ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ ಚುನಾವಣೆ: ಕಳೆಗಟ್ಟಿದ ಮತಗಟ್ಟೆಗಳು

ಮತ ಚಲಾಯಿಸಿದ ಶಿಕ್ಷಕರು, ಪದವೀಧರರು lಅಭ್ಯರ್ಥಿ ಪರ ಮತ ಯಾಚಿಸಿದ ನಾಯಕರು, ಕಾರ್ಯಕರ್ತರು
Last Updated 9 ಜೂನ್ 2018, 5:54 IST
ಅಕ್ಷರ ಗಾತ್ರ

ದಾವಣಗೆರೆ: ಸಾಲು ಸಾಲಾಗಿ ಬಂದ ಶಿಕ್ಷಕರು, ಪದವೀಧರರು. ದಿನವಿಡೀ ಮತದಾರರ ಮನವೊಲಿಸಲು ಬೆವರು ಹರಿಸಿದ ನಾಯಕರು. ಪಕ್ಷದ ಅಭ್ಯರ್ಥಿಗೇ ಮತ ನೀಡುವಂತೆ ಕೇಳಿಕೊಳ್ಳುವ ಕಾರ್ಯಕರ್ತರು... ಜಿಲ್ಲೆಯಲ್ಲಿ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಶುಕ್ರವಾರ ನಡೆದ ಮತದಾನದ ವೇಳೆ ಮತಗಟ್ಟೆಗಳಲ್ಲಿ ಕಂಡುಬಂದ ದೃಶ್ಯಗಳಿವು.

ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ ದಾವಣಗೆರೆ, ಹರಿಹರ ಮತ್ತು ಜಗಳೂರು ತಾಲ್ಲೂಕುಗಳಲ್ಲಿ ಆರು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ನಾಲ್ಕು ಹಾಗೂ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಎಂಟು ಮತಕೇಂದ್ರಗಳನ್ನು ಸ್ಥಾಪಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹಾಗೆಯೇ ಈಶಾನ್ಯ ಪದವೀಧರರ ಕ್ಷೇತ್ರ ವ್ಯಾಪ್ತಿಯ ಹರಪನಹಳ್ಳಿಯ ಎರಡು ಮತಗಟ್ಟೆಗಳಿಗೆ ಉತ್ಸಾಹದಿಂದ ಬಂದ ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಮುಂಜಾನೆ 7 ಗಂಟೆಗೇ ಮತದಾನಕ್ಕೆ ಅವಕಾಶ ನೀಡಿದ್ದರೂ ಮೊದಲಿಗೆ ಮತದಾನ ಮಂದವಾಗಿ ನಡೆಯಿತು. ಬೆಳಿಗ್ಗೆ 10 ಗಂಟೆ ನಂತರ ಮತದಾನ ಸ್ವಲ್ಪ ಚುರುಕಾಯಿತು. ಬೆಳಿಗ್ಗೆ 11 ಗಂಟೆ ವೇಳೆಗೆ ಸುಮಾರು ಶೇ 15ರಷ್ಟು ಮತದಾನವಾಯಿತು. ಮಧ್ಯಾಹ್ನದ ನಂತರ ಮತದಾರರು ಸಾಲುಗಟ್ಟಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಮತಗಟ್ಟೆಗಳು ಕಳೆಗಟ್ಟಿದ್ದವು.

ದಿನವಿಡೀ ಮತಯಾಚನೆ: ದಾವಣಗೆರೆಯ ಹೈಸ್ಕೂಲ್‌ ಮೈದಾನದ ಆವರಣದಲ್ಲಿರುವ ಡಯಟ್‌ ಮತ್ತು ಪ್ರೌಢಶಾಲೆಯಲ್ಲಿ ತಲಾ ಎರಡೆರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತಗಟ್ಟೆಯಿಂದ ನೂರು ಮೀಟರ್‌ ಅಂತರದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಬಿಜೆಪಿ ಮುಖಂಡರು ದಿನವಿಡೀ ಮತಗಟ್ಟೆ ಬಳಿಯೇ ಇದ್ದು, ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಪರ ಮತ ಯಾಚಿಸಿದರು. ಶಾಸಕ ಎಸ್‌.ಎ. ರವೀಂದ್ರನಾಥ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್, ಡಾ.ಎ.ಎಚ್‌. ಶಿವಯೋಗಿ ಸ್ವಾಮಿ ಮತ ನೀಡುವಂತೆ ಶಿಕ್ಷಕರನ್ನು ವೈಯಕ್ತಿಕವಾಗಿ ಮನವಿ ಮಾಡಿಕೊಂಡರು.

ಜೆಡಿಎಸ್‌ ಮುಖಂಡ ಜೆ. ಅಮಾನುಲ್ಲಾ ಖಾನ್ ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಮತ ಯಾಚನೆ ಮಾಡಿದರೆ, ಹರಿಹರ ಮತಗಟ್ಟೆ ಬಳಿ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದಪ್ಪ ಅವರು ಪಕ್ಷದ ಅಭ್ಯರ್ಥಿಯನ್ನೇ ಬೆಂಬಲಿಸುವಂತೆ ಮತದಾರರನ್ನು ಕೇಳಿಕೊಂಡರು. ಬಿಜೆಪಿ ಮುಖಂಡ ಬಿ.ಪಿ. ಹರೀಶ್‌ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಮತದಾರರ ಮನವೊಲಿಸುವ ಕೊನೆಯ ಯತ್ನ ನಡೆಸಿದ್ದು ಕಂಡು ಬಂತು.

ಈಶಾನ್ಯ ಪದವೀಧರರ ಕ್ಷೇತ್ರ: ಶೇ 77.55 ಮತದಾನ

ಹರಪನಹಳ್ಳಿ: ಈಶಾನ್ಯ ಪದವಿಧರರ ಕ್ಷೇತ್ರಕ್ಕೆ ತಾಲ್ಲೂಕಿನಲ್ಲಿ ಶುಕ್ರವಾರ ಮತದಾನ ಶಾಂತಿಯುತವಾಗಿ ನಡೆದಿದ್ದು, ಶೇ 77.55ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 1,252 ಪದವೀಧರ ಮತದಾರರಿದ್ದು, ಹಳೆ ತಾಲ್ಲೂಕು ಕಚೇರಿ ಆವರಣದ ಕಂದಾಯ ನಿರೀಕ್ಷಕರ ಕಚೇರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯ ಮತಗಟ್ಟೆಗಳಲ್ಲಿ ಒಟ್ಟು 971 ಮಂದಿ ಮತದಾನ ಮಾಡಿದ್ದಾರೆ.

ಚನ್ನಗಿರಿ: ಶಾಂತಿಯುತವಾಗಿ ನಡೆದ ಚುನಾವಣೆ

ಚನ್ನಗಿರಿ/ ಬಸವಾಪಟ್ಟಣ: ವಿಧಾನ ಪರಿಷತ್ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಆಯ್ಕೆಗಾಗಿ ಶುಕ್ರವಾರ ಮತದಾನ ಶಾಂತಿಯುತವಾಗಿ ನಡೆಯಿತು. ಚನ್ನಗಿರಿ ಪದವೀಧರ ಕ್ಷೇತ್ರದಲ್ಲಿ ಶೇ 68.66ರಷ್ಟು, ಶಿಕ್ಷಕರ ಕ್ಷೇತ್ರದಲ್ಲಿ ಶೇ 82.13ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ.

ಇನ್ನು ಬಸವಾಪಟ್ಟಣ ಕೇಂದ್ರದಲ್ಲಿ ಪದವೀಧರ ಕ್ಷೇತ್ರಕ್ಕೆ ಶೇ 80.97 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಶೇ 82.92ರಷ್ಟು ಮತದಾರರು ಮತ ಚಲಾಯಿಸಿದರು. ಚನ್ನಗಿರಿ ವಿಭಾಗದಲ್ಲಿ 1,415 ಮತದಾರರು ಇದ್ದು, ಇದರಲ್ಲಿ 1,027 ಮತದಾರರು ಮತದಾನ ಮಾಡಿದ್ದಾರೆ. ಶಿಕ್ಷಕರ ವಿಭಾಗದಲ್ಲಿ 247 ಮತದಾರರು ಇದ್ದು, ಇದರಲ್ಲಿ 200 ಶಿಕ್ಷಕರು ಮತ ಚಲಾಯಿಸಿದ್ದಾರೆ. ತಾಲ್ಲೂಕಿನಲ್ಲಿ ಪದವೀಧರ ಕ್ಷೇತ್ರದಲ್ಲಿ ಒಟ್ಟು 2,990 ಮತದಾರರು ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 616 ಮತದಾರರು ಮತದಾನ ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ತಹಶೀಲ್ದಾರ್ ಎಲ್.ಬಿ. ಚಂದ್ರಶೇಖರ್ ತಿಳಿಸಿದರು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡರಾದ ವಡ್ನಾಳ್ ಅಶೋಕ್ ಹಾಗೂ ಕಾರ್ಯಕರ್ತರು ಮತದಾನ ಕೇಂದ್ರದ ಮುಂದೆ ನಿಂತು ಮತಯಾಚನೆ ಮಾಡಿದರು.

ಹೊನ್ನಾಳಿ: ಕಳೆದ ಬಾರಿಗಿಂತ ಹೆಚ್ಚು ಮತದಾನ

ಹೊನ್ನಾಳಿ‌‌/ನ್ಯಾಮತಿ: ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ಶುಕ್ರವಾರ ಶೇ 86.75
ರಷ್ಟು ಮಂದಿ ಮತದಾನ ಮಾಡಿದ್ದಾರೆ.

415 ಮತದಾರರ ಪೈಕಿ, 360 ಶಿಕ್ಷಕರು ಮತ ಚಲಾಯಿಸಿದರು. ಕಳೆದ ಬಾರಿ ಶೇ 56ರಷ್ಟು ಮತದಾನವಾಗಿತ್ತು ಎಂದು ತಾಲ್ಲೂಕು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶೇ 68.58 ಮತದಾನ: ನೈರುತ್ಯ ಪದವೀಧರ ಕ್ಷೇತ್ರಕ್ಕೆ ಶೇ 68.58ರಷ್ಟು ಮತದಾನವಾಗಿದೆ ಎಂದು ತಹಶೀಲ್ದಾರ್ ತುಷಾರ್ ಬಿ. ಹೊಸೂರು ತಿಳಿಸಿದರು.

ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ಒಟ್ಟು 3,081 ಮತದಾರರು ತಮ್ಮ ಹೆಸರು ನೋಂದಾಯಿಸಿದ್ದರು. 2,113 ಮತದಾರರು ಹಕ್ಕು ಚಲಾಯಿಸಿದ್ದಾರೆ.

ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮತ ಚಲಾಯಿಸಿದರು. ಮತದಾನ ಶಾಂತಿಯುತವಾಗಿ ನಡೆಯಿತು. ಮತದಾನ ನಡೆಯುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನ್ಯಾಮತಿಯ ಮತ ಕೇಂದ್ರದ ಹೊರಗಡೆ ಶಾಸಕ ಎಂ.ಪಿ. ರೇಣುಕಾಚಾರ್ಯ, ಮುಖಂಡ ಡಿ.ಜಿ. ಶಾಂತನಗೌಡ ಪಕ್ಷದ ಕಾರ್ಯಕರ್ತರೊಂದಿಗೆ ಮತ ಯಾಚನೆ ಮಾಡಿದರು.

12ರಂದು ಮತ ಎಣಿಕೆ

ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಭವಿಷ್ಯ ಮತಗಟ್ಟೆ ಸೇರಿದ್ದು, ಮತ ಎಣಿಕೆ ಕಾರ್ಯ ಜೂನ್‌ 12ರಂದು ನಡೆಯಲಿದೆ.

ಆಗ್ನೇಯ ಶಿಕ್ಷಕರ ಕ್ಷೇತ್ರದ ಮತಪೆಟ್ಟಿಗೆಗಳನ್ನು ಬೆಂಗಳೂರಿಗೆ, ಈಶಾನ್ಯ ಪದವೀಧರರ ಕ್ಷೇತ್ರದ ಮತಪೆಟ್ಟಿಗೆಗಳನ್ನು ಕಲಬುರ್ಗಿಗೆ ಕಳುಹಿಸಲಾಗಿದೆ. ಇನ್ನು ನೈರುತ್ಯ ಪದವೀಧರರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಮತಪೆಟ್ಟಿಗೆಗಳನ್ನು ಬಿಗಿ ಭದ್ರತೆಯಲ್ಲಿ ಮೈಸೂರಿಗೆ ರವಾನಿಸಲಾಗಿದ್ದು, ಆಯಾ ಪ್ರಾದೇಶಿಕ ಕೇಂದ್ರಗಳಲ್ಲೇ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT