ಶುಕ್ರವಾರ, ಏಪ್ರಿಲ್ 10, 2020
19 °C

ಸ್ಮರಣೆ | ಫುಟ್‌ಬಾಲ್‌ನ ಸುವರ್ಣಯುಗದ ಪ್ರತಿನಿಧಿ ಪಿ.ಕೆ.ಬ್ಯಾನರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋಲ್ಕತ್ತದ ‘ಮೈದಾನ’ದ ಸೊಗಡು ವಿಶ್ವದೆಲ್ಲೆಡೆ ಪಸರಿಸುವಂತೆ ಮಾಡಿದವರು ಪ್ರದೀಪ್‌ ಕುಮಾರ್ ಬ್ಯಾನರ್ಜಿ.

‘ಪಿಕೆ’ ಅಥವಾ ‘ಪ್ರದೀಪ್ ದಾ’ ಎಂದೇ ಫುಟ್‌ಬಾಲ್ ವಲಯದಲ್ಲಿ ಚಿರಪರಿಚಿತರಾದವರು. 60 ಮತ್ತು 70ರ ದಶಕಗಳಲ್ಲಿ ಅವರ ಕಾಲ್ಚಳಕದ ಸೊಬಗು ‘ಸಿಟಿ ಆಫ್‌ ಜಾಯ್‌’ ಕೋಲ್ಕ ತ್ತದ ಫುಟ್‌ಬಾಲ್ ಪ್ರಿಯರ ಮನಗೆದ್ದಿತ್ತು.

ಆ ಅವಧಿಯು ಭಾರತದ ಫುಟ್‌ ಬಾಲ್‌ ಕ್ರೀಡೆಗೆ ಸುವರ್ಣಯುಗವಾಗಿತ್ತು. 1936ರ ಜೂನ್‌ 23ರಂದು ಪಶ್ವಿಮ ಬಂಗಾಳದ ಜಲ್‌ಪಾಯ್‌ಗುರಿಯಲ್ಲಿ ಜನಿಸಿದ ಪ್ರದೀಪ್‌ ಕುಮಾರ್ ಅವರ ಬಾಲ್ಯ ಮತ್ತು ಯೌವ್ವನದ ಬಹುಪಾಲು ಅವಧಿ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಕಳೆದಿತ್ತು. ಆ ಕಾಲದ ಶ್ರೇಷ್ಠ ಸ್ಟ್ರೈಕರ್‌ ಗಳಲ್ಲಿ ಒಬ್ಬರಾಗಿದ್ದ ಪಿಕೆ 1956ರ ಮೆಲ್ಬರ್ನ್‌ ಮತ್ತು 1960ರ ರೋಮ್ ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿದ್ದ ಭಾರತ ತಂಡದಲ್ಲಿದ್ದರು.

ಅಲ್ಲದೇ ಮೂರು ಏಷ್ಯನ್ ಕ್ರೀಡಾಕೂಟದಲ್ಲಿ (1958, 62 ಮತ್ತು 66) ಚಿನ್ನದ ಪದಕ ಗೆದ್ದ ಭಾರತ ತಂಡದಲ್ಲಿ ಆಡಿದ್ದರು. ಅವರು 1970ರಲ್ಲಿ ಕೋಚ್ ಆಗಿದ್ದ ಸಂದರ್ಭದಲ್ಲಿ ಭಾರತ ತಂಡವು ಬ್ಯಾಂಕಾಕ್ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿತ್ತು.

ಪಿಕೆ ಬರೀ ಒಬ್ಬ ಫುಟ್‌ಬಾಲ್ ಆಟಗಾರ ಮಾತ್ರವಾಗಿರಲಿಲ್ಲ. ಅವರ ವ್ಯಕ್ತಿತ್ವವು  ಅಸಾಧಾರಣವಾಗಿತ್ತು. ಬಂಗಾಲಿಗಳು ಹಲವು ವರ್ಷಗಳಿಂದ ಪ್ರೀತಿಸಿಕೊಂಡು ಬಂದಿದ್ದ ಫುಟ್‌ಬಾಲ್ ಕ್ರೀಡೆಯನ್ನು ಮೈಗೂಡಿಸಿಕೊಂಡರು.

ಐವತ್ತು ವರ್ಷಗಳ ಕಾಲ ಫುಟ್‌ಬಾಲ್ ಕ್ರೀಡೆಯ ಆಟ, ಆಡಳಿತಗಳಲ್ಲಿ ತಮ್ಮ ಛಾಪು ಮೂಡಿಸಿದ್ದವರು ಪಿಕೆ. ಆದರೆ, ತಾವು, ಸೆಲೆನ್ ಮನ್ನಾ ಮತ್ತು ಚುನಿ ಗೋಸ್ವಾಮಿ ಅವರು ಸೇರಿ ರವೀಂದ್ರ ಸರೋವರ ಪಕ್ಕದ ಮೈದಾನದಲ್ಲಿ ಆಡಿದ್ದ ದಿನಗಳ ಬಗ್ಗೆ ಸದಾ ನೆನಪಿಸಿಕೊಳ್ಳುತ್ತಿದ್ದರು.

1970 ರಿಂದ 90ರ ಅವಧಿಯಲ್ಲಿ ಭಾರತ ತಂಡಕ್ಕೆ ಲಭಿಸಿದ ಅತ್ಯಂತ ಉತ್ತಮ ಕೋಚ್‌ಗಳಲ್ಲಿ ಪಿಕೆ ಅಗ್ರ ಗಣ್ಯರು. ಅವರು ಭಾರತ ತಂಡದ ಪ್ರಥಮ ಮ್ಯಾನೇಜರ್ ಕೂಡ ಹೌದು. ಭಾರತ ತಂಡದಲ್ಲಿ ಅವರೊಂದಿಗಿದ್ದ ಯಾರನ್ನೇ ಕೇಳಿದರೂ, ಪಿಕೆ ಫುಟ್‌ ಬಾಲ್ ಕೌಶಲ್ಯ ಮಾತ್ರವಲ್ಲ,  ಸುಂದರ ವ್ಯಕ್ತಿತ್ವದ ಕಥೆಗಳನ್ನೂ ಹೇಳುತ್ತಾರೆ.

ಪಿ.ಕೆ.ಬ್ಯಾನರ್ಜಿ ಇನ್ನಿಲ್ಲ

ಕೋಲ್ಕತ್ತ: ಭಾರತದ ಫುಟ್‌ಬಾಲ್‌ ದಿಗ್ಗಜರಾಗಿದ್ದ ಪಿ.ಕೆ.ಬ್ಯಾನರ್ಜಿ (83) ಅವರು ದೀರ್ಘ ಕಾಲದ ಅನಾರೋಗ್ಯದಿಂದ ಶುಕ್ರವಾರ ಮಧ್ಯಾಹ್ನ ನಿಧನರಾದರು.

ನ್ಯೂಮೋನಿಯಾ ಕಾರಣ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಮಾರ್ಚ್‌ 2 ರಿಂದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಅವರ ಕಿರಿಯ ಸೋದರ ಪ್ರಸೂನ್‌ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್‌ ಲೋಕಸಭಾ ಸದಸ್ಯರಾಗಿದ್ದಾರೆ.

84 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಅವರು 65 ಗೋಲುಗಳನ್ನು ಬಾರಿಸಿದ್ದರು. ಭಾರತದ ಫುಟ್‌ಬಾಲ್‌ಗೆ ಬ್ಯಾನರ್ಜಿ ಅವರ ಕೊಡುಗೆಯನ್ನು ಗುರುತಿಸಿ ವಿಶ್ವ ಫುಟ್‌ಬಾಲ್ ಸಂಸ್ಥೆ (ಫೀಫಾ) 2004ರಲ್ಲಿ ಸೆಂಟೆನಿಯಲ್‌ ಆರ್ಡರ್‌ ಆಫ್‌ ಮೆರಿಟ್‌ ಗೌರವ ಪ್ರದಾನ ಮಾಡಿತ್ತು.

ಪಿಕೆ ಮಾರ್ಗದರ್ಶನ ಲಭಿಸಿದ್ದು ನನ್ನ ಅದೃಷ್ಟ: ಬೈಚುಂಗ್

ಕೋಲ್ಕತ್ತ: ಪಿಕೆ ಬ್ಯಾನರ್ಜಿ ಅವರಂತಹ ಮಹಾನ್ ಆಟಗಾರ ಮತ್ತು ಕೋಚ್ ಅವರ ಮಾರ್ಗದರ್ಶನದಲ್ಲಿ ನನ್ನ ಜೀವನದ ಅತ್ಯಂತ ಮಹತ್ವದ ಪಂದ್ಯದಲ್ಲಿ ಆಡಿದ್ದ ಅವಿಸ್ಮರಣಿಯ ಎಂದು ಭಾರತ ಹಿರಿಯ ಫುಟ್‌ಬಾಲ್ ಆಟಗಾರ ಭೈಚುಂಗ್ ಭುಟಿಯಾ ಸ್ಮರಿಸಿದ್ದಾರೆ.

‘1997ರಲ್ಲಿ ಫೆಡ್‌ ಕಪ್ ಸೆಮಿಫೈನಲ್‌ನಲ್ಲಿ 1.20 ಲಕ್ಷ ಮಂದಿ ಪ್ರೇಕ್ಷಕರ ಎದುರು ನಾನು ಆಡಿದ್ದ ಈಸ್ಟ್‌ ಬೆಂಗಾಲ್ ತಂಡವು 4–1ರಿಂದ ಗೆದ್ದಿತ್ತು. ಎದುರಾಳಿ ಮೋಹನ್ ಬಾಗನ್ ತಂಡದ ಕೋಚ್ ಅಮಲ್‌ ದಾ (ದತ್ತಾ) ಮಾಡಿದ್ದ ಕೆಲವು ಟೀಕೆಗಳು ನನ್ನ ಆತ್ಮವಿಶ್ವಾಸವನ್ನು ಕುಂದಿಸುವಂತಿದ್ದವು. ಆದರೆ ಪ್ರದೀಪ್ ದಾ ಅದಕ್ಕೆ ಅವಕಾಶ ಕೊಡಲಿಲ್ಲ. ಅವರ ಪ್ರೇರಣಾದಾಯಕ ಮಾರ್ಗದರ್ಶನದಲ್ಲಿ ಉತ್ತಮವಾಗಿ ಅಡಲು ಸಾಧ್ಯವಾಯತು’ ಎಂದು ಭೈಚುಂಗ್ ಗದ್ಗದಿತರಾಗುತ್ತಾರೆ.

ಆ ಪಂದ್ಯದಲ್ಲಿ ಅಮಲ್ ದತ್ತಾ ಅವರು ಬೈಚುಂಗ್ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು