ಶುಕ್ರವಾರ, ಮೇ 14, 2021
25 °C
ಎಎಫ್‌ಸಿ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್‌: ಇರಾನ್‌ನ ಪರ್ಸೆಪೊಲಿಸ್ ಎದುರಿನ ಹಣಾಹಣಿ

ಭರವಸೆಯ ಅಲೆಯಲ್ಲಿ ಎಫ್‌ಸಿ ಗೋವಾ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಮಡಗಾಂವ್: ಎರಡು ಪಂದ್ಯಗಳಲ್ಲಿ ಬಲಿಷ್ಠ ಎದುರಾಳಿಗಳ ವಿರುದ್ಧ ಅತ್ಯಮೋಘ ಸಾಮರ್ಥ್ಯ ತೋರಿದ ಎಫ್‌ಸಿ ಗೋವಾ ತಂಡ ಎಎಫ್‌ಸಿ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್‌ನಲ್ಲಿ ಮತ್ತೊಂದು ಮಹತ್ವದ ಹಣಾಹಣಿಗೆ ಸಜ್ಜಾಗಿದೆ. ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ತಂಡ ಕಳೆದ ಬಾರಿಯ ರನ್ನರ್ ಅಪ್, ಇರಾನ್‌ನ ಪರ್ಸೆಪೊಲಿಸ್ ಎಫ್‌ಸಿಯನ್ನು ಎದುರಿಸಲಿದೆ.

ಚಾಂಪಿಯನ್‌ಷಿಪ್‌ನ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಎಫ್‌ಸಿ ಗೋವಾ ತಂಡ ಅಲ್‌ ರಯಾನ್ ಮತ್ತು ಅಲ್ ವಾಹ್ದ ವಿರುದ್ಧ ಡ್ರಾ ಸಾಧಿಸಿತ್ತು. ಆದರೆ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಪರ್ಸೆಪೊಲಿಸ್ ಎದುರು ಇನ್ನಷ್ಟು ಪ್ರಬಲ ಆಟವಾಡಿದರೆ ಮಾತ್ರ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯ. ಇರಾನಿಯನ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಪರ್ಸೆಪೊಲಿಸ್ ಅಸಾಧಾರಣ ಸಾಮರ್ಥ್ಯದ ತಂಡ. ಆದರೂ ಒಂದು ವಾರದ ಅವಧಿಯಲ್ಲಿ ಮಾಡಿರುವ ಉತ್ತಮ ಸಾಧನೆ ಎಫ್‌ಸಿ ಗೋವಾ ಪಾಳಯದಲ್ಲಿ ಭರವಸೆ ಮೂಡಿಸಿದೆ. 

ಗೆಲುವಿನ ಗುರಿಯೊಂದಿಗೆ ಗೋವಾ ತಂಡ ಇ–ಗುಂಪಿನ ಈ ಪಂದ್ಯದಲ್ಲಿ ಜವಾಹರಲಾಲ್ ನೆಹರು ಕ್ರೀಡಾಂಗಣಕ್ಕೆ ಇಳಿಯಲಿದೆ. ಹಿಂದಿನ ಎರಡು ಪಂದ್ಯಗಳಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಡದ ಧೀರಜ್ ಸಿಂಗ್ ಅವರ ಮೇಲೆ ಕೋಚ್ ಜುವಾನ್ ಫೆರಾಂಡೊ ಭರವಸೆ ಹೊಂದಿದ್ದಾರೆ.

ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿರುವ ಗೋವಾ ತಂಡ ಜುವಾನ್ ಫೆರಾಂಡೊ ಕೋಚ್ ಆದ ನಂತರ ಚೆಂಡಿನ ಮೇಲೆ ಹೆಚ್ಚು ಹೊತ್ತು ಹಿಡಿತ ಸಾಧಿಸುವ ಕಲೆಯನ್ನೂ ಕರಗತ ಮಾಡಿಕೊಂಡಿದೆ.

ಅಲ್‌ ವಾಹ್ದ ವಿರುದ್ಧ 1–0 ಮತ್ತು ಅಲ್ ರಯಾನ್ ಎದುರು 3–1 ಗೋಲುಗಳಿಂದ ಗೆಲುವು ಸಾಧಿಸಿರುವ ಪರ್ಸೆಪೊಲಿಸ್ ವಿವಿಧ ಟೂರ್ನಿಗಳಲ್ಲಿ ಈ ಹಿಂದೆ ಆಡಿರುವ ಐದು ಪಂದ್ಯಗಳಲ್ಲಿ ಸೋಲು ಕಂಡಿಲ್ಲ. ಸೈಯದ್ ಜಲಾಲ್ ಹೊಸೇನಿ ತಂಡದ ರಕ್ಷಣಾ ವಿಭಾಗದ ಆಧಾರಸ್ತಂಭವಾಗಿದ್ದಾರೆ. ಅವರನ್ನು ವಂಚಿಸಿ ಚೆಂಡನ್ನು ಗುರಿ ಸೇರಿಸುವುದು ಗೋವಾಗೆ ಸವಾಲಾಗಲಿದೆ.

ಪಂದ್ಯ ಆರಂಭ: ರಾತ್ರಿ 10.30 (ಭಾರತೀಯ ಕಾಲಮಾನ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು