ಅಂದು ಪೆಲೆ, ಇಂದು ಬಾಪೆ

7

ಅಂದು ಪೆಲೆ, ಇಂದು ಬಾಪೆ

Published:
Updated:

ಕೈಲಿಯನ್ ಬಾಪೆ ಎಂಬ 19 ವರ್ಷದ ಹುಡುಗ ಫಿಫಾ ವಿಶ್ವಕಪ್ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡದ ಗೆಲುವಿನ ಕನಸನ್ನು ನುಚ್ಚುನೂರು ಮಾಡಿದರು. ಲಯೋನೆಲ್ ಮೆಸ್ಸಿ ಎಂಬ ದೈತ್ಯನಿಗೆ ಸವಾಲೊಡ್ಡಿದರು. ಅದೇ ಪಂದ್ಯದಲ್ಲಿ ಎರಡು ಗೋಲು ಹೊಡೆದು 60 ವರ್ಷಗಳ ಹಿಂದೆ ಬ್ರೆಜಿಲ್ ದಿಗ್ಗಜ ಪೆಲೆ ಮಾಡಿದ್ದ ದಾಖಲೆಯನ್ನೂ ಬಾಪೆ ಸರಿಗಟ್ಟಿದರು. ಈಗ ಫ್ರಾನ್ಸ್‌ ದೇಶದ ಕಣ್ಮಣಿ.

ಫ್ರಾನ್ಸ್‌ ತಂಡದಲ್ಲಿ ಹತ್ತಕ್ಕೂ ಹೆಚ್ಚು ಆಫ್ರಿಕಾ ಮೂಲದ ಆಟಗಾರರಿದ್ದು, ಅದರಲ್ಲಿ ಪಾಲ್ ಪೋಗ್ಬಾ ಎಂಬ ಪ್ರತಿಭಾಶಾಲಿ ಕೂಡ ಇದ್ದಾರೆ. ವಿಶ್ವದ ಹತ್ತು ಶ್ರೀಮಂತ ಫುಟ್‌ಬಾಲ್ ಆಟಗಾರರಲ್ಲಿ ಪೋಗ್ಬಾ ಕೂಡ ಒಬ್ಬರು. 

ಬ್ರೆಜಿಲ್‌ನ ಪೆಲೆ ಯಶೋಗಾಥೆಯ ಪ್ರೇರಣೆಯಿಂದ ಬಾಪೆಯಂಥ ಅಪ್ಪಟ ಪ್ರತಿಭೆಗಳು ಫುಟ್‌ಬಾಲ್ ಅಂಗಳದಲ್ಲಿ ಬೆಳೆಯುತ್ತಿವೆ. ಈ ಬಾರಿ ಫಿಫಾ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿರುವ ಎರಡು ಪ್ರಮುಖ ತಂಡಗಳ ಸಾಧನೆಗೂ ಇಂಥ ಅಪ್ಪಟ ಆಟಗಾರರೇ ಕಾರಣರಾಗಿರುವುದು ವಿಶೇಷ. 

ರೊಮೆಲೊ ಲುಕಾಕು ಎಂಬ ದೈತ್ಯ
ಈ ಬಾರಿಯ ‘ಚಿನ್ನದ ಬೂಟು’ ಜಯಿಸುವವರ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಬೆಲ್ಜಿಯಂ ಆಟಗಾರ ರೊಮೆಲೊ ಲುಕಾಕು 14 ವರ್ಷಗಳ ಹಿಂದೆ ಹರಿದ ಬೂಟಿಗಾಗಿ ಪರದಾಡಿದ್ದರು! ಬಡತನದಲ್ಲಿ ಬಾಲ್ಯ ಕಳೆದ ಲುಕಾಕು ಈಗ ಫುಟ್‌ಬಾಲ್ ಪ್ರಿಯರ ಕಣ್ಮಣಿ. ತಮ್ಮ ತಾಯಿಯು ಬಾಲ್ಯದಲ್ಲಿ ನೀರಿನಲ್ಲಿ ಹಾಲು ಬೆರೆಸಿ ಕೊಡುತ್ತಿದ್ದ ದಿನಗಳನ್ನು ಲುಕಾಕು ಅವರೇ ಒಂದು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದರು. 

ಫುಟ್‌ಬಾಲ್ ಆಟದ ಮೂಲಕವೇ ತಮ್ಮ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಛಲ ಅವರನ್ನು ಈ ಮಟ್ಟಕ್ಕೆ ಬೆಳೆಸಿತು. ಈ ಟೂರ್ನಿಯ ಜಿ ಗುಂಪಿನಲ್ಲಿ ಬೆಲ್ಜಿಯಂ ತಂಡದ ಪಂದ್ಯದಲ್ಲಿ ಟ್ಯುನಿಷಿಯಾ ಮತ್ತು ಪನಾಮ ತಂಡಗಳ ಎದುರು ಅಮೋಘ ಆಟವಾಡಿದ್ದ ಲುಕಾಕು, ಗೆಲುವಿನ ರೂವಾರಿಯಾಗಿದ್ದರು. ಫುಟ್‌ಬಾಲ್ ಲೋಕದ ದೈತ್ಯ ಬ್ರೆಜಿಲ್ ತಂಡವೂ ಕ್ವಾರ್ಟರ್‌ ಫೈನಲ್‌ನಲ್ಲಿ ಲುಕಾಕು ಅವರನ್ನು ನಿಯಂತ್ರಿಸುವತ್ತಲೇ ಹೆಚ್ಚು ಗಮನ ನೀಡಿತ್ತು. ಅಷ್ಟರಮಟ್ಟಿಗೆ ಎದುರಾಳಿ ತಂಡಗಳಿಗೆ ಅವರು ಭಯ ಮೂಡಿಸಿದ್ದಾರೆ. 

ತನ್ನ 12ನೇ ವಯಸ್ಸಿನಲ್ಲಿ ಅಪ್ಪನ ಹರಿದಿದ್ದ ಬೂಟು ಹಾಕಿಕೊಂಡೇ ಫುಟ್‌ಬಾಲ್ ಆಡುತ್ತಿದ್ದ ಲುಕಾಕು ಅವರ ಅಮೋಘವಾದ ಸ್ಟ್ರೈಕಿಂಗ್‌ ಎಲ್ಲರ ಗಮನ ಸೆಳೆದಿತ್ತು. ಇದೀಗ ವಿಶ್ವದ ಪ್ರಮುಖ ಸ್ಟ್ರೈಕರ್‌ಗಳಲ್ಲಿ ಒಬ್ಬರಾಗಿದ್ದಾರೆ. ಈ ಆಧುನಿಕ ಯುಗದಲ್ಲಿಯೂ ತಮ್ಮ ಜನಾಂಗದ ಬಗ್ಗೆ ಕೇಳಿ ಬರುವ ನಿಂದನೆಗಳನ್ನು ಸಹಿಸಿಕೊಂಡು ಬೆಳೆದು ಬಂದಿದ್ದಾರೆ.

14ನೇ ವಯಸ್ಸಿನಲ್ಲಿ ರಾಷ್ಟ್ರೀಯ ಜೂನಿಯರ್ ತಂಡಕ್ಕೆ ಆಯ್ಕೆಯಾಗಿದ್ದ ಲುಕಾಕು ಹರಿದಿದ್ದ ಮತ್ತು ಬಣ್ಣ ಮಾಸಿದ್ದ ಟ್ರ್ಯಾಕ್ ಸೂಟ್ ಹಾಕಿಕೊಂಡು ಹೋಗಿದ್ದರು. ಉಳಿದ ಆಟಗಾರರು ಬೆಲೆ ಬಾಳುವ ಪೋಷಾಕುಗಳನ್ನು ಧರಿಸಿದ್ದರು. ಅದರಲ್ಲಿಯೇ ಕೆಲವರು ಲುಕಾಕು ಅವರನ್ನು ಹಂಗಿಸಿದ್ದರು. ಆದರೆ  ಈಗ ಅವರು ಗೋಲು ಹೊಡೆದಾಗ ತಂಡದಲ್ಲಿರುವ ಎಲ್ಲ ವರ್ಣದ ಆಟಗಾರರೂ ಬಿಗಿದಪ್ಪಿ ಮುದ್ದಿಸುತ್ತಾರೆ. ಕ್ಲಬ್‌ಗಳಿಗೂ ಅವರು ಅನಿವಾರ್ಯ ಆಟಗಾರನಾಗಿದ್ದಾರೆ. ಅವರ ಬ್ಯಾಂಕ್ ಖಾತೆಯಲ್ಲಿ ಈಗ ಕೋಟಿಗಟ್ಟಳೆ ದುಡ್ಡು ಇದೆ.

ಸೆನೆಗಲ್ ಕೋಚ್ ಕಥೆ
ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಸೆನೆಗಲ್ ಎಲ್ಲರ ಗಮನ ಸೆಳೆಯಿತು. ಜಪಾನ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ತಂಡ ಹೊರಬಿತ್ತು. ಆದರೆ ಆ ಪಂದ್ಯದಲ್ಲಿ ಸಮಬಲ ಸಾಧಿಸಿದ್ದ ಸೆನೆಗಲ್‌ ಹಳದಿ ಕಾರ್ಡ್‌ಗಳನ್ನು ಹೆಚ್ಚು ಪಡೆದಿದ್ದ ಕಾರಣ ಟೂರ್ನಿಯಿಂದ ಹೊರಬೀಳಬೇಕಾಯಿತು. ಇಲ್ಲದಿದ್ದರೆ ಪ್ರೀ ಕ್ವಾರ್ಟರ್‌ಫೈನಲ್‌ ತಲುಪುವ ಫೆವರಿಟ್ ತಂಡ ಅದಾಗಿತ್ತು. 

ತಂಡದ ಈ ಸಾಧನೆಯ ಹಿಂದೆ ಅವರ ಕೋಚ್ ಅಲಿವ್ ಸಿಸೆ ಅವರ ಪರಿಶ್ರಮ ದೊಡ್ಡದು. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಯಾವ ತಂಡಕ್ಕೂ ಆಫ್ರಿಕನ್‌ ಜನಾಂಗದ ಕೋಚ್ ಇಲ್ಲ. ಸೆನೆಗಲ್‌ ತಂಡಕ್ಕೆ ಮಾತ್ರ ಇರುವುದು. ಮಾಜಿ ಫುಟ್‌ಬಾಲ್‌ ಆಟಗಾರ ತಮ್ಮ ಜೀವನದುದ್ದಕ್ಕೂ ಜನಾಂಗೀಯ ನಿಂದನೆಗಳನ್ನು ಎದುರಿಸುತ್ತಲೇ ಬೆಳೆದವರು. ಇಲ್ಲಿಯೂ ಅವರಿಗೆ ಅದರ ಬಿಸಿ ತಟ್ಟಿತ್ತು. ರಷ್ಯಾದಲ್ಲಿ ಎಲ್ಲ ತಂಡಗಳ ಕೋಚ್‌ಗಳಿಗೂ ಏರ್ಪಡಿಸಲಾಗಿದ್ದ ಔತಣ ಕೂಟಕ್ಕೆ ಅಲಿವ್ ಅವರಿಗೆ  ಆಹ್ವಾನ ನೀಡಿರಲಿಲ್ಲ ಎಂದು ಬಿಬಿಸಿ ವರದಿ ಮಾಡಿತ್ತು. ನಂತರ ಎಚ್ಚೆತ್ತುಕೊಂಡ ಸಂಘಟಕರು ಅಲಿವ್ ಅವರಿಗೆ ವಿಶೇಷ ಗೌರವ ನೀಡಿದ್ದರು. 


ಫ್ರಾನ್ಸ್‌ನ ಬಾಪೆ

ವಿಕ್ಟರ್ ಮೊಸೆಸ್ ಕಾಲ್ಚಳಕ
ನೈಜಿರಿಯಾ ತಂಡದ ವಿಕ್ಟರ್ ಮೊಸೆಸ್ ಅವರದ್ದು ಇನ್ನೊಂದು ಬಗೆಯ ಕಥೆ. ನೈಜಿರಿಯಾದ ಲಾಗೋಸ್‌ನಲ್ಲಿ ಅವರ ತಂದೆ  ಪಾದ್ರಿಯಾಗಿದ್ದವರು. ಅದೊಂದು ದಿನ ವಿಕ್ಟರ್ ತಂದೆ ಮತ್ತು ಕುಟುಂಬದ ಹನ್ನೊಂದು ಜನರನ್ನು ಉಗ್ರಗಾಮಿಗಳು ಗುಂಡಿಕ್ಕಿ ಸಾಯಿಸಿದ್ದರು. ಆ ಸಂದರ್ಭ ದಲ್ಲಿ ವಿಕ್ಟರ್‌ ಮನೆಯಿಂದ ಸ್ವಲ್ಪ ದೂರದ ರಸ್ತೆಯೊಂದ ರಲ್ಲಿ ಫುಟ್‌ಬಾಲ್ ಆಡುತ್ತಿದ್ದರು. ಆದ್ದರಿಂದ ಅವರು ಬದಕುಳಿದರು. ಅವತ್ತು ಜೀವ ಉಳಿಸಿದ ಫುಟ್‌ಬಾಲ್‌ ಈಗ ಅವರ ಜೀವನದ ಅತ್ಯಾಪ್ತ ಬದುಕೇ ಆಗಿದೆ.
ಘಟನೆಯ ಒಂದು ವಾರದ ನಂತರ ಸಂಬಂಧಿಯೊಬ್ಬರು ಧನಸಹಾಯ ನೀಡಿ ಅವರನ್ನು ಲಂಡನ್‌ಗೆ ಕಳಿಸಿದರು. ಅಲ್ಲಿಯ ಕ್ರಿಸ್ಟಲ್‌ ಪ್ಯಾಲೆಸ್ ಎಫ್‌ಸಿಯಲ್ಲಿ ಫುಟ್‌ಬಾಲ್ ಆಡಲಾರಂಭಿಸಿದರು. ಆ ನಡೆ ಜೀವನದ ದಿಕ್ಕು ಬದಲಿಸಿತು. ಹಲವು ವರ್ಷಗಳ ನಂತರ ತಾಯ್ನಾಡಿಗೆ ಮರಳಿದರು. ಈ ಬಾರಿ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಅರ್ಜೆಂಟೀನಾ ತಂಡಕ್ಕೆ ದಿಟ್ಟ ಸವಾಲು ಒಡ್ಡಿತ್ತು. ಅದರಲ್ಲಿ ವಿಕ್ಟರ್ ಅವರ ಆಟವೇ ರಂಗೇರಿತ್ತು. ಎರಡನೇ ಪಂದ್ಯದಲ್ಲಿ ಐಸ್‌ಲ್ಯಾಂಡ್ ಎದುರು ಕೂಡ ತಂಡವು ಗೆದ್ದಿತ್ತು. 

ಫಿಫಾ ಇತಿಹಾಸದಲ್ಲಿ ಪೆಲೆಯಿಂದ ಬಾಪೆಯವರೆಗೆ ಅಪ್ಪಟ ಪ್ರತಿಭೆಗಳ ಕೀರ್ತಿಪತಾಕೆ ಹೆಮ್ಮೆಯಿಂದ ಹಾರಾಡುತ್ತಿದೆ.     
 

ಸುಧಾ: 19 ಜುಲೈ, 2018

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !