ಫಿಫಾ ವಿಶ್ವಕಪ್‌: ಹುಸಿಯಾದ ಬ್ರೆಜಿಲ್‌ –ಜರ್ಮನಿ ಹಣಾಹಣಿ ನಿರೀಕ್ಷೆ

7
ಪ್ರೀ ಕ್ವಾರ್ಟರ್‌ನಲ್ಲಿ ಮೆಕ್ಸಿಕೊ ತಂಡವನ್ನು ಎದುರಿಸಲಿರುವ ಐದು ಬಾರಿಯ ಚಾಂಪಿಯನ್ನರು

ಫಿಫಾ ವಿಶ್ವಕಪ್‌: ಹುಸಿಯಾದ ಬ್ರೆಜಿಲ್‌ –ಜರ್ಮನಿ ಹಣಾಹಣಿ ನಿರೀಕ್ಷೆ

Published:
Updated:

ಮಾಸ್ಕೊ : ಸರ್ಬಿಯಾವನ್ನು ಮಣಿಸಿದ ಬ್ರೆಜಿಲ್‌ ತಂಡ ವಿಶ್ವಕಪ್‌ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್‌ ಹಂತಕ್ಕೆ ಪ್ರವೇಶಿಸಿದ್ದು ಅಭಿಮಾನಿಗಳನ್ನು ಪುಳಕಗೊಳಿಸಿದೆ.

ಆದರೆ ಇನ್ನೊಂದೆಡೆ, ಜರ್ಮನಿ ಸೋತಿದ್ದರ ಬಗ್ಗೆ ಬೇಸರವೂ ಅವರನ್ನು ಕಾಡಿದೆ. ಜರ್ಮನಿ ಗೆದ್ದಿದ್ದರೆ, 16ರ ಘಟ್ಟದಲ್ಲಿ ಬ್ರೆಜಿಲ್ ಆ ತಂಡವನ್ನು ಎದುರಿಸುವ ಸಾಧ್ಯತೆ ಇತ್ತು. ಆ ರೋಚಕ ಹೋರಾಟವನ್ನು ಕಣ್ತುಂಬಿಕೊಳ್ಳುವ ಅವಕಾಶ ಕಳೆದುಕೊಂಡಿರುವ ಫುಟ್‌ಬಾಲ್ ಪ್ರೇಮಿಗಳು ನಿರಾಸೆಗೆ ಒಳಗಾಗಿದ್ದಾರೆ.

ಸ್ಪರ್ತಾಕ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಬ್ರೆಜಿಲ್‌, ಸರ್ಬಿಯಾವನ್ನು 2–0 ಗೋಲುಗಳಿಂದ ಮಣಿಸಿತ್ತು. ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಜರ್ಮನಿಯನ್ನು ದಕ್ಷಿಣ ಕೊರಿಯಾ 2–0 ಗೋಲುಗಳಿಂದ ಮಣಿಸಿತ್ತು. ಕಳೆದ ಬಾರಿಯ ಸೆಮಿಫೈನಲ್‌ನಲ್ಲಿ ಬ್ರೆಜಿಲ್ ತಂಡವನ್ನು ಜರ್ಮನಿ 7–1ರಿಂದ ಸೋಲಿಸಿತ್ತು.

36ನೇ ನಿಮಿಷದಲ್ಲಿ ಪೌಲಿನ್ಹೊ ಮತ್ತು 68ನೇ ನಿಮಿಷದಲ್ಲಿ ತಿಯಾಗೊ ಸಿಲ್ವ ಗಳಿಸಿದ ಗೋಲುಗಳ ನೆರವಿನಿಂದ ಬ್ರೆಜಿಲ್‌ ಬುಧವಾರ ಗೆಲುವು ಸಾಧಿಸಿತ್ತು.

ಫಿಲಿಪ್ ಕುಟಿನ್ಹೊ ನೀಡಿದ ಪಾಸ್‌ನಲ್ಲಿ ಸರ್ಬಿಯಾದ ಗೋಲ್‌ ಕೀಪರ್‌ ವ್ಲಾದಿಮಿರ್‌ ಸ್ಟೊಜ್‌ಕೊವಿಚ್‌ ಅವರನ್ನು ತಬ್ಬಿಬ್ಬುಗೊಳಿಸಿದ ಪೌಲಿನ್ಹೊ ಮೊದಲ ಗೋಲು ಗಳಿಸಿ ಬ್ರೆಜಿಲ್‌ಗೆ ಮುನ್ನಡೆ ಗಳಿಸಿಕೊಟ್ಟಿದ್ದರು. ಸಮಬಲಕ್ಕಾಗಿ ಶ್ರಮಿಸಿದ ಸರ್ಬಿಯಾದ ಆಕ್ರಮಣವನ್ನು ಸಮರ್ಥವಾಗಿ ಮೆಟ್ಟಿ ನಿಂತ ಬ್ರೆಜಿಲ್‌ನ ಮುನ್ನಡೆಯನ್ನು 68ನೇ ನಿಮಿಷದಲ್ಲಿ ನೇಮರ್‌ ಮತ್ತು ತಿಯಾಗೊ ಜೋಡಿ ಹೆಚ್ಚಿಸಿದರು. ನೇಮರ್‌ ನಿಖರವಾಗಿ ನೀಡಿದ ಕ್ರಾಸ್‌ ಅನ್ನು ನಿಯಂತ್ರಿಸಿದ ತಿಯಾಗೊ ಚೆಂಡನ್ನು ಸುಲಭವಾಗಿ ಗುರಿ ಸೇರಿಸಿದರು.

ಬ್ರೆಜಿಲ್ ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕೆ ಇಳಿಸಿತ್ತು. ಸರ್ಬಿಯಾ ಮೂರು ಬದಲಾವಣೆಗಳನ್ನು ಮಾಡಿತ್ತು. ಮಿಲೋಸ್ ವೆಲ್ಜ್‌ಕೊವಿಚ್, ನಿಕೋಲಾ ಮಿಲೆಂಕೊವಿಚ್‌ ಮತ್ತು ಅಡೇನ್‌ ಲಾಜಿಕ್ ಅವರನ್ನು ತಂಡಕ್ಕೆ ಕರೆಸಿಕೊಂಡಿತ್ತು.

ಆದರೆ ಬಲಿಷ್ಠ ಬ್ರೆಜಿಲ್ ತಂಡವನ್ನು ಕಟ್ಟಿ ಹಾಕಲು ಸರ್ಬಿಯಾಗೆ ಸಾಧ್ಯವಾಗಲಿಲ್ಲ. ಅಮೋಘ ಜಯ ಸಾಧಿಸಿದ ಬ್ರೆಜಿಲ್‌ ಮೂರು ಪಂದ್ಯಗಳಿಂದ ಏಳು ಪಾಯಿಂಟ್‌ಗಳನ್ನು ಸಂಪಾದಿಸಿದರೆ ಸರ್ಬಿಯಾ ಮೂರು ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ಇಳಿಯಿತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !