾಗಿಯೂ ಕಾಣುತ್ತಿದ್ದ ಮರಡೋನಾ ಅವರು ಕ್ಯಾಸ್ಟ್ರೊ ನಿಧನರಾದ ದಿನ ಭಾವುಕರಾಗಿದ್ದರು ಎಂದು ವರದಿಯಾಗಿತ್ತು. ನಾಲ್ಕು ವರ್ಷಗಳ ಆಂತರದಲ್ಲಿ ಇಬ್ಬರೂ ಒಂದೇ ದೀನ ತೀರಿಕೊಂಡರು ಎಂಬುದು ಗಮನಾರ್ಹ ಅಂಶ. ಕೊಕೇನ್‌ಗೆ ದಾಸರಾಗಿದ್ದ ಮರಡೋನಾ ವ್ಯಸನದಿಂದ ಮುಕ್ತರಾಗುವ ಚಿಕಿತ್ಸೆಗಾಗಿ ಕ್ಯೂಬಾ ದ್ವೀಪಕ್ಕೆ ಹೋಗಿದ್ದಾಗ ಕ್ಯಾಸ್ಟ್ರೊ ಜೊತೆ ಸ್ನೇಹ ಬೆಳೆದಿತ್ತು. ವೆನೆಜುವೆಲಾದ ಅಧ್ಯಕ್ಷರಾಗಿದ್ದ ಹ್ಯೂಗೊ ಚೌವೇಜ್‌ ಮತ್ತು ಅವರ ಉತ್ತರಾಧಿಕಾರಿ ನಿಕೋಲಸ್ ಮಡುರೊ ಜೊತೆಯೂ ಮರಡೋನಾ ಉತ್ತಮ ನಂಟು ಬೆಳೆಸಿದ್ದರು. 2013ರಲ್ಲಿ ಚೌವೇಜ್ ಮೃತರಾದಾಗ ಮರಡೋನಾ ಹೇಳಿದ್ದು ಹೀಗೆ– ‘ಲ್ಯಾಟಿನ್‌ ಅಮೆರಿಕದ ಜನರ ಚಿಂತನಾವಿಧಾನವನ್ನೇ ಬದಲಿಸಿದ ಖ್ಯಾತಿ ಚೌವೇಜ್‌ಗೆ ಸಲ್ಲಬೇಕು. ಅಮೆರಿಕದ ಅಡಿಯಾಳಾಗಿದ್ದವರಲ್ಲಿ ಸ್ವಂತಿಕೆ ಬೆಳೆಸಿದ ಮಹಾನ್ ನಾಯಕ ಚೌವೇಜ್‘

ಬೇಗೆಯಿಂದ ಕಳೆದ ಬಾಲ್ಯದ ದಿನಗಳು

ಬಾಲ್ಯದಲ್ಲಿ ಕಳೆದ ಕಷ್ಟದ ದಿನಗಳೇ ಮರಡೋನಾ ಅವರಲ್ಲಿ ಸಮಾಜವಾದಿ ಚಿಂತನೆ ಮತ್ತು ಕ್ರಾಂತಿಯ ಕಿಡಿ ಹತ್ತಲು ಕಾರಣವಾಗಿರಬೇಕು.ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರಾಗಿದ್ದ ಡಾನ್‌ ಡಿಯೆಗೊ ಅವರ ಏಳು ಮಕ್ಕಳಲ್ಲಿ ಒಬ್ಬರಾಗಿದ್ದ ಮರಡೋನಾ ಬಡತನದಲ್ಲೇ ದಿನಕಳೆದವರು. ಜನ್ಮದಿನದಂದು ಬಂಧುವೊಬ್ಬರು ಉಡುಗೊರೆಯಾಗಿ ನೀಡಿದ ಚೆಂಡನ್ನು ಜತನದಿಂದ ಉಳಿಸಿಕೊಂಡಿದ್ದ ಅವರು ಬೀದಿಯಲ್ಲಿ ‘ಡ್ರಿಬ್ಲಿಂಗ್’ ಮಾಡುತ್ತ ಗಮನ ಸೆಳೆಯುತ್ತಿದ್ದರು. ರಾಜಧಾನಿಯ ಹೊರವಲದ ಬೀದಿಯೇ ಅವರ ಫುಟ್‌ಬಾಲ್ ಜೀವನದ ರಂಗಪ್ರವೇಶಕ್ಕೆ ನಾಂದಿ ಹಾಡಿದ್ದು. ನಂತರ ಫುಟ್‌ಬಾಲ್‌ನ ಎಲ್ಲ ತಂತ್ರಗಳನ್ನು ಕರಗತ ಮಾಡಿಕೊಂಡ ಅವರು ಪರಿಪೂರ್ಣ ಆಟಗಾರನಾಗಿ ಬೆಳೆದ ಪರಿ ಅಚ್ಚರಿ ಮೂಡಿಸುವಂಥಾದ್ದು. ಮುಂದೆ, ಅವರ ಆಟವನ್ನು ಬೆರಗುಗಣ್ಣಿನಿಂದ ನೋಡಿದ ಜಗತ್ತಿನ ಮೂಲೆ ಮೂಲೆಯ ಕ್ರೀಡಾಪ್ರೇಮಿಗಳು ಅವರ ಅಭಿಮಾನಿಗಳಾದರು. ಕೊನೆಗೆ ‘ದೇವರ’ ಪಟ್ಟವನ್ನೇ ಅವರಿಗೆ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT