ಲುಕಾಕು ಭಯದಲ್ಲಿ ಜಪಾನ್‌

7
ಬಲಿಷ್ಠ ಬೆಲ್ಜಿಯಂ ತಂಡಕ್ಕೆ ಸವಾಲಾಗುವುದೇ ಏಷ್ಯನ್‌ ಪಡೆ?

ಲುಕಾಕು ಭಯದಲ್ಲಿ ಜಪಾನ್‌

Published:
Updated:
ಜಪಾನ್‌–ಬೆಲ್ಜಿಯಂ ಪಂದ್ಯ

ರೊಸ್ತೋವ್‌ ಆನ್‌ ಡಾನ್‌: ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ ಎಂದೇ ಪರಿಗಣಿತವಾಗಿರುವ ಬೆಲ್ಜಿಯಂ, ತನ್ನ ಉತ್ತಮ ಸಾಮರ್ಥ್ಯವನ್ನು ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲೂ ಮುಂದುವರಿಸಿಕೊಂಡು ಹೋಗುವ ಕಾತರದಲ್ಲಿದೆ.

ಸೋಮವಾರ ಇಲ್ಲಿನ ರೊಸ್ತೋವ್‌ ಅರೆನಾದಲ್ಲಿ ನಡೆಯುವ ಪಂದ್ಯದಲ್ಲಿ ಬೆಲ್ಜಿಯಂ ಹಾಗೂ ಜಪಾನ್‌ ತಂಡಗಳು ಸೆಣಸಲಿವೆ.

ಹಳದಿ ಕಾರ್ಡ್‌ ಆಧಾರದಲ್ಲಿ ಹದಿನಾರರ ಘಟ್ಟ ತಲುಪಿರುವ ಜಪಾನ್ ತಂಡವು ಬಲಿಷ್ಠ ಬೆಲ್ಜಿಯಂ ಪಡೆಯನ್ನು ಕಟ್ಟಿಹಾಕುವ ವಿಶ್ವಾಸದಲ್ಲಿದೆ.

ಆಡಿರುವ ಮೂರು ಪಂದ್ಯಗಳಲ್ಲಿ ಅಮೋಘ ಜಯ ಸಾಧಿಸಿರುವ ಬೆಲ್ಜಿಯಂ ತಂಡವು ತನ್ನ ಸಂಘಟಿತ ಹೋರಾಟದಿಂದ ಫುಟ್‌ಬಾಲ್‌ ಅಭಿಮಾನಿಗಳಲ್ಲಿ ಅಚ್ಚರಿ ಹುಟ್ಟುಹಾಕಿದೆ. ಮೂರು ಪಂದ್ಯಗಳಲ್ಲಿ ತಲಾ ಒಂದು ಗೆಲುವು ಹಾಗೂ ಸೋಲು ಅನುಭವಿಸಿರುವ ಜಪಾನ್‌ ತಂಡವು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ಪಾಯಿಂಟ್‌ ಪಟ್ಟಿಯಲ್ಲಿ ಜಪಾನ್‌ ತಂಡವು ಸೆನೆಗಲ್‌ ತಂಡದೊಂದಿಗೆ ಸಮಬಲ ಸಾಧಿಸಿತ್ತು. ಆದರೆ, ಹಳದಿ ಕಾರ್ಡ್‌ ಪಡೆದ ಆಟಗಾರರು ಹೆಚ್ಚಿದ್ದ ಸೆನೆಗಲ್‌ ತಂಡವು ಅದೇ ಆಧಾರದಲ್ಲಿ ಟೂರ್ನಿಯಿಂದ ಹೊರಬಿದ್ದಿತ್ತು. ಇದರಿಂದ ಜಪಾನ್‌ ತಂಡವು ಪ್ರೀ ಕ್ವಾರ್ಟರ್‌ ಹಂತಕ್ಕೆ ತಲುಪಿತ್ತು.

ರಾಬರ್ಟೊ ಮಾರ್ಟಿನೆಜ್‌ ಮಾರ್ಗದರ್ಶನದ ಬೆಲ್ಜಿಯಂ ತಂಡವು ಎಲ್ಲ ವಿಭಾಗಗಳಲ್ಲಿ ಶಕ್ತವಾಗಿದೆ. ಸಂಘಟಿತ ಹೋರಾಟದಿಂದಾಗಿಯೇ ಮೂರು ಪಂದ್ಯಗಳಿಂದ ಒಟ್ಟು ಒಂಬತ್ತು ಗೋಲುಗಳನ್ನು ತಂಡದ ಆಟಗಾರರು ದಾಖಲಿಸಿದ್ದಾರೆ. ತಂಡದ ರಕ್ಷಣಾ ವಿಭಾಗದ ಆಟಗಾರರು ಅಮೋಘ ಸಾಮರ್ಥ್ಯ ಮೆರೆದಿದ್ದಾರೆ. ಕೇವಲ ಎರಡು ಗೊಲುಗಳನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿರುವುದೇ ಇದಕ್ಕೆ ಸಾಕ್ಷಿ.

ರೊಮೆಲು ಲುಕಾಕು, ಡ್ರೈಸ್‌ ಮರ್ಟೆನ್ಸ್‌, ಎಡೆನ್‌ ಹಜಾರ್ಡ್‌, ಅದ್ನಾನ್‌ ಜುನುಜಾಜ್‌, ಮಿಚಿ ಬಾಟ್‌ಶುವಯಿ ಅವರು ತಂಡದ ಪರವಾಗಿ ಚೆಂಡನ್ನು ಗುರಿ ಮುಟ್ಟಿಸಿದ್ದಾರೆ.

ತಂಡದ ಪ್ರಮುಖ ಸ್ಟ್ರೈಕರ್‌ ಆಗಿರುವ ರೊಮೆಲು ಲುಕಾಕು ಅವರು ಪಂದ್ಯದ ಪ್ರಮುಖ ಆಕರ್ಷಣೆ. ಒಟ್ಟು ನಾಲ್ಕು ಗೋಲುಗಳನ್ನು ದಾಖಲಿಸಿರುವ ಅವರು ಸದ್ಯ ಚಿನ್ನದ ಬೂಟು ಪ್ರಶಸ್ತಿ ಗೆಲ್ಲುವ ಆಟಗಾರರ ಪಟ್ಟಿಯಲ್ಲಿದ್ದಾರೆ.

ಟ್ಯುನಿಷಿಯಾ ವಿರುದ್ಧದ ಪಂದ್ಯದಲ್ಲಿ ಎರಡು ಗೋಲು ದಾಖಲಿಸಿದ ಎಡೆನ್‌ ಹಜಾರ್ಡ್‌ ಅವರ ಮೇಲೆ ಕೂಡ ನಿರೀಕ್ಷೆ ಹೆಚ್ಚಿದೆ.

ಲೀಗ್‌ ಹಂತದಲ್ಲಿ ಜಪಾನ್‌ ತಂಡವು ಕೊಲಂಬಿಯಾ ತಂಡವನ್ನು ಮಣಿಸಿ ಫುಟ್‌ಬಾಲ್‌ ದಿಗ್ಗಜರ ಹುಬ್ಬೇರಿಸಿತ್ತು. ತಂಡದ ಯುಯಾ ಓಸಾಕಾ, ಟಕಾಶಿ ಇನುಯಿ, ಕಿಸಿಕು ಹೊಂಡಾ ಹಾಗೂ ಶಿಂಜಿ ಕಗಾವಾ ಅವರು ಇವರೆಗೆ ಗೋಲು ಗಳಿಸಲು ಯಶಸ್ವಿಯಾಗಿದ್ದಾರೆ.

ವಿಶ್ವಕಪ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ವಾರ್ಟರ್‌ಫೈನಲ್‌ ಹಂತಕ್ಕೆ ತಲುಪುವ ಆಕಾಂಕ್ಷೆ ಹೊಂದಿರುವ ಜಪಾನ್‌ ತಂಡವು ಯಾವುದೇ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಇದೆ.

ಪ್ರಮುಖ ಮಾಹಿತಿ:

* ಈ ವರೆಗೂ ಉಭಯ ತಂಡಗಳು ಐದು ಬಾರಿ ಮುಖಾಮುಖಿಯಾಗಿದ್ದು, ಬೆಲ್ಜಿಯಂ ತಂಡವು ಕೇವಲ ಒಂದರಲ್ಲಿ ಗೆದ್ದಿದೆ. ಎರಡರಲ್ಲಿ ಜಪಾನ್‌ ಜಯಿಸಿದ್ದು, ಎರಡು ಪಂದ್ಯಗಳು ಡ್ರಾ ಆಗಿವೆ. 

* ಕಳೆದ 22 ಪಂದ್ಯಗಳಲ್ಲಿ ಬೆಲ್ಜಿಯಂ ತಂಡವು ಒಂದರಲ್ಲಿಯೂ ಸೋತಿಲ್ಲ. ಒಟ್ಟು 17ರಲ್ಲಿ ಗೆದ್ದಿದ್ದು 5 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 

* ಈ ಬಾರಿ ಒಟ್ಟು 9 ಗೋಲುಗಳನ್ನು ದಾಖಲಿಸಿರುವ ಬೆಲ್ಜಿಯಂ, ಲೀಗ್‌ ಹಂತದಲ್ಲೇ ಹೆಚ್ಚು  ಗೋಲು ಗಳಿಸಿರುವ ತಂಡ ಎಂಬ ಹೆಗ್ಗಳಿಕೆ ಹೊಂದಿದೆ. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !