ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ಸಿಲೋನಾಗೆ ಲಾ ಲಿಗಾ ಗರಿ

ಫುಟ್‌ಬಾಲ್‌: ಮೋಡಿ ಮಾಡಿದ ಲಯೊನೆಲ್‌ ಮೆಸ್ಸಿ
Last Updated 28 ಏಪ್ರಿಲ್ 2019, 15:41 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌: ಅರ್ಜೆಂಟೀನಾದ ಫುಟ್‌ಬಾಲ್‌ ತಾರೆ ಲಯೊನೆಲ್‌ ಮೆಸ್ಸಿ, ಭಾನುವಾರ ಕ್ಯಾಂಪ್‌ ನೌ ಕ್ರೀಡಾಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿದರು.

ಮೆಸ್ಸಿ ಕಾಲ್ಚಳಕದಲ್ಲಿ ಅರಳಿದ ಏಕೈಕ ಗೋಲಿನ ನೆರವಿನಿಂದ ಎಫ್‌ಸಿ ಬಾರ್ಸಿಲೋನಾ ತಂಡ ಲಾ ಲಿಗಾ ಫುಟ್‌ಬಾಲ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿತು.

ತಾನಾಡಿದ 35ನೇ ಲೀಗ್‌ ಹೋರಾಟದಲ್ಲಿ ಬಾರ್ಸಿಲೋನಾ 1–0 ಗೋಲಿನಿಂದ ಲೆವಂಟ್‌ ತಂಡವನ್ನು ಸೋಲಿಸಿತು. ಬಾರ್ಸಿಲೋನಾ ತಂಡ ಇನ್ನೂ ಮೂರು ಪಂದ್ಯಗಳನ್ನು ಆಡಬೇಕಿದೆ. ಈ ತಂಡ ಈಗಾಗಲೇ 83 ಪಾಯಿಂಟ್ಸ್‌ ಸಂಗ್ರಹಿಸಿ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಅಟ್ಲೆಟಿಕೊ ಮ್ಯಾಡ್ರಿಡ್‌ 74 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ತಂಡ ತನ್ನ ಪಾಲಿನ ಮೂರು ಪಂದ್ಯಗಳಲ್ಲಿ ಗೆದ್ದರೂ ಬಾರ್ಸಿಲೋನಾವನ್ನು ಹಿಂದಿಕ್ಕುವುದು ಅಸಾಧ್ಯ.

ಬಾರ್ಸಿಲೋನಾ ತಂಡ ಹಿಂದಿನ 11 ಲಾ ಲಿಗಾ ಟೂರ್ನಿಗಳ ಪೈಕಿ ಒಟ್ಟು ಎಂಟರಲ್ಲಿ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದೆ.

ಬಾರ್ಸಿಲೋನಾವು 4–3–3ರ ಯೋಜನೆಯೊಂದಿಗೆ ಆಡಲಿಳಿದರೆ, ಲೆವಂಟ್‌ ತಂಡ 4–1–4–1ರ ರಣನೀತಿಯೊಂದಿಗೆ ಅಂಗಳಕ್ಕಿಳಿದಿತ್ತು.

ಬಲಿಷ್ಠ ಆಟಗಾರರನ್ನು ಹೊಂದಿದ್ದ ಬಾರ್ಸಿಲೋನಾ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಲೂಯಿಸ್‌ ಸ್ವಾರೆಜ್‌ ಮತ್ತು ಫಿಲಿಪ್‌ ಕುಟಿನ್ಹೊ ಶುರುವಿನಿಂದಲೇ ಎದುರಾಳಿಗಳ ರಕ್ಷಣಾ ಕೋಟೆ ಭೇದಿಸುವ ಪ್ರಯತ್ನ ಮಾಡಿದರು. ಮೊದಲಾರ್ಧದ ಆಟ ಮುಗಿಯಲು ಕೆಲ ನಿಮಿಷಗಳು ಬಾಕಿ ಇದ್ದಾಗ ಬಾರ್ಸಿಲೋನಾಕ್ಕೆ ‘ಫ್ರೀ ಕಿಕ್‌’ ಸಿಕ್ಕಿತ್ತು. ಈ ಅವಕಾಶವನ್ನು ಕುಟಿನ್ಹೊ ಕೈಚೆಲ್ಲಿದರು.

ದ್ವಿತೀಯಾರ್ಧದಲ್ಲಿ ಬಾರ್ಸಿಲೋನಾ ಕೋಚ್‌ ಅರ್ನೆಸ್ಟೊ ವಲ್ವೆರ್ಡ್‌, ಆಡುವ ಬಳಗದಲ್ಲಿ ಮಾಡಿದ ಬದಲಾವಣೆ ಫಲ ನೀಡಿತು. ಅವರು ಕುಟಿನ್ಹೊ ಬದಲು ಮೆಸ್ಸಿ ಅವರನ್ನು ಕಣಕ್ಕಿಳಿಸಿದರು.

ಅಂಗಳಕ್ಕಿಳಿದ ಶುರುವಿನಿಂದಲೇ ಚುರುಕಿನ ಆಟಕ್ಕೆ ಮುಂದಾದ ಮೆಸ್ಸಿ, 62ನೇ ನಿಮಿಷದಲ್ಲಿ ಆತಿಥೇಯರಿಗೆ ಯಶಸ್ಸು ತಂದುಕೊಟ್ಟರು. ಚೆಂಡನ್ನು ಡ್ರಿಬಲ್ ಮಾಡುತ್ತಾ ಎದುರಾಳಿ ಆವರಣ ಪ್ರವೇಶಿಸಿದ ಅವರು ಅದನ್ನು ಮಿಂಚಿನ ಗತಿಯಲ್ಲಿ ಒದ್ದು ಗುರಿ ಮುಟ್ಟಿಸಿದರು.

ಇದರೊಂದಿಗೆ ಈ ಸಲದ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಅವರ ಖಾತೆಯಲ್ಲಿ ಒಟ್ಟು 34 ಗೋಲುಗಳಿವೆ.

ನಂತರ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಲೆವಂಟ್‌ ತಂಡ ಸಮಬಲದ ಗೋಲು ಗಳಿಸಲು ಸಾಕಷ್ಟು ಪ್ರಯ‌ತ್ನಿಸಿತು. ಆದರೆ ಎದುರಾಳಿ ತಂಡದ ರಕ್ಷಣಾ ವಿಭಾಗದ ಆಟಗಾರರನ್ನು ವಂಚಿಸಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ತಂಡಕ್ಕೆ ನಿರಾಸೆ ಕಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT