ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

37 ವರ್ಷ ಜೈಲು ಶಿಕ್ಷೆ ನಂತರ ನೆನಪಾದ ವಯಸ್ಸು!

‘ಬಾಲಾಪರಾಧಿ’ ವಿನಾಯಿತಿ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೊಕ್ಕ ಅಪರಾಧಿ
Last Updated 4 ಫೆಬ್ರುವರಿ 2018, 19:51 IST
ಅಕ್ಷರ ಗಾತ್ರ

ನವದೆಹಲಿ: ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಈಗಾಗಲೇ 37 ವರ್ಷ ಜೈಲಿನಲ್ಲಿ ಕಳೆದಿರುವ ಅಪರಾಧಿಯೊಬ್ಬನಿಗೆ ಈಗ ದಿಢೀರನೆ ತನ್ನ ವಯಸ್ಸಿನ ನೆನಪಾಗಿದೆ!

‘1979ರಲ್ಲಿ ಘಟನೆ ನಡೆದಾಗ ನಾನು ಅಪ್ರಾಪ್ತ ವಯಸ್ಸಿನವನಾಗಿದ್ದೆ. ಹೀಗಾಗಿ ನನಗೆ ವಿಧಿಸಿದ ಶಿಕ್ಷೆ ರದ್ದು ಮಾಡಿ’ ಎಂದು ಕೋರಿ 57 ವರ್ಷದ ವಿಜಯ್‌ ಪಾಲ್‌ ಎಂಬ ಅಪರಾಧಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾನೆ.

ಶಾಲಾ ಬಿಡುಗಡೆ ಪ್ರಮಾಣಪತ್ರದೊಂದಿಗೆ ನ್ಯಾಯಾಲಯದ ಕದತಟ್ಟಿದ ಪಾಲ್‌, ಭಾರತೀಯ ದಂಡಸಂಹಿತೆ (ಐಪಿಸಿ) ಅಡಿ ಪ್ರಕರಣವನ್ನು ಪರಿಗಣಿಸಬಾರದೆಂದು ಮನವಿ ಮಾಡಿದ್ದಾನೆ. ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ಹಾಗೂ ಎಲ್‌.ನಾಗೇಶ್ವರ ರಾವ್‌ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಿದೆ.

ಉತ್ತರ ಪ್ರದೇಶದ ಹರ್ದೋಯಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ವಿಜಯ್‌ಗೆ ಪ್ರಮಾಣಪತ್ರ ನೀಡಿದ್ದಾರೆ. ಅದರ ಪ್ರಕಾರ, 1979ರಲ್ಲಿ ಕೊಲೆ ನಡೆಸಿದಾಗ ವಿಜಯ್‌ ವಯಸ್ಸು 16 ವರ್ಷ 11 ತಿಂಗಳು ಹಾಗೂ 9 ದಿನ.

ಬಾಲನ್ಯಾಯ ಕಾಯ್ದೆ (ಮಕ್ಕಳ ಆರೈಕೆ ಹಾಗೂ ರಕ್ಷಣೆ) ಪ್ರಕಾರ, ಪ್ರಕರಣದ ವಿಚಾರಣೆ ಹಂತದಲ್ಲಿ ಇಲ್ಲವೇ ಪ್ರಕರಣ ಇತ್ಯರ್ಥಗೊಂಡ ನಂತರವೂ ಬಾಲ ಅಪರಾಧಿ ತನ್ನ ವಯಸ್ಸಿನ ಕಾರಣ ಮುಂದಿಟ್ಟುಕೊಂಡು ವಿನಾಯಿತಿ ಪಡೆಯಬಹುದಾಗಿದೆ.

‘ನನ್ನ ವಿಚಾರಣೆಯೂ ಕ್ರಮಬದ್ಧವಾಗಿಲ್ಲ’ ಎಂದು ದೂರಿ ಉತ್ತರ ಪ್ರದೇಶದ ಫತೇಗಡ ಜೈಲಿನಲ್ಲಿರುವ ಅಪರಾಧಿಯು ಜೈಲಿನ ಅಧಿಕಾರಿ ಮೂಲಕ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ವಕೀಲ ದೀಪಕ್‌ ಕುಮಾರ್‌ ಜೆನಾ ಅವರನ್ನು ಅರ್ಜಿದಾರರ ಪ್ರತಿನಿಧಿಯಾಗಿ ಸುಪ್ರೀಂ ಕೋರ್ಟ್‌ ನೇಮಿಸಿತ್ತು.

ವಕೀಲ ದೀಪಕ್‌ ಅವರು ಈ ಕುರಿತ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ’ಅರ್ಜಿದಾರರು ಅಪರಾಧ ಕೃತ್ಯವೆಸಗಿದ ವೇಳೆ 18 ವರ್ಷಕ್ಕಿಂತ ಕೆಳಗಿನವರು. ಶಾಲಾ ಪ್ರಮಾಣಪತ್ರದ ಪ್ರಕಾರ, ಜನ್ಮದಿನಾಂಕ 1962 ಜುಲೈ 2 ಎಂದು ನಮೂದಾಗಿದೆ’ ಎಂದು ವರದಿಯಲ್ಲಿ ತಿಳಿಸಿದ್ದಾರೆ.

‘ಅಪರಾಧಿ ಬಡ ಕುಟುಂಬಕ್ಕೆ ಸೇರಿದ್ದು, 5ನೇ ತರಗತಿ ವೇಳೆ ಶಾಲೆ ತೊರೆದಿದ್ದಾನೆ. ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್‌ ಕೂಡ ಭಾರತೀಯ ದಂಡಸಂಹಿತೆ (ಐಪಿಸಿ) ಅಡಿಯಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸಿದೆ. ತೀರ್ಪು ನೀಡುವ ವೇಳೆ ನ್ಯಾಯಾಲಯವು ಅಪರಾಧಿಗೆ ಬಾಲ ಅಪರಾಧಿ ವಿನಾಯಿತಿ ತೋರಿಲ್ಲ’ ಎಂದು ವಕೀಲರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ನಾಲ್ಕು ವಾರದ ಒಳಗಾಗಿ ಉತ್ತರಿಸುವಂತೆ ತಿಳಿಸಿದೆ.

ಏನಿದು ಪ್ರಕರಣ?

ಅರ್ಜಿದಾರ ಹಾಗೂ ಇತರರು ಸೇರಿ ‘ಮಹಾದೇವ್‌’ ಎಂಬುವವರನ್ನು ಕೊಲೆ ಮಾಡಿದ್ದರು. ಘಟನೆ ನಡೆದ ಏಳು ದಿನಗಳ ಬಳಿಕ ಶಿರಚ್ಛೇದಗೊಂಡ ದೇಹ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ಎಲ್ಲ ಆರೋಪಿಗಳಿಗೆ 1980ರ ಡಿಸೆಂಬರ್‌ 20ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು.

2003ರ ಸೆಪ್ಟೆಂಬರ್‌ 4ರಂದು ಅಲಹಾಬಾದ್‌ ನ್ಯಾಯಾಲಯವು ಅರ್ಜಿದಾರರ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಕೆಳಹಂತದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿ ಅರ್ಜಿಯೂ 2004ರಲ್ಲಿ ತಿರಸ್ಕೃತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT