ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷ ನಗರದ ನಾಗರಿಕರು ನಿರಾಳ

ನೀರಿನ ಆತಂಕ ದೂರ ಮಾಡಿದ ಮುಂಗಾರು ಪೂರ್ವ ಮಳೆ
Last Updated 14 ಮೇ 2018, 8:18 IST
ಅಕ್ಷರ ಗಾತ್ರ

ಮಂಗಳೂರು: ಮುಂಗಾರು ಪೂರ್ವ ಸುರಿದ ಉತ್ತಮ ಮಳೆಯಿಂದಾಗಿ ಈ ಬಾರಿ ನಗರದ ನಾಗರಿಕರು ನಿರಾಳರಾಗಿದ್ದಾರೆ. ಮಳೆಯಿಂದಾಗಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಆರಂಭವಾಗಿದ್ದು, ಪ್ರತಿ ಬಾರಿ ಉದ್ಭವಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ಈ ವರ್ಷ ಇಲ್ಲದಾಗಿದೆ.

ಕಳೆದ ವರ್ಷ 5 ಮೀಟರ್‌ ಎತ್ತರಕ್ಕೆ ನೀರು ಸಂಗ್ರಹಿಸಲಾಗಿದ್ದು, ಈ ವರ್ಷದಿಂದ ತುಂಬೆ ಕಿಂಡಿ ಅಣೆಕಟ್ಟೆಯಲ್ಲಿ 6 ಮೀಟರ್‌ ನೀರು ನಿಲ್ಲಿಸಲಾಗುತ್ತಿದೆ. ಸದ್ಯಕ್ಕೆ ಒಟ್ಟು ಸಂಗ್ರಹಣೆ ಮಾಡಿರುವ ನೀರಿನ ಮಟ್ಟದಲ್ಲಿ 10 ಸೆಂ.ಮೀ. ಮಾತ್ರ ಕಡಿಮೆ
ಯಾಗಿದೆ. ಇದರ ಆಧಾರದಲ್ಲಿ ಮಂಗಳೂರು ನಗರಕ್ಕೆ ಕನಿಷ್ಠ 50 ದಿನಗಳ
ವರೆಗೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ. ಅಂದರೆ ಜೂನ್‌ 20ರವರೆಗೆ ನೀರು ಅಬಾಧಿತವಾಗಿ ನೀರು ಪೂರೈಕೆ ಮಾಡಬಹುದಾಗಿದೆ.

ಬೇಸಿಗೆಯಲ್ಲಿ ಸಾಮಾನ್ಯವಾಗಿ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನಿತ್ಯ ಸುಮಾರು 3 ರಿಂದ 5 ಸೆಂ.ಮೀ. ನೀರು ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ, ಇದೀಗ ಮುಂಗಾರು ಪೂರ್ವದಲ್ಲಿಯೇ ಮಳೆ ಆರಂಭವಾಗಿದ್ದು, ತುಂಬೆ ಡ್ಯಾಂನ ಮೇಲ್ಭಾಗದಲ್ಲಿರುವ ಶಂಭೂರು ಎಆರ್‌ಎಂ ಡ್ಯಾಂನಲ್ಲಿ ಪೂರ್ಣ ಪ್ರಮಾಣದಲ್ಲಿ 5 ಮೀಟರ್‌ ನೀರು ಸಂಗ್ರಹವಿದೆ.

ತುಂಬೆ ಕಿಂಡಿ ಅಣೆಕಟ್ಟೆಯನ್ನು ಮಂಗಳೂರು ನಗರದ ಮುಂದಿನ 20ರಿಂದ 25 ವರ್ಷಗಳವರೆಗಿನ ನೀರಿನ ಅವಶ್ಯಕತೆಯನ್ನು ಮನಗಂಡು 2009ರಲ್ಲಿ ರೂಪಿಸಲಾಗಿತ್ತು. 2016 ರಲ್ಲಿ ಅಣೆಕಟ್ಟೆಯ ಉದ್ಘಾಟನೆಯಾಗಿತ್ತು. ಡ್ಯಾಂನ ಎತ್ತರ 12 ಮೀಟರ್‌ ಆಗಿದ್ದು, ಗರಿಷ್ಠ ನೀರು 7 ಮೀಟರ್‌ವರೆಗೆ ನಿಲ್ಲಿಸಬಹುದಾಗಿದೆ. ಆದರೆ 7 ಮೀಟರ್‌ ನೀರು ಸಂಗ್ರಹಿಸಿದರೆ ನದಿಯ ಎರಡೂ ಕಡೆಗಳಲ್ಲಿ ಕೃಷಿ ಭೂಮಿ ಸೇರಿದಂತೆ ಗಣನೀಯ ಪ್ರಮಾಣದಲ್ಲಿ ಪ್ರದೇಶ ಜಲಾವೃತಗೊಳ್ಳುವುದರಿಂದ, 2017ರಲ್ಲಿ 5 ಮೀಟರ್‌ ಎತ್ತರಕ್ಕೆ ನೀರು ಸಂಗ್ರಹಿಸಲಾಯಿತು. ಇದರಿಂದ ನದಿಪಾತ್ರದ ಎರಡೂ ಕಡೆಗಳಲ್ಲಿ 19 ಎಕರೆ ಜಮೀನು ಮುಳುಗಡೆಯಾಗಿತ್ತು.

ಈ ವರ್ಷ 6 ಮೀಟರ್‌ ನೀರು ಸಂಗ್ರಹ ಮಾಡಲಾಗಿದೆ. ಗರಿಷ್ಠ ಮಟ್ಟ 7 ಮೀಟರ್‌ ನೀರು ಸಂಗ್ರಹಿಸಿದರೆ ಸುಮಾರು 85 ರಿಂದ 90 ದಿನಗಳವರೆಗೆ ನಗರಕ್ಕೆ ಕುಡಿಯುವ ನೀರು ಅಬಾಧಿತವಾಗಿ ಸರಬರಾಜು ಮಾಡಬಹುದಾಗಿದೆ. 6 ಮೀಟರ್‌ವರೆಗೆ ನೀರು ಸಂಗ್ರಹವಿದ್ದರೆ ಒಳಹರಿವು ಸ್ಥಗಿತಗೊಂಡ 55 ರಿಂದ 60 ದಿನಗಳವರೆಗೆ ನೀರು ಪೂರೈಕೆ ಮಾಡಬಹುದಾಗಿದೆ. ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರು ಕಡಿಮೆ ಯಾದರೆ, ಎಎಂಆರ್‌ ಡ್ಯಾನಿಂದ ನೀರು ಬಿಟ್ಟು ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಾಗುತ್ತದೆ.

ಪೂರೈಕೆ ಸಾಮರ್ಥ್ಯ: ನಗರಕ್ಕೆ ನಿತ್ಯ 160 ಎಂಎಲ್‌ಡಿ ನೀರು ಸರಬರಾಜಾಗುತ್ತಿದೆ. ಈ ಪ್ರಮಾಣವನ್ನು ಲೆಕ್ಕಹಾಕಿ 4 ಮೀಟರ್‌ ಎತ್ತರಕ್ಕೆ ನಿಲ್ಲಿಸಿದರೆ 52.1 ಲಕ್ಷ ಕ್ಯುಬಿಕ್‌ ಮೀಟರ್‌ ನೀರು ಸಂಗ್ರಹ ಮಾಡಿ 23 ದಿನಗಳವರೆಗೆ ನಗರಕ್ಕೆ ನೀರು ಪೂರೈಕೆ ಮಾಡಬಹುದಾಗಿದೆ.

5 ಮೀಟರ್‌ ಎತ್ತರಕ್ಕೆ ನೀರು ನಿಲ್ಲಿಸಿದರೆ 77.1 ಲಕ್ಷ ಕ್ಯುಬಿಕ್‌ ಮೀಟರ್‌ ನೀರು ಸಂಗ್ರಹವಾಗುತ್ತದೆ. ಇದು 40 ದಿನಗಳವರೆಗೆ ಸಾಕಾಗುತ್ತದೆ. 5.50 ಮೀಟರ್‌ ಎತ್ತರಕ್ಕೆ ಸಂಗ್ರಹ ಮಾಡಿದರೆ 91.7 ಲಕ್ಷ ಕ್ಯುಬಿಕ್‌ ಮೀಟರ್‌ ನೀರು ಸಂಗ್ರಹವಾಗಲಿದ್ದು, ಇದರಿಂದ 48 ದಿನಗಳವರೆಗೆ ನೀರು ಪೂರೈಕೆ ಮಾಡ
ಬಹುದು. 6 ಮೀಟರ್‌ ಎತ್ತರಕ್ಕೆ ನಿಲ್ಲಿಸಿದರೆ 1.08 ಕೋಟಿ ಕ್ಯುಬಿಕ್‌ ಮೀಟರ್‌ ನೀರು ಸಂಗ್ರಹವಾಗಲಿದ್ದು, 55 ದಿನಗಳವರೆಗೆ ಪೂರೈಕೆ ಮಾಡಬಹುದಾಗಿದೆ.

ಕಳೆದ ವರ್ಷ 4.3 ಮೀಟರ್‌: 2017 ರಲ್ಲಿ ತುಂಬೆ ಅಣೆಕಟ್ಟೆಯಲ್ಲಿ 5 ಮೀಟರ್‌ ನೀರು ಸಂಗ್ರಹ ಮಾಡಲಾಗಿದ್ದು ಏಪ್ರಿಲ್‌ 19ರಂದು 4.3 ಮೀಟರ್‌ ನೀರು ಸಂಗ್ರಹವಿತ್ತು. ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುವ ಆತಂಕ ಕಾಡಿದ್ದರೂ ಮೇ ತಿಂಗಳಿನಲ್ಲಿ ಸುರಿದ ಮಳೆ ನೆರವಿಗೆ ಬಂದಿತ್ತು.

ಈ ಬಾರಿ ಏಪ್ರಿಲ್‌ನಲ್ಲಿ ನೇತ್ರಾವತಿ ನದಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದು ನೀರಿನ ಸಮಸ್ಯೆ ನೀಗಿಸುವಲ್ಲಿ ಸಹಕಾರಿಯಾಗಿದೆ. ನೇತ್ರಾವತಿ ನದಿಯಲ್ಲಿ ಕ್ಷೀಣಗೊಂಡಿದ್ದ ಒಳಹರಿವು ಹೆಚ್ಚಳವಾಗಿದ್ದು, ಎಆಂಆರ್‌ ಡ್ಯಾಂಗೆ ಈ ವರೆಗೆ ಸುಮಾರು 20 ಸೆಂ.ಮೀ. ನೀರು ಹರಿದು ಬಂದಿದೆ.

ಮಳೆಯಾಗಿರುವುದರಿಂದ ನದಿ ಪಕ್ಕದಲ್ಲಿರುವ ಅಡಿಕೆ ತೋಟ ಸಹಿತ ಕೃಷಿಗೆ ನದಿ ನೀರಿನ ಬಳಕೆ ಕಡಿಮೆ
ಯಾಗಿದೆ. ಇದು ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗಿದೆ.

ಬೇಡಿಕೆ ಕುಗ್ಗಿದ ಟ್ಯಾಂಕರ್ ನೀರು

ಈ ಬಾರಿ ತುಂಬೆಯಲ್ಲಿ ನೀರಿನ ಸಂಗ್ರಹ ಉತ್ತಮವಾಗಿದ್ದು, ಬಹುತೇಕ ಕಡೆಗಳಲ್ಲಿ ನಿತ್ಯ ನೀರು ಪೂರೈಕೆ ಆಗುತ್ತಿದೆ. ಹೀಗಾಗಿ ಟ್ಯಾಂಕರ್‌ ನೀರಿನ ಬೇಡಿಕೆಯೂ ಈ ಬಾರಿ ಕುಗ್ಗಿದೆ.

ಸದ್ಯಕ್ಕೆ 3ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕರ್‌ ನೀರಿಗೆ ₹500 ಇದ್ದರೆ, 6 ಸಾವಿರ ಲೀಟರ್‌ಗೆ ₹900 ಇದೆ. ಉಳಿದಂತೆ ಹೆಚ್ಚು ದೂರ ಹಾಗೂ ಎತ್ತರದ ಪ್ರದೇಶಕ್ಕೆ ಅಂದಾಜು ₹200ರಿಂದ 300 ಹೆಚ್ಚು ನೀಡಬೇಕಾಗುತ್ತದೆ.

2016ರಲ್ಲಿ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಗಣನೀಯ ಇಳಿಕೆಯಾದ ಪರಿಣಾಮ ಖಾಸಗಿ ನೀರು ಪೂರೈಕೆಯ ಎಲ್ಲ ಟ್ಯಾಂಕರ್‌ಗಳನ್ನು ಪಾಲಿಕೆಯೇ ವಶಕ್ಕೆ ಪಡೆದು ಜನರಿಗೆ ನೀರು ಪೂರೈಸಿತ್ತು. ಆದರೆ 2017ರಲ್ಲಿ ನೀರಿನ ಸಮಸ್ಯೆ ಕಂಡುಬಂದ ಪ್ರದೇಶಕ್ಕೆ ಪಾಲಿಕೆಯು 2- 3 ದಿನಕ್ಕೊಮ್ಮೆ ನೀರು ಪೂರೈಸಿ ಪರಿಸ್ಥಿತಿಯನ್ನು ನಿಭಾಯಿಸಿತ್ತು. ಹಾಗಾಗಿ ಟ್ಯಾಂಕರ್‌ಗಳ ಬೇಡಿಕೆ ಕೊಂಚ ಕಡಿಮೆಯಾಗಿತ್ತು.

**
ನೀರಿನ ಕೊರತೆ ಇಲ್ಲ. ಇದೇ 8 ರಂದು ಎಎಂಆರ್ ಡ್ಯಾಮ್‌ನಿಂದ ನೀರು ಬಿಡಿಸಿದ್ದು, ತುಂಬೆಯಲ್ಲಿ 6 ಮೀಟರ್‌ ನೀರು ಸಂಗ್ರಹಿಸಲಾಗಿದೆ
- ಮುಹಮ್ಮದ್‌ ನಜೀರ್, ಪಾಲಿಕೆ ಆಯುಕ್ತ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT