ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್ ವಿಶ್ವಕಪ್: ಮೆಸ್ಸಿ ನೋಡಲು ಐದು ಮಕ್ಕಳ ತಾಯಿಯ ಪಯಣ

ಕೇರಳದಿಂದ ಕತಾರ್‌ಗೆ ಪಯಣ
Last Updated 27 ನವೆಂಬರ್ 2022, 4:54 IST
ಅಕ್ಷರ ಗಾತ್ರ

ದುಬೈ: ಐವರು ಮಕ್ಕಳ ತಾಯಿಯೊಬ್ಬರು ಕೇರಳದಿಂದ ಕತಾರ್‌ಗೆ ಅರ್ಜೆಂಟೀನಾ ಆಟಗಾರ ಲಯೊನೆಲ್ ಮೆಸ್ಸಿ ಅವರ ಆಟ ನೋಡಲು ತಮ್ಮ ಎಸ್‌ಯುವಿ ಕಾರಿನಲ್ಲಿ ‘ಏಕಾಂಗಿ’ಯಾಗಿ ಪ್ರಯಾಣಿಸಿದ್ದಾರೆ.

ಕೇರಳದ ನಾಝಿ ನೌಶಿ ಅವರು ಅಕ್ಟೋಬರ್ 15ರಿಂದಲೇ ಕೇರಳದಿಂದ ಕೊಲ್ಲಿ ರಾಷ್ಟ್ರಗಳ ಪ್ರವಾಸ ಆರಂಭಿಸಿದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್‌ ತಲುಪಿದ್ದಾರೆ ಎಂದು ಖಲೀಜ್ ಟೈಮ್ಸ್‌ ಪತ್ರಿಕೆಯು ವರದಿ ಮಾಡಿದೆ.

‘ನನ್ನ ಅಚ್ಚುಮೆಚ್ಚಿನ ಹೀರೊ ಮೆಸ್ಸಿ ಆಡುವುದನ್ನು ನೋಡಲೇಂದೆ ಇಲ್ಲಿಗೆ ಬಂದೆ. ಸೌದಿ ಅರೇಬಿಯಾ ತಂಡದ ವಿರುದ್ಧ ಮೆಸ್ಸಿಯ ಅರ್ಜೆಂಟೀನಾ ತಂಡವು ಸೋತಿದ್ದು ಮನಸ್ಸಿಗೆ ಬಹಳ ನೋವಾಯಿತು. ಆದರೆ ಮುಂದಿನ ಹಂತದಲ್ಲಿ ತಂಡ ಪುಟಿದೇಳುತ್ತದೆ. ವಿಶ್ವಕಪ್ ಗೆಲ್ಲುತ್ತದೆ’ ಎಂದು ನಾಝಿ ಹೇಳಿದ್ದಾರೆ.

ತಮ್ಮ ಎಸ್‌ಯುವಿ ವಾಹನದಲ್ಲಿ ಏಕಾಂಗಿಯಾಗಿ ಅವರು ಕೊಲ್ಲಿ ರಾಷ್ಟ್ರಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಮಸ್ಕತ್‌ನಿಂದ ಆರಂಭಿಸಿ ಹೆಟ್ಟಾ ಬಾರ್ಡರ್‌ ಮುಖಾಂತರ ಪ್ರಯಾಣ ಮಾಡಿರುವ ಅವರು ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ನೋಡಲು ದುಬೈನಲ್ಲಿ ತಂಗಿದ್ದಾರೆ.

ತಮ್ಮ ಕಾರನ್ನು ಕೂಡ ಅವರು ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ. ಅದರಲ್ಲಿ ಸುಸಜ್ಜಿತವಾದ ಅಡುಗೆಮನೆ ಇದೆ. ಛಾವಣಿಯ ಮೇಲೆ ಟೆಂಟ್ ಹಾಕಿಕೊಳ್ಳುವ ವ್ಯವಸ್ಥೆ ಇದೆ. ಇದರಿಂದ ಊಟ ಮತ್ತು ವಸತಿ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಗಿದೆ.

‘ನನ್ನ ವಾಹನಕ್ಕೆ ಪ್ರೀತಿಯಿಂದ ಊಲು ಎಂದು ಹೆಸರಿಟ್ಟಿದ್ದೇನೆ. ಅಡುಗೆ ಮಾಡಲು ಮತ್ತು ತಂಗಲು ವ್ಯವಸ್ಥೆ ಇದರಲ್ಲಿಯೇ ಇದೆ. ಅಕ್ಕಿ, ಹಿಟ್ಟು, ಮಸಾಲೆ ಪದಾರ್ಥ ಹಾಗೂ ಒಣ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಕೊಂಡಿದ್ದೇನೆ’ ಎಂದು ತಿಳಿಸಿದ್ದಾರೆ.

ಊಲು ಎಂದರೆ ಮಲೆಯಾಳಿಯಲ್ಲಿ ‘ಅವಳು’ ಎಂದರ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT