ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಸ್ಸಿ ‘ಫ್ರೀ ಕಿಕ್‌’ ಮ್ಯಾಜಿಕ್‌

Last Updated 9 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌: ಅರ್ಜೆಂಟೀನಾದ ಫುಟ್‌ಬಾಲ್‌ ತಾರೆ ಲಯೊನೆಲ್‌ ಮೆಸ್ಸಿ, ಭಾನುವಾರ ‘ಫ್ರೀ ಕಿಕ್‌’ ಮೂಲಕ ಎರಡು ಗೋಲು ಗಳಿಸಿ ಆರ್‌ಸಿಡಿಇ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳನ್ನು ರಂಜಿಸಿದರು.

ಮೆಸ್ಸಿ ‘ಮ್ಯಾಜಿಕ್‌’ ಬಲದಿಂದ ಬಾರ್ಸಿಲೋನಾ ತಂಡ ಲಾ ಲಿಗಾ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿತು.

ಮೆಸ್ಸಿ ಪಡೆ 4–0 ಗೋಲುಗಳಿಂದ ಎಸ್ಪಾನಿಯೋಲ್‌ ತಂಡವನ್ನು ಪರಾಭವಗೊಳಿಸಿತು.

ಈ ಗೆಲುವಿನೊಂದಿಗೆ ಬಾರ್ಸಿಲೋನಾ, ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಇನ್ನಷ್ಟು ಭದ್ರಪಡಿಸಿಕೊಂಡಿತು. 15 ಪಂದ್ಯಗಳನ್ನು ಆಡಿರುವ ಈ ತಂಡ ಒಂಬತ್ತರಲ್ಲಿ ಗೆದ್ದು 31 ಪಾಯಿಂಟ್ಸ್‌ ಸಂಗ್ರಹಿಸಿದೆ.

4–3–3 ಯೋಜನೆಯೊಂದಿಗೆ ಅಂಗಳಕ್ಕಿಳಿದಿದ್ದ ಮೆಸ್ಸಿ ಬಳಗ ಮೊದಲ 15 ನಿಮಿಷಗಳಲ್ಲಿ ಎದುರಾಳಿಗಳಿಂದ ಕಠಿಣ ಸ್ಪರ್ಧೆ ಎದುರಿಸಿತು. 17ನೇ ನಿಮಿಷದಲ್ಲಿ ಮೆಸ್ಸಿ ಕಾಲ್ಚಳಕ ತೋರಿದರು.

ಎದುರಾಳಿ ಆವರಣದ 27 ಗಜ ದೂರದಿಂದ ಅವರು ಒದ್ದ ಚೆಂಡು ಎಸ್ಪಾನಿಯೋಲ್‌ ತಂಡದ ಗೋಲ್‌ ಕೀಪರ್‌ ಡೀಗೊ ಲೊಪೆಜ್‌ ಅವರನ್ನು ವಂಚಿಸಿ ಗುರಿ ಸೇರುತ್ತಿದ್ದಂತೆ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಎದ್ದಿತು. ಮೆಸ್ಸಿ ಕೂಡಾ ಮೇಲಕ್ಕೆ ಜಿಗಿದು ಸಂಭ್ರಮಿಸಿದರು.

26ನೇ ನಿಮಿಷದಲ್ಲಿ ಒಸುಮಾನೆ ಡೆಂಬೆಲ್‌ ತಂಡದ ಖುಷಿ ಹೆಚ್ಚಿಸಿದರು. ನಾಯಕ ಮೆಸ್ಸಿ ತಮ್ಮತ್ತ ಒದ್ದು ಕಳುಹಿಸಿದ ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿದ ಡೆಂಬೆಲ್‌ ಅದನ್ನು ಎದುರಾಳಿ ಆವರಣದ ಬಲತುದಿಯಿಂದ ಒದ್ದು ಗುರಿ ಮುಟ್ಟಿಸಿದರು. 38ನೇ ನಿಮಿಷದಲ್ಲಿ ಬಾರ್ಸಿಲೋನಾ ತಂಡಕ್ಕೆ ಮುನ್ನಡೆ ಹೆಚ್ಚಿಸಿಕೊಳ್ಳುವ ಉತ್ತಮ ಅವಕಾಶ ಸಿಕ್ಕಿತ್ತು. ರ‍್ಯಾಕಿಟಿಕ್‌ ತಲೆತಾಗಿಸಿ ಕಳುಹಿಸಿದ ಚೆಂಡನ್ನು ಎಸ್ಪಾನಿಯೋಲ್‌ ಗೋಲ್‌ಕೀಪರ್‌ ಲೊಪೆಜ್‌ ಆಕರ್ಷಕ ರೀತಿಯಲ್ಲಿ ತಡೆದರು.

ಇಷ್ಟಕ್ಕೆ ಮೆಸ್ಸಿ ಪಡೆಯ ಗೋಲಿನ ದಾಹ ನೀಗಿದಂತೆ ಕಾಣಲಿಲ್ಲ. 45ನೇ ನಿಮಿಷದಲ್ಲಿ ಲೂಯಿಸ್‌ ಸ್ವಾರೆಜ್‌ ಮೋಡಿ ಮಾಡಿದರು. ಆಕರ್ಷಕ ರೀತಿಯಲ್ಲಿ ಚೆಂಡನ್ನು ಗುರಿ ತಲುಪಿಸಿದ ಅವರು ಸಂಭ್ರಮಿಸಿದರು.

3–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಬಾರ್ಸಿಲೋನಾ ತಂಡ ದ್ವಿತೀಯಾರ್ಧದಲ್ಲೂ ಪ್ರಾಬಲ್ಯ ಮೆರೆಯಿತು. 65ನೇ ನಿಮಿಷದಲ್ಲಿ ಮೆಸ್ಸಿ ಮತ್ತೊಂದು ಗೋಲು ಹೊಡೆದು ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿದರು.

ಎದುರಾಳಿ ಆವರಣದ 30 ಗಜ ದೂರದಿಂದ ಅವರು ಒದ್ದ ಚೆಂಡು ಎಸ್ಪಾನಿಯೋಲ್‌ ತಂಡದ ರಕ್ಷಣಾ ವಿಭಾಗದ ಆಟಗಾರರ ತಲೆಯ ಮೇಲಿಂದ ಸಾಗಿ ಗೋಲು ಪೆಟ್ಟಿಗೆಯ ಬಲೆಗೆ ಮುತ್ತಿಕ್ಕುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮ ಮೇಳೈಸಿತು.

ನಂತರದ ಅವಧಿಯಲ್ಲಿ ಬಾರ್ಸಿಲೋನಾ ತಂಡ ರಕ್ಷಣಾ ವಿಭಾಗದಲ್ಲಿ ಗುಣಮಟ್ಟದ ಸಾಮರ್ಥ್ಯ ತೋರಿ ಗೆಲುವಿನ ತೋರಣ ಕಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT