ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಲೀಗ್‌: ಲಯೊನೆಲ್ ಮೆಸ್ಸಿಗೆ ಮೊದಲ ಗೋಲಿನ ಸಂಭ್ರಮ

ಬಾಪೆ ಕಾಲ್ಚಳಕ: ಪ್ಯಾರಿಸ್ ಸೇಂಟ್‌ ಜರ್ಮನ್‌ ಜಯಭೇರಿ
Last Updated 21 ನವೆಂಬರ್ 2021, 13:32 IST
ಅಕ್ಷರ ಗಾತ್ರ

ಪ್ಯಾರಿಸ್‌: ಅರ್ಜೆಂಟೀನಾ ದೇಶದ ತಾರೆ ಲಯೊನೆಲ್ ಮೆಸ್ಸಿ ಫ್ರೆಂಚ್‌ ಲೀಗ್‌ನಲ್ಲಿ ಮೊದಲ ಗೋಲು ದಾಖಲಿಸಿದರು. ಕಿಲಿಯನ್ ಬಾಪೆ ತಮ್ಮ ವೃತ್ತಿಜೀವನದ ಅತಿವೇಗದ ಗೋಲು ಕೂಡ ಹೊಡೆದರು. ಇವರಿಬ್ಬರ ಸೊಗಸಾದ ಆಟದ ಬಲದಿಂದ ಪ್ಯಾರಿಸ್ ಸೇಂಟ್‌ ಜರ್ಮನ್ (ಪಿಎಸ್‌ಜಿ) ತಂಡ ಗೆದ್ದಿತು.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಪಿಎಸ್‌ಜಿ 3–1ರಿಂದ ನಾಂಟ್‌ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ಬಾಪೆ 2ನೇ ನಿಮಿಷ ಮತ್ತು ಮೆಸ್ಸಿ 87ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು. ಇನ್ನೊಂದು ಗೋಲು ತಂಡಕ್ಕೆ ‘ಉಡುಗೊರೆ‘ ರೂಪದಲ್ಲಿ ನಾಂಟ್‌ ತಂಡದ ಡೆನಿಸ್‌ ಅಪ್ಪೆ (81ನೇ ನಿಮಿಷ) ಅವರಿಂದ ಬಂದಿತು.

ನಾಂಟ್‌ ತಂಡದ ಏಕೈಕ ಗೋಲನ್ನು ರ‍್ಯಾಂಡಲ್ ಕೊಲೊ ಮುವಾನಿ (76ನೇ ನಿಮಿಷ) ಗಳಿಸಿದರು.

ಆರಂಭದಿಂದಲೇ ಆಕ್ರಮಣದ ಆಟಕ್ಕೆ ಮುಂದಾದ ಪಿಎಸ್‌ಜಿ, ಎರಡು ನಿಮಿಷದೊಳಗೇ ಮೊದಲ ಗೋಲಿನ ಸಿಹಿ ಸವಿಯಿತು. ಎದುರಾಳಿ ತಂಡದ ಗೋಲ್‌ಕೀಪರ್‌ ಅಲ್ಬನ್‌ ಲ್ಯಾಫೊಂಟ್ ಅವರನ್ನು ವಂಚಿಸಿದ ಬಾಪೆ ಗೋಲು ಪೆಟ್ಟಿಗೆಯೊಳಗೆ ಚೆಂಡು ಸೇರಿಸಿದರು. ಕ್ರೀಡಾ ದಾಖಲೆಗಳನ್ನು ವಿಶ್ಲೇಷಿಸುವ ಸಂಸ್ಥೆ ‘ಆಪ್ಟಾ‘ ಪ್ರಕಾರ ಇದು 2017ರ ಮೇ ಬಳಿಕ ಪಿಎಸ್‌ಜಿ ತಂಡ ದಾಖಲಿಸಿದ ಅತಿ ವೇಗದ ಗೋಲು ಇದು. ಅಲ್ಲದೆ ಬಾಪೆ ವೃತ್ತಿಬದುಕಿನ ಅತಿವೇಗದ ಗೋಲಾಗಿದೆ.

65ನೇ ನಿಮಿಷದಲ್ಲಿ ಗೋಲ್‌ಕೀಪರ್‌ ಕೇಲರ್‌ ನವಾಸ್‌ ಅವರು ರೆಡ್‌ ಕಾರ್ಡ್‌ ಪಡೆದಿದ್ದರಿಂದ ಪಿಎಸ್‌ಜಿ 10 ಜನರೊಂದಿಗೆ ಆಡಬೇಕಾಯಿತು.

ಪಂದ್ಯದ ಕೊನೆಯ ಹಂತದಲ್ಲಿಬಾಪೆ ನೀಡಿದ ಪಾಸ್‌ನಲ್ಲಿ ಮೆಸ್ಸಿ ಮೋಡಿ ಮಾಡಿದರು. ಪಾಸ್‌ ಪಡೆದ ಅರ್ಜೆಂಟೀನಾ ಆಟಗಾರ ಡ್ರಿಬಲ್ ಮಾಡುತ್ತ ಚೆಂಡನ್ನು ಗೋಲುಪೆಟ್ಟಿಗೆಯ ತುದಿಗೆ ಕೊಂಡೊಯ್ದರು.ಎಡಗಾಲಿನಿಂದ ಒದ್ದು ತಮ್ಮ ‘ಸಿಗ್ನೇಚರ್‌ ಶಾಟ್‌‘ ಮೂಲಕ ಗೋಲು ದಾಖಲಿಸಿದರು.

ಈ ಬೇಸಿಗೆಯಲ್ಲಿ ಬಾರ್ಸಿಲೋನಾದಿಂದ ಪಿಎಸ್‌ಜಿಗೆ ಸೇರಿದ ಮೆಸ್ಸಿ, ಈಗಾಗಲೇ ತಂಡಕ್ಕಾಗಿಚಾಂಪಿಯನ್ಸ್ ಲೀಗ್‌ನಲ್ಲಿ ಮೂರು ಗೋಲುಗಳನ್ನು ಗಳಿಸಿದ್ದರು. ಆದರೆ ಫ್ರೆಂಚ್‌ ಲೀಗ್‌ನಲ್ಲಿ ಐದು ಪಂದ್ಯಗಳನ್ನು ಆಡಿದ್ದರೂ ಗೋಲು ಗಳಿಸಲು ಸಾಧ್ಯವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT