ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಫುಟ್‌ಬಾಲ್: ಕ್ವಾರ್ಟರ್‌ನತ್ತ ಅರ್ಜೆಂಟೀನಾ ಚಿತ್ತ

ಆತ್ಮವಿಶ್ವಾಸದಲ್ಲಿ ಮೆಸ್ಸಿ ಬಳಗ
Last Updated 2 ಡಿಸೆಂಬರ್ 2022, 15:50 IST
ಅಕ್ಷರ ಗಾತ್ರ

ದೋಹಾ (ರಾಯಿಟರ್ಸ್‌/ ಎಪಿ): ಸ್ಟಾರ್ ಆಟಗಾರ ಲಯೊನೆಲ್‌ ಮೆಸ್ಸಿ ಮೇಲೆ ನಿರೀಕ್ಷೆ ಇಟ್ಟುಕೊಂಡಿರುವ ಅರ್ಜೆಂಟೀನಾ ತಂಡ, ವಿಶ್ವಕಪ್‌ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಶನಿವಾರ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

ತನ್ನ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ಕೈಯಲ್ಲಿ ಆಘಾತ ಅನುಭವಿಸಿದ್ದ ಅರ್ಜೆಂಟೀನಾ, ಆ ಬಳಿಕ ಪುಟಿದೆದ್ದು ನಿಂತಿದೆ. ನಾಕೌಟ್‌ ಹಂತದಲ್ಲೂ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿ ಅಟಗಾರರು ಇದ್ದಾರೆ. ಅಹಮದ್‌ ಬಿನ್‌ ಅಲಿ ಕ್ರೀಡಾಂಗಣದಲ್ಲಿ ಮೆಸ್ಸಿ ಮೋಡಿ ಮಾಡುವರು ಎಂಬುದು ಅವರ ಅಭಿಮಾನಿಗಳ ನಿರೀಕ್ಷೆ.

ಮೆಸ್ಸಿ ಈ ಟೂರ್ನಿಯಲ್ಲಿ ಗಳಿಸಿದ ಎರಡು ಗೋಲುಗಳು ಸೇರಿದಂತೆ ವಿಶ್ವಕಪ್‌ನಲ್ಲಿ ಒಟ್ಟು ಎಂಟು ಸಲ ಚೆಂಡನ್ನು ಗುರಿ ಸೇರಿಸಿದ್ದಾರೆ. ಆದರೆ ನಾಕೌಟ್‌ ಹಂತದಲ್ಲಿ ಅವರು ಒಂದೂ ಗೋಲು ಗಳಿಸಿಲ್ಲ. ಈ ಬಾರಿ ಆ ಕೊರತೆಯನ್ನು ನೀಗಿಸುವರೇ ಎಂಬುದನ್ನು ನೋಡಬೇಕು.

‘ಎಲ್ಲ ಎದುರಾಳಿಗಳೂ ಕಠಿಣ ಸ್ಪರ್ಧೆ ಒಡ್ಡಬಲ್ಲರು ಎಂಬುದರ ಅರಿವಿದೆ. ಈ ಪಂದ್ಯವೂ ಕಠಿಣವಾಗಿರಲಿದೆ’ ಎಂದು ಮೆಸ್ಸಿ ಹೇಳಿದ್ದಾರೆ.

ಮೆಸ್ಸಿ ಅಲ್ಲದೆ ಅಲೆಕ್ಸಿಸ್‌ ಮ್ಯಾಕ್‌ ಅಲಿಸ್ಟರ್‌, ಎಂಜೊ ಫೆರ್ನಾಂಡಿಸ್‌, ಜೂಲಿಯನ್‌ ಅಲ್ವಾರೆಜ್‌ ಮತ್ತು ರಾಡ್ರಿಗೊ ಡಿ ಪಾಲ್‌ ಅವರು ಉತ್ತಮ ಲಯದಲ್ಲಿ ಆಡುತ್ತಿರುವುದು ಅರ್ಜೆಂಟೀನಾ ಕೋಚ್‌ ಲಯೊನೆಲ್‌ ಸ್ಕಾಲೊನಿ ಅವರಿಗೆ ಸಮಾಧಾನ ನೀಡಿದೆ.

ಆಸ್ಟ್ರೇಲಿಯಾ ತಂಡ ವಿಶ್ವಕಪ್‌ನಲ್ಲಿ ಈ ಹಿಂದೆ ಒಮ್ಮೆ ಮಾತ್ರ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಆಡಿತ್ತು. 2006ರ ಟೂರ್ನಿಯಲ್ಲಿ ಇಟಲಿ ಎದುರು 0–1 ಗೋಲುಗಳಿಂದ ಸೋತಿತ್ತು.

‘ಈ ಪಂದ್ಯದಲ್ಲಿ ನಾವು ಗೆಲ್ಲುತ್ತೇವೆ ಎಂದು ಯಾರೂ ನಿರೀಕ್ಷಿಸಿಲ್ಲ. ಎಲ್ಲರಿಗೂ ಆಘಾತ ನೀಡುವುದು ನಮ್ಮ ಗುರಿ’ ಎಂದು ಆಸ್ಟ್ರೇಲಿಯಾ ತಂಡದ ಫಾರ್ವರ್ಡ್‌ ಆಟಗಾರ ಮ್ಯಾಥ್ಯೂ ಲೆಕೀ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖಾಮುಖಿ: 1988ರ ಬಳಿಕ ಉಭಯ ತಂಡಗಳು ಏಳು ಸಲ ಮುಖಾಮುಖಿಯಾಗಿವೆ. ಅರ್ಜೆಂಟೀನಾ ಐದರಲ್ಲಿ ಗೆಲುವು ಪಡೆದಿದ್ದರೆ, ಆಸ್ಟ್ರೇಲಿಯಾ ಒಮ್ಮೆ ಮಾತ್ರ ಗೆದ್ದಿದೆ. ಒಂದು ಪಂದ್ಯ ಡ್ರಾ ಆಗಿದೆ. ವಿಶ್ವಕಪ್‌ ಟೂರ್ನಿಯಲ್ಲಿ ಇವೆರಡು ತಂಡಗಳು ಎದುರಾಗುತ್ತಿರುವುದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT