ನಿರಾಶ್ರಿತರ ಶಿಬಿರದಿಂದ ಪುಟಿದೆದ್ದ ಕಾಲ್ಚೆಂಡು

7

ನಿರಾಶ್ರಿತರ ಶಿಬಿರದಿಂದ ಪುಟಿದೆದ್ದ ಕಾಲ್ಚೆಂಡು

Published:
Updated:

ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಎಂದರೆ ಕೇವಲ ಕ್ರೀಡಾ ಚಟುವಟಿಕೆಯಲ್ಲ. ಮನುಕುಲದ ಸಾಮರಸ್ಯ, ಶಾಂತಿ ಸಂದೇಶ, ಕ್ರೀಡಾ ಮನೋಭಾವ ಮೂಡಿಸುವ ವೇದಿಕೆಯೂ ಹೌದು. ಸಾಮಾಜಿಕ, ಆರ್ಥಿಕ, ರಾಜಕೀಯ ಸಂಘರ್ಷಗಳಲ್ಲಿ ನೊಂದ, ಬೆಂದ ಸಮುದಾಯಗಳ ಸ್ವಾಭಿಮಾನ ಬಡಿದೆಬ್ಬಿಸುವ, ಆ ಸಮುದಾಯಗಳ ಪ್ರತಿಭೆಗಳ ಬೆಳವಣಿಗೆಗೆ ಚಿಮ್ಮುಹಲಗೆಯಾಗುವ ನಿರಂತರ ಪ್ರಕ್ರಿಯೆ ಇಲ್ಲಿ ನಡೆಯುತ್ತದೆ. ಅಂತಹ ಹಲವು ಪ್ರತಿಭೆಗಳು ತಾರೆಗಳಾಗಿ ಹೊರಹೊಮ್ಮುವ ಅವಕಾಶವನ್ನು ಈ ಬಾರಿಯ ವಿಶ್ವಕಪ್ ಕೂಡ ನೀಡಿದೆ. ಬಡತನ, ಜನಾಂಗೀಯ ಸಂಘರ್ಷ, ಯುದ್ಧದ ಬೆಂಕಿಯ ಕಾವಿನಲ್ಲಿ ಅರಳಿದ ಹೂವುಗಳು ಇದೀಗ ಫಿಫಾ ಅಂಗಳದಲ್ಲಿ ಸುವಾಸನೆ ಬೀರುತ್ತಿವೆ.

ಲೂಕಾ ಮಾಡ್ರಿಕ್ ಎಂಬ ಹೆಸರು ಈಗ ಫುಟ್‌ಬಾಲ್ ಪ್ರೇಮಿಗಳ ಮನದಲ್ಲಿ ನಲಿಯುತ್ತಿದೆ. ರಷ್ಯಾದಲ್ಲಿ ನಡೆಯುತ್ತಿರುವ 21ನೇ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಕ್ವಾರ್ಟರ್‌ ಫೈನಲ್ ತಲುಪಿರುವ ಕ್ರೊವೇಷ್ಯಾ ತಂಡದ ನಾಯಕ ಈ ಮಾಡ್ರಿಕ್.

ಈ ಟೂರ್ನಿಯ ‘ಡಿ’ ಗುಂಪಿನಲ್ಲಿದ್ದ ಕ್ರೊವೇಷ್ಯಾ ತಂಡವು ಘಟಾನುಘಟಿ ಅರ್ಜೆಂಟೀನಾ, ನೈಜೀರಿಯಾ ಮತ್ತು ಐಸ್‌ಲ್ಯಾಂಡ್ ತಂಡಗಳನ್ನು ಸೋಲಿಸಿತ್ತು. 16ರ ಘಟ್ಟದ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದ್ಧ ನಡೆದಿದ್ದ ಜಿದ್ದಾಜಿದ್ದಿನ ಹೋರಾಟದಲ್ಲಿ ಪೆನಾಲ್ಟಿ ಸುತ್ತಿನಲ್ಲಿ ರೋಚಕ ಗೆಲುವು ಸಾಧಿಸಿತ್ತು. ಇದು ಮಾಡ್ರಿಕ್ ಮಟ್ಟಿಗೆ ದೊಡ್ಡ ಸಾಧನೆಯೇ ಹೌದು.

ನಿರಾಶ್ರಿತರ ಶಿಬಿರದಲ್ಲಿ ಕಷ್ಟ ಕೋಟಲೆಗಳ ನಡುವೆಯೇ ತನ್ನ ಕಾಲುಗಳನ್ನು ಗಟ್ಟಿಮುಟ್ಟಾಗಿಸಿಕೊಂಡು ಚೆಂಡನ್ನು ಆಡಿಸುತ್ತ ಬೆಳೆದ ಮಾಡ್ರಿಕ್ ಈ ಹಂತಕ್ಕೆ ಬೆಳೆಯುತ್ತಾರೆಂದು ಅಂದುಕೊಂಡವರು ಕಡಿಮೆ. ಏಕೆಂದರೆ, ಈ ಕಾಲದ ಫುಟ್‌ಬಾಲ್ ಕ್ರೀಡೆಗೆ ಒಗ್ಗಿಕೊಳ್ಳುವುದು ಸುಲಭದ ಮಾತಲ್ಲ. ಇಂದು ಐಸ್‌ಲ್ಯಾಂಡ್‌ನಂತಹ ಪುಟ್ಟ ದೇಶವೂ ಅರ್ಜೆಂಟೀನಾದಂತಹ ಬಲಿಷ್ಠ ತಂಡಗಳಿಗೆ ಬಿಸಿ ಮುಟ್ಟಿಸುವ ಸಾಮರ್ಥ್ಯ ಬೆಳೆಸಿಕೊಂಡಿದೆ. ಇವೆಲ್ಲದರ ನಡುವೆಯೂ ಮಾಡ್ರಿಕ್ ತಮ್ಮ ಬಾಲ್ಯದ ಕಹಿ ಘಟನೆಗಳನ್ನು ಹಿಂದಿಕ್ಕುತ್ತ ತಮ್ಮ ದೇಶದ ಯುವಜನತೆಯ ‘ರೋಲ್ ಮಾಡೆಲ್’ ಆಗಿ ಬೆಳೆದಿರುವುದು ಒಂದು ಯಶೋಗಾಥೆ. ಕ್ರೊವೇಷ್ಯಾದ ವೆಲೆಬಿಟ್ ಪರ್ವತ ಸಾಲುಗಳ ತಪ್ಪಲಲ್ಲಿ ಅಡಗಿ ಕುಳಿತಿರುವಂತೆ ಭಾಸವಾಗುವ ಝಟೋನ್ ಒಬ್ರೋವಾಕಿ ಎಂಬ ಪುಟ್ಟ ಹಳ್ಳಿಯಲ್ಲಿ ಲೂಕಾ ಬಾಲ್ಯದ ಬಹುಸಮಯವನ್ನು ಕಳೆದರು. ಒಂದು ಮೈಲಿಗೆ ಒಂದು ಮನೆ ಸಿಕ್ಕರೆ ಹೆಚ್ಚು ಎಂಬಂತಿದ್ದ ಪ್ರದೇಶ ಅದು. ಸಾಲದ್ದಕ್ಕೆ ಗಣಿಗಾರಿಕೆಯ ಅಡ್ಡಪರಿಣಾಮಗಳನ್ನು ಎದುರಿಸುತ್ತಿದ್ದ ಜಾಗ. ಬಾಂಬ್‌ ಶೆಲ್‌ಗಳ ಸಿಡಿತದ ಸದ್ದು, ದೂಳು, ಬೆಂಕಿ ಕಿಡಿಗಳ ಹಾರಾಟವನ್ನು ನೋಡುತ್ತಲೇ ಬೆಳೆದವರು ಮಾಡ್ರಿಕ್.

ಅವರ ಅಜ್ಜನ ಹೆಸರು ಕೂಡ ‘ಲೂಕಾ’. ಅವರ ‍ಪ್ರಭಾವ ಮಾಡ್ರಿಕ್ ಮೇಲೆ ಹೆಚ್ಚಿತ್ತು. 1990ರಲ್ಲಿ ಕ್ರೊವೇಷ್ಯಾದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿ ಹೆಚ್ಚಿತು. ಸರ್ಬಿಯಾದೊಂದಿಗೆ ಯುದ್ಧ ಆರಂಭವಾಯಿತು. ಇದರಲ್ಲಿ ನೂರಾರು ಜನ ಹತ್ಯೆಯಾದರು. ಸಾವಿರಾರು ಮಂದಿ ನಿರಾಶ್ರಿತರಾದರು. ಸರ್ಬಿಯಾ ಸೈನಿಕರು ಲೂಕಾನ ಅಜ್ಜನನ್ನು ಕೊಂದು ಹಾಕಿದರು. ಸೈನಿಕರು ಹಚ್ಚಿದ ಕಿಚ್ಚಿಗೆ ಮನೆ, ಜಾನುವಾರು ಜೀವತೆತ್ತವು.

ಐದು ವರ್ಷದ ಹುಡುಗ ಲೂಕಾನನ್ನು ಎದೆಗವಚಿಕೊಂಡ ಅವರ ಕುಟುಂಬವು 40 ಕಿಲೋ ಮೀಟರ್‌ ದೂರದ ಜದಾರ್ ಪಟ್ಟಣಕ್ಕೆ ಪರಾರಿಯಾಯಿತು. ಅಲ್ಲಿ ನಿರಾಶ್ರಿತರ ಶಿಬಿರದಲ್ಲಿ ಲೂಕಾ ಫುಟ್‌ಬಾಲ್ ಮೋಡಿ ಗರಿಗೆದರಿತು. 1991–96ರ ಅವಧಿಯಲ್ಲಿ ನಡೆದಿದ್ದ ಯುದ್ಧದಲ್ಲಿ ಸರ್ಬಿಯಾದ ಬಂಡುಕೋರರು ಹಾಕುತ್ತಿದ್ದ ಶೆಲ್‌ಗಳು ಜದಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಸದ್ದು ಮಾಡುತ್ತಿದ್ದವು. ಆರಂಭದಲ್ಲಿ ಅದಕ್ಕೆ ಅಂಜುತ್ತಿದ್ದ ಬಾಲಕ ಲೂಕಾ ಭಯದ ಗುಂಗಿನಿಂದ ಹೊರಬರಲು ಫುಟ್‌ಬಾಲ್ ಆಟದಲ್ಲಿ ತಲ್ಲೀನನಾಗುತ್ತಿದ್ದ. ರಕ್ತಪಾತ, ಸ್ಫೋಟದ ಭೀಕರತೆಗಳನ್ನು ಮನಸ್ಸಿನಿಂದ ಅಳಿಸಿ ಹಾಕುವಲ್ಲಿ ಫುಟ್‌ಬಾಲ್ ಯಶಸ್ವಿಯಾಯಿತು. ಚೋಟುದ್ದದ ಹುಡುಗನ ಚುರುಕಾದ ಕಾಲ್ಚಳಕ ಅಲ್ಲಿದ್ದವರ ಮನರಂಜನೆಯ ಮಾಧ್ಯಮವಾಯಿತು. ಹುಡುಗನ ಫುಟ್‌ಬಾಲ್ ಕೌಶಲದ ವಿಶೇಷವು ಶಿಬಿರ ದಾಟಿ ಊರೊಳಗೂ ಸುದ್ದಿಯಾಯಿತು.

‘ಅತಿಚುರುಕು ಸ್ವಭಾವದ ಬಾಲಕನೊಬ್ಬ ಶಿಬಿರದಲ್ಲಿ ಚೆನ್ನಾಗಿ ಫುಟ್‌ಬಾಲ್ ಆಡುತ್ತಿದ್ದಾನೆ. ಮಲಗುವಾಗಲೂ ಚೆಂಡನ್ನು ಎದೆಗವಚಿಕೊಂಡು ಮಲಗುತ್ತಾನೆಂದು ಕೆಲವರು ಹೇಳಿದ್ದನ್ನು ಕೇಳಿದ್ದೆ. ಆ ಹುಡುಗ ಸಿಕ್ಕಾಗ ನಮ್ಮ ಕ್ಲಬ್‌ನಲ್ಲಿ ಆಡಲು ಕರೆತಂದಿದ್ದೆ’ ಎಂದು ಜದಾರ್‌ನ ಮೊದಲ ಡಿವಿಷನ್ ಕ್ಲಬ್‌ನ ತರಬೇತುದಾರ ಜೊಸಿಪ್ ಬೆಜ್ಲೊ ಅವರು ಎ.ಎಫ್‌.ಪಿ. ಸುದ್ದಿಜಾಲಕ್ಕೆ ನೀಡಿದ್ದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದರು. ಬೆಜ್ಲೋ ಅವರ ಅಕಾಡೆಮಿಯಲ್ಲಿ ಆಡಲು ಆರಂಭಿಸಿದ ಲೂಕಾ ಮಾಡ್ರಿಕ್ ಜೀವನ ಹೊಸ ತಿರುವು ಪಡೆಯಿತು.

‘ದುರಂತದ ಹಾದಿಯನ್ನು ಸವೆಸಿ ಬಂದಿರುವ ಲೂಕಾ ಈಗ ನಮ್ಮ ದೇಶದ ಮಕ್ಕಳಿಗೆ ಆದರ್ಶ ವ್ಯಕ್ತಿ. ಆತನನ್ನು ಮಕ್ಕಳು ಅನುಕರಿಸುತ್ತಿದ್ದಾರೆ. ಫುಟ್‌ಬಾಲ್‌ ಆಟವು ಇಲ್ಲಿಯ ಮಕ್ಕಳು ಮತ್ತು ಯುವಜನರಲ್ಲಿ ಹೊಸ ಭರವಸೆ ಮೂಡಿಸುತ್ತಿದೆ. ಮಾಡ್ರಿಕ್ ನಮ್ಮ ದೇಶದ ನೆಚ್ಚಿನ ನಾಯಕ’ ಎಂದು ಬೆಜ್ಲೊ ಹೆಮ್ಮೆಯಿಂದ ಹೇಳುತ್ತಾರೆ.

ಅವರು ಇದೀಗ ಪ್ರತಿಷ್ಠಿತ ರಿಯಲ್ ಮ್ಯಾಡ್ರಿಡ್‌ ತಂಡದ ಪ್ರಮುಖ ಮಿಡ್‌ಫೀಲ್ಡರ್ ಆಗಿದ್ದಾರೆ. 1998ರಲ್ಲಿ ಫಿಫಾಗೆ ಅರ್ಹತೆ ಪಡೆದ ನಂತರ ಕ್ರೊವೇಷ್ಯಾ ಇದುವರೆಗೂ ಪ್ರಶಸ್ತಿ ಗೆದ್ದಿಲ್ಲ. ಇದೀಗ ಗೆಲುವಿನ ಆಸೆಯನ್ನು ಮಾಡ್ರಿಕ್ ಮತ್ತು ಬಳಗವು ಚಿಗುರಿಸಿದೆ. ಈ ಲೇಖನ ಪ್ರಕಟವಾಗುವ ವೇಳೆಗೆ ಕ್ರೊವೇಷ್ಯಾ ಮತ್ತು ಆತಿಥೇಯ ರಷ್ಯಾ ತಂಡಗಳ ನಡುವಣ ಕ್ವಾರ್ಟರ್‌ ಫೈನಲ್ ಪಂದ್ಯದ ಫಲಿತಾಂಶ ಹೊರಬಿದ್ದಿರುತ್ತದೆ. ಇಂತಹ ಹತ್ತಾರು ಆಟಗಾರರು ಈಗ ಗಮನ ಸೆಳೆಯುತ್ತಿದ್ದಾರೆ.

ಡೆನ್ಮಾರ್ಕ್ ತಂಡದಲ್ಲಿರುವ ಪೌಲೊ ಸಿಸ್ಟೊ, ಸ್ವಿಟ್ಜರ್ಲೆಂಡ್‌ನ ಹೆರ್ಡನ್ ಶಾಕೀರಿ, ನೈಜೀರಿಯಾದ ವಿಕ್ಟರ್‌ ಮೊಸೆಸ್ ಅವರೆಲ್ಲರದೂ ಹೆಚ್ಚುಕಡಿಮೆ ಇದೇ ಕಥೆ. ಚಳಿ, ಗಾಳಿ, ಮಳೆಗೆ ಆಶ್ರಯವಿಲ್ಲದ ಶೆಡ್‌ಗಳಲ್ಲಿ ಬದುಕುಳಿದು ಬೆಳೆದು ಬಂದವರು. ಆದರೆ, ಎಂದಿಗೂ ಫುಟ್‌ಬಾಲ್ ಆಟದ ಸಂಗ ಮತ್ತು ಗುಂಗನ್ನು ಬಿಡದವರು. ಈಗ ವಿಶ್ವದ ಅಂಗಳದಲ್ಲಿ ಮೆರೆಯುತ್ತಿದ್ದಾರೆ. ಈ ಟೂರ್ನಿಯಲ್ಲಿ ಯಾವುದೋ ಒಂದು ತಂಡ ಪ್ರಶಸ್ತಿ ಗೆಲ್ಲಬಹುದು. ಆದರೆ, ನಿಜಕ್ಕೂ ಜಯಭೇರಿ ಬಾರಿಸುವುದು ಕ್ರೀಡೆಯೇ ಎಂಬುದರಲ್ಲಿ ಸಂಶಯವೇ ಇಲ್ಲ.

ರೊಮೆಲು ಲುಕಾಕು ಎಂಬ ದೈತ್ಯ

ಈ ಬಾರಿಯ ಚಿನ್ನದ ಬೂಟು ಜಯಿಸುವವರ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಬೆಲ್ಜಿಯಂ ಆಟಗಾರ ರೊಮೆಲು ಲುಕಾಕು 14 ವರ್ಷಗಳ ಹಿಂದೆ ಹರಿದ ಬೂಟಿಗಾಗಿಯೂ ಪರದಾಡಿದ್ದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನದಲ್ಲಿ ಬಾಲ್ಯ ಕಳೆದ ಲುಕಾಕು ಈಗ ಫುಟ್‌ಬಾಲ್ ಪ್ರಿಯರ ಕಣ್ಮಣಿಯಾಗಿದ್ದಾರೆ. ಈ ಟೂರ್ನಿಯ ‘ಜಿ’ ಗುಂಪಿನಲ್ಲಿ ಟ್ಯುನಿಷಿಯಾ ಮತ್ತು ಪನಾಮ ತಂಡಗಳ ಎದುರು ಅಮೋಘ ಆಟವಾಡಿದ್ದ ಲುಕಾಕು ತಂಡದ ಗೆಲುವಿನ ರೂವಾರಿಯಾಗಿದ್ದರು.

ತನ್ನ 12ನೇ ವಯಸ್ಸಿನಲ್ಲಿ ಅಪ್ಪನ ಹರಿದಿದ್ದ ಬೂಟು ಹಾಕಿಕೊಂಡೇ ಫುಟ್‌ಬಾಲ್ ಆಡುತ್ತಿದ್ದ ಲುಕಾಕು ಅವರ ಅಮೋಘವಾದ ಸ್ಟ್ರೈಕಿಂಗ್‌ ಎಲ್ಲರ ಗಮನ ಸೆಳೆದಿತ್ತು. ಇದೀಗ ಅವರು ವಿಶ್ವದ ಪ್ರಮುಖ ಸ್ಟ್ರೈಕರ್‌ಗಳಲ್ಲಿ ಒಬ್ಬರಾಗಿದ್ದಾರೆ. ಕಪ್ಪು ಜನಾಂಗದ ಪ್ರತಿನಿಧಿಯಾಗಿ ಬೆಳಗುತ್ತಿದ್ದಾರೆ. ಈ ಆಧುನಿಕ ಯುಗದಲ್ಲಿಯೂ ತಮ್ಮ ಜನಾಂಗದ ಬಗ್ಗೆ ಕೇಳಿ ಬರುವ ನಿಂದನೆಗಳನ್ನು ಸಹಿಸಿಕೊಂಡು ಬೆಳೆದು ಬಂದಿದ್ದಾರೆ. ಅವರು ಗೋಲು ಹೊಡೆದಾಗ ತಂಡದಲ್ಲಿರುವ ಎಲ್ಲ ವರ್ಣದ ಆಟಗಾರರೂ ಬಿಗಿದಪ್ಪಿ ಮುದ್ದಿಸುವುದು ಕ್ರೀಡೆಯ ಮೂಲ ಉದ್ದೇಶದ ಸಾರ್ಥಕತೆಯಂತೆ ಬಿಂಬಿತವಾಗುತ್ತದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !