ಜರ್ಮನಿಗೆ ಜಯ ಅನಿವಾರ್ಯ

7
ಇಂದು ಸ್ವೀಡನ್‌ ಎದುರು ‘ಎಫ್‌’ ಗುಂಪಿನ ಹಣಾಹಣಿ

ಜರ್ಮನಿಗೆ ಜಯ ಅನಿವಾರ್ಯ

Published:
Updated:

ಸೋಚಿ: ಹಾಲಿ ವಿಶ್ವ ಚಾಂ‍ಪಿಯನ್‌ ಜರ್ಮನಿ ತಂಡಕ್ಕೆ ಈಗ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದೆ. 21ನೇ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಮೆಕ್ಸಿಕೊ ಎದುರು ಆಘಾತ ಕಂಡಿದ್ದ ಜರ್ಮನಿ ಈಗ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಫಿಶ್ತ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ‘ಎಫ್‌’ ಗುಂಪಿನ ಹಣಾಹಣಿಯಲ್ಲಿ ಮ್ಯಾನುಯೆಲ್‌ ನುಯೆರ್‌ ಬಳಗ ಸ್ವೀಡನ್‌ ತಂಡದ ಸವಾಲು ಎದುರಿಸಲಿದೆ. ಈ ಪಂದ್ಯದಲ್ಲಿ ಸೋತರೆ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಗುಂಪು ಹಂತದಲ್ಲಿ ಹೊರಬಿದ್ದ ಅಪಖ್ಯಾತಿಗೆ ಜರ್ಮನಿ ಒಳಗಾಗಲಿದೆ.

ಸ್ವೀಡನ್‌ ಎದುರಿನ ಹಿಂದಿನ 11 ಪಂದ್ಯಗಳಲ್ಲಿ ಜರ್ಮನಿ ಒಮ್ಮೆಯೂ ಸೋತಿಲ್ಲ. ಆರು ಪಂದ್ಯಗಳಲ್ಲಿ ಗೆದ್ದಿರುವ ಈ ತಂಡ ಐದರಲ್ಲಿ ಡ್ರಾ ಮಾಡಿಕೊಂಡಿದೆ.

ಹಿಂದಿನ ಎರಡು ಮುಖಾಮುಖಿಗಳಲ್ಲಿ ಉಭಯ ತಂಡಗಳು ಒಟ್ಟು 16 ಗೋಲು ದಾಖಲಿಸಿವೆ. 2012ರ ಅಕ್ಟೋಬರ್‌ನಲ್ಲಿ ಜರ್ಮನಿಯಲ್ಲಿ ನಡೆದಿದ್ದ ಪಂದ್ಯ 4–4 ಗೋಲುಗಳಿಂದ ಡ್ರಾ ಆಗಿತ್ತು. 2014ರಲ್ಲಿ ಸ್ವೀಡನ್‌ನಲ್ಲಿ ನಡೆದಿದ್ದ ವಿಶ್ವಕಪ್‌ ಅರ್ಹತಾ ಪಂದ್ಯದಲ್ಲಿ ಜರ್ಮನಿ 5–3 ಗೋಲುಗಳಿಂದ ಗೆದ್ದಿತ್ತು.

ವಿಶ್ವಕಪ್‌ನಲ್ಲಿ ಉಭಯ ತಂಡಗಳು ನಾಲ್ಕು ಸಲ ಎದುರಾಗಿವೆ. ಈ ಪೈಕಿ ಜರ್ಮನಿ ಮೂರರಲ್ಲಿ ಗೆದ್ದಿದ್ದರೆ (1934, 1974 ಮತ್ತು 2006) ಸ್ವೀಡನ್‌ ಒಮ್ಮೆ (1958) ವಿಜಯಿಯಾಗಿದೆ.

ಮೆಕ್ಸಿಕೊ ಎದುರಿನ ಹೋರಾಟದಲ್ಲಿ ಜರ್ಮನಿ ತಂಡದ ರಕ್ಷಣಾ ವಿಭಾಗ ಸೊರಗಿದಂತೆ ಕಂಡಿತ್ತು. ಮಾರ್ವಿನ್‌, ಜೊನಾಸ್‌ ಹೆಕ್ಟರ್‌, ಮಥಾಯಿಸ್ ಜಿಂಟರ್‌, ಮ್ಯಾಟ್‌ ಹಮ್ಮಲ್ಸ್‌ ಮತ್ತು ಜೊಶುವಾ ಕಿಮ್ಮಿಚ್‌ ಪರಿಣಾಮಕಾರಿ ಸಾಮರ್ಥ್ಯ ತೋರಲು ವಿಫಲರಾಗಿದ್ದರು. ಇವರು ಶನಿವಾರ, ಸ್ವೀಡನ್‌ ಆಟಗಾರರು ಆವರಣ ಪ್ರವೇಶಿಸದಂತೆ ನಿಯಂತ್ರಿಸಬೇಕಿದೆ.

ಮಿಡ್‌ಫೀಲ್ಡರ್‌ಗಳಾದ ಸಾಮಿ ಖೇದಿರಾ, ಜೂಲಿಯನ್‌ ಡ್ರ್ಯಾಕ್ಸಲರ್‌, ಟೋನಿ ಕ್ರೂಸ್‌, ಮೆಸಟ್‌ ಓಜಿಲ್‌, ಥಾಮಸ್‌ ಮುಲ್ಲರ್‌, ಸೆಬಾಸ್ಟಿಯನ್‌ ರೂಡಿ ಅವರು ಜವಾಬ್ದಾರಿ ಅರಿತು ಆಡಬೇಕಿದೆ.

ಮುಂಚೂಣಿ ವಿಭಾಗದ ಆಟಗಾರರಾದ ಟಿಮೊ ವೆರ್ನರ್‌, ಮಾರ್ಕೊ ರೆಯುಸ್‌ ಮತ್ತು ಮರಿಯೊ ಗೊಮೆಜ್‌ ಅವರ ಮೇಲೂ ಜವಾಬ್ದಾರಿ ಹೆಚ್ಚಿದೆ.

ಮೊದಲ ಪಂದ್ಯದಲ್ಲಿ 1–0 ಗೋಲಿನಿಂದ ದಕ್ಷಿಣ ಕೊರಿಯಾ ಎದುರು ಗೆದ್ದಿದ್ದ ಸ್ವಿಡನ್‌, ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿದೆ. ಈ ತಂಡ ಫಿಶ್ತ್‌ ಕ್ರೀಡಾಂಗಣದಲ್ಲಿ 4–4–2ರ ಯೋಜನೆಯೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಹಿಂದಿನ ಪಂದ್ಯದಲ್ಲಿ ಗೋಲು ದಾಖಲಿಸಿದ್ದ ನಾಯಕ ಆ್ಯಂಡ್ರೆಸ್‌ ಗ್ರಾನ್‌ಕ್ವಿಸ್ಟ್‌ ಈ ತಂಡದ ಆಧಾರ ಸ್ತಂಭವಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !