ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಸ್ಸಿ ಮಾಂತ್ರಿಕತೆಗೆ ಒಲಿದ ಜಯ

ಎಂಟರ ಘಟ್ಟಕ್ಕೆ ಅರ್ಜೆಂಟೀನಾ ಲಗ್ಗೆ; ಆಸ್ಟ್ರೇಲಿಯಾ ತಂಡಕ್ಕೆ ನಿರಾಶೆ
Last Updated 5 ಡಿಸೆಂಬರ್ 2022, 5:01 IST
ಅಕ್ಷರ ಗಾತ್ರ

ಅಲ್‌ ರಯಾನ್: ತಮ್ಮ ಲಕ್ಷಾಂತರ ಅಭಿಮಾನಿಗಳ ನಿರೀಕ್ಷೆಯನ್ನು ಲಯೊನೆಲ್ ಮೆಸ್ಸಿ ಹುಸಿ ಮಾಡಲಿಲ್ಲ.

ಶನಿವಾರ ತಡರಾತ್ರಿ ಅಹಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಕಾಲ್ಚಳಕ ಮೆರೆದ ಮೆಸ್ಸಿಯಿಂದಾಗಿ ಅರ್ಜೆಂಟೀನಾ ತಂಡವು ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟಿತು. ಅರ್ಜೆಂಟೀನಾ ತಂಡವು 2–1ರಿಂದ ಆಸ್ಟ್ರೇಲಿಯಾವನ್ನು
ಸೋಲಿಸಿತು.

ಮೆಸ್ಸಿ ಈ ಪಂದ್ಯದಲ್ಲಿ ಎರಡು ದಾಖಲೆಗಳನ್ನೂ ಮಾಡಿದರು. ಅವರಿಗೆ ಇದು ಅವರ ವೃತ್ತಿಜೀವನದ ಒಟ್ಟಾರೆ 1000ನೇ ಪಂದ್ಯ. 2003ರಲ್ಲಿ ಪದಾರ್ಪಣೆ ಮಾಡಿದ ನಂತರ ಇಲ್ಲಿಯವರೆಗೆ ಅವರು ಮಾಡಿರುವ ಪ್ರಮುಖ ದಾಖಲೆಗಳಲ್ಲಿ ಇದೂ ಒಂದು.

ಈ ಹಾದಿಯಲ್ಲಿ ಅವರು ತಮ್ಮ ದೇಶದ ದಿಗ್ಗಜ ಡಿಯಾಗೊ ಮರಡೋನಾ ಅವರು ವಿಶ್ವಕಪ್‌ನಲ್ಲಿ ಗಳಿಸಿದ ಗೋಲುಗಳದಾಖಲೆಯನ್ನೂ ಮೀರಿದರು. ಮೆಸ್ಸಿ ನಾಯಕತ್ವ
ದಲ್ಲಿ ಅರ್ಜೆಂಟೀನಾ ತಂಡವು ಆಡಿದ ನೂರನೇ ಪಂದ್ಯ ಇದಾಗಿದೆ.

ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಎದುರು ಪಂದ್ಯದ 35ನೇ ನಿಮಿಷದಲ್ಲಿ ಮೊದಲ ಗೋಲು ಹೊಡೆದ ಮೆಸ್ಸಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದರು.

ಮೆಸ್ಸಿ ಪಂದ್ಯದ ಮೊದಲ ಅರ್ಧಗಂಟೆಯಲ್ಲಿ ಶಾಂತಚಿತ್ತ ಹಾಗೂ ತಾಳ್ಮೆಯಿಂದ ಆಡಿದರು. 34ನೇ ನಿಮಿಷದಲ್ಲಿ ಅವರು ತಮ್ಮನ್ನು ಸುತ್ತುವರಿದ ಆಸ್ಟ್ರೇಲಿಯಾದ ರಕ್ಷಣಾ ಪಡೆಯನ್ನು ತಪ್ಪಿಸಿ ಇನ್‌ಸೈಡ್‌ ಭಾಗದತ್ತ ಪಾಸ್ ಕೊಟ್ಟರು. ಅಲ್ಲಿದ್ದ ನಿಕೊಲಾಸ್ ಒಟಾಮೆಂಡಿ ಚೆಂಡನ್ನು ಮತ್ತೆ ಓಡುತ್ತಿದ್ದ ಮೆಸ್ಸಿಗೆ ಪಾಸ್ ಕೊಟ್ಟರು. ತಮ್ಮ ಮುಂದಿದ್ದ ಆಸ್ಟ್ರೇಲಿಯಾದ ಎತ್ತರಕಾಯದ ಹ್ಯಾರಿ ಸೌಟರ್ ಅವರನ್ನು ವಂಚಿಸಿದ ಮೆಸ್ಸಿ ಚೆಂಡನ್ನು ಗುರಿ ಸೇರಿಸಿದರು.

57ನೇ ನಿಮಿಷದಲ್ಲಿ ಜೂಲಿಯನ್ ಅಲ್ವರೇಜ್ ಗೋಲು ಹೊಡೆದು ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.

ಇದರಿಂದಾಗಿ ಆಸ್ಟ್ರೇಲಿಯಾದ ಮೇಲೆ ಒತ್ತಡ ಹೆಚ್ಚಿತು. ಅರ್ಜೆಂಟೀನಾದ ಎಂಜೊ ಫರ್ನಾಂಡೆಜ್ 77ನೇ ನಿಮಿಷದಲ್ಲಿ ಆಸ್ಟ್ರೇಲಿಯಾಕ್ಕೆ ಉಡುಗೊರೆ ಗೋಲು ಕೊಟ್ಟರು. ಇದರಿಂದಾಗಿ ಕೊನೆಯ ಹಂತದ ನಿಮಿಷಗಳಲ್ಲಿ ಆಟವು ತುಸು ಕಾವೇರಿತು. ಕೊನೆಯ ವಿಷಲ್‌ವರೆಗೂ ಅರ್ಜೆಂಟೀನಾದ ಗೋಲ್‌ಕೀಪರ್ ಮಾರ್ಟಿನೇಜ್ ಆಸ್ಟ್ರೇಲಿಯಾದ ಪ್ರಯತ್ನಗಳನ್ನು ವಿಫಲಗೊಳಿಸಿದರು.

ಅರ್ಜೆಂಟೀನಾ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು 2014ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಆಗ ಅರ್ಜೆಂಟೀನಾ ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT