ನಿರಾಸೆಯ ಕೂಪಕ್ಕೆ ಬಿದ್ದ ಪೋರ್ಚುಗಲ್‌

7
ಉರುಗ್ವೆ ತಂಡದ ಆಕ್ರಮಣಕ್ಕೆ ಮಣಿದ ಕ್ರಿಸ್ಟಿಯಾನೊ ರೊನಾಲ್ಡೊ ಬಳಗ

ನಿರಾಸೆಯ ಕೂಪಕ್ಕೆ ಬಿದ್ದ ಪೋರ್ಚುಗಲ್‌

Published:
Updated:
ಪೋರ್ಚುಗಲ್‌ ಎದುರಿನ ಪಂದ್ಯದಲ್ಲಿ ಉರುಗ್ವೆಯ ಜಯಕ್ಕೆ ಕಾರಣರಾದ ಎಡಿನ್ಸನ್ ಕವಾನಿ ಗೋಲು ಗಳಿಸಿದ ನಂತರ ಸಂಭ್ರಮಿಸಿದರು ಪಿಟಿಐ ಚಿತ್ರ

ಸೋಚಿ: ಗುಂಪು ಹಂತದ ಮೊದಲ ಪಂದ್ಯದಲ್ಲಿ ಹ್ಯಾಟ್ರಿಕ್‌ ಗೋಲು ಗಳಿಸಿ ಮಿಂಚಿದ ಕ್ರಿಸ್ಟಿಯಾನೊ ರೊನಾಲ್ಡೊ ಉರುಗ್ವೆಯ ಬಲಿಷ್ಠ ರಕ್ಷಣಾಗೋಡೆಯನ್ನು ಭೇದಿಸಲು ಪರದಾಡಿದರು. ಎದುರಾಳಿ ತಂಡದ ಆಕ್ರಮಣಕಾರಿ ಆಟಕ್ಕೆ ಬೆದರಿದ ಪೋರ್ಚುಗಲ್‌ ತಂಡ ಪ್ರೀ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಸೋಲಿಗೆ ಶರಣಾಯಿತು. 2–1 ಗೋಲುಗಳ ಅಂತರದಿಂದ ಗೆದ್ದ ಉರುಗ್ವೆ ಎಂಟರ ಘಟ್ಟಕ್ಕೆ ಪ್ರವೇಶಿಸಿತು.

ಮೊದಲ ಪಂದ್ಯದಲ್ಲಿ ಅಮೋಘವಾಗಿ ಆಡಿದ್ದ ರೊನಾಲ್ಡೊಗೆ ನಂತರ ಮಿಂಚಲು ಆಗಲಿಲ್ಲ. ಮೊರೊಕ್ಕೊ ಎದುರಿನ ಪಂದ್ಯದಲ್ಲಿ ಅವರು ಏಕೈಕ ಗೋಲು ಗಳಿಸಿದ್ದರು. ಇರಾನ್‌ನ ಬಲಿಷ್ಠ ರಕ್ಷಣಾ ವಿಭಾಗದ ವಿರುದ್ಧ ಅವರ ಆಟ ನಡೆದಿರಲಿಲ್ಲ. ಭಾನುವಾರದ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅವರು ಮತ್ತೆ ಸಹಜ ಸಾಮರ್ಥ್ಯ ತೋರುವರು ಎಂಬ ವಿಶ್ವಾಸದಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ  ಆಯಿತು.

ಸಂಘಟಿತ ಆಟ ಆಡಿದ ಉರುಗ್ವೆ ತಂಡದವರು 2016ರ ಯೂರೊ ಕಪ್ ಚಾಂಪಿಯನ್ನರು ಪಂದ್ಯದ ಮೇಲೆ ಹಿಡಿತ ಸಾಧಿಸದಂತೆ ತಡೆ ಹಾಕುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ಭರವಸೆಯಿಂದ ಮುನ್ನಡೆದ ರೊನಾಲ್ಡೊ ನಂತರ ಉದ್ವೇಗಕ್ಕೆ ಒಳಗಾದವರಂತೆ ಕಂಡು ಬಂದರು. ಹೀಗಾಗಿ ಚೆಂಡನ್ನು ಗುರಿ ಸೇರಿಸುವಲ್ಲಿ ವಿಫಲರಾದರು.

ಪಂದ್ಯದಲ್ಲಿ ಚೆಂಡಿನ ಮೇಲೆ ಹೆಚ್ಚು ಕಾಲ ಹಿಡಿತ ಸಾಧಿಸಿದ್ದರೂ ನಿಖರ ಪಾಸ್‌ಗಳ ಮೂಲಕ ಎದುರಾಳಿಗಳ ಪಾಳಯಕ್ಕೆ ನುಗ್ಗಲು ರೊನಾಲ್ಡೊ ಬಳಗಕ್ಕೆ ಸಾಧ್ಯವಾಗಲಿಲ್ಲ. ರಕ್ಷಣಾ ವಿಭಾಗವೂ ಪ್ರಭಾವಿ ಆಟ ಆಡಲಾಗದೆ ಮಂಕಾಯಿತು.

ಏಳನೇ ನಿಮಿಷದಲ್ಲಿ ಎಡಿನ್ಸನ್ ಕವಾನಿ ಮೂಲಕ ಖಾತೆ ತೆರೆದು ಮುನ್ನಡೆ ಗಳಿಸಿದ ಉರುಗ್ವೆ ನಂತರ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಹೀಗಾಗಿ ವಿರಾಮಕ್ಕೆ ತೆರಳುವಾಗ ಪೋರ್ಚುಗಲ್‌ ಸಂಪಾದನೆ ಶೂನ್ಯವಾಗಿತ್ತು.

55ನೇ ನಿಮಿಷದಲ್ಲಿ ಪೆಪೆ ಅವರು ಗಳಿಸಿದ ಗೋಲು ಪೋರ್ಚುಗಲ್ ಪಾಳಯದಲ್ಲಿ ಭರವಸೆ ಮೂಡಿಸಿತು. ಆದರೆ 62ನೇ ನಿಮಿಷದಲ್ಲಿ ಕವಾನಿ ಮತ್ತೊಮ್ಮೆ ಮಿಂಚಿದರು. ನಂತರ ಪೋರ್ಚುಗಲ್‌ ತಂಡದ ಪ್ರಯತ್ನಗಳೆಲ್ಲವೂ ವಿಫಲವಾದವು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !