ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮರ್‌ ಗೋಲು: ಪಿಎಸ್‌ಜಿ ಮಡಿಲಿಗೆ ಫ್ರೆಂಚ್‌ ಕಪ್‌

Last Updated 25 ಜುಲೈ 2020, 11:24 IST
ಅಕ್ಷರ ಗಾತ್ರ

ಪ್ಯಾರಿಸ್‌: ಖ್ಯಾತ ಆಟಗಾರ ನೇಮರ್ ಗಳಿಸಿ‌ದ ಗೋಲಿನ ನೆರವಿನಿಂದ ಪ್ಯಾರಿಸ್‌ ಸೇಂಟ್‌ ಜರ್ಮೈನ್ (ಪಿಎಸ್‌ಜಿ)‌ ತಂಡವು ಫ್ರೆಂಚ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ 13ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶನಿವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಆ ತಂಡ 1–0ಯಿಂದ ಸೇಂಟ್‌ ಎಟಿಯನ್‌ ವಿರುದ್ಧ ಗೆದ್ದಿತು.

ಈ ಪಂದ್ಯದಲ್ಲಿ ಪ್ರಮುಖ ಆಟಗಾರ ಕಲಿಯನ್‌ ಬಾಪೆ ಗಾಯಗೊಂಡಿದ್ದು,‌ ಪಿಎಸ್‌ಜಿ‌ ತಂಡದ ಜಯದ ಸಂಭ್ರಮವನ್ನು ಮಸುಕಾಗಿಸಿತು. ಇದರಿಂದಾಗಿಮುಂದಿನ ತಿಂಗಳು ಚಾಂಪಿಯನ್ಸ್‌ ಲೀಗ್‌ನ ಕ್ವಾರ್ಟರ್‌ಫೈನಲ್ ಪಂದ್ಯಕ್ಕೆ ಬಾಪೆ ಲಭ್ಯವಾಗುವುದು ಅನುಮಾನ. ಪಿಎಸ್‌ಜಿ ತಂಡವು ಅಟ್ಲಾಂಟ ವಿರುದ್ಧ ಈ ಪಂದ್ಯವನ್ನು ಆಡಬೇಕಿದೆ.

ಪಂದ್ಯದ 30ನೇ ನಿಮಿಷದಲ್ಲಿ ಚೆಂಡು ಹತೋಟಿಗೆ ಪಡೆಯಲು‌ ವೇಗವಾಗಿ ಓಡುತ್ತಿದ್ದ ಬಾಪೆಯನ್ನು ತಡೆಯಲುಸೇಂಟ್‌ ಎಟಿಯನ್‌ ತಂಡದ ಲೂಯಿಸ್‌ ಪೆರಿನ್ ಯತ್ನಿಸಿದರು. ಈ ವೇಳೆ ಕೆಳಕ್ಕೆ ಬಿದ್ದ ಬಾಪೆ ಅವರ ಬಲಕಾಲಿನ ಪಾದ ಉಳುಕಿತು. ಈ ಕಾರಣಕ್ಕಾಗಿ ಪೆರಿನ್‌ ಅವರಿಗೆ ರೆಫರಿ ರೆಡ್‌ ಕಾರ್ಡ್‌ ನೀಡಿದರು.

ಸೆಂಟ್‌ ಎಟಿಯನ್‌ ತಂಡದ ಪರ ಪೆರಿನ್‌ ಅವರಿಗೆ ಇದು ವಿದಾಯದ ಪಂದ್ಯವಾಗಿತ್ತು.

ಪಿಎಸ್‌ಜಿ ಪರ 14ನೇ ನಿಮಿಷದಲ್ಲಿ ಬ್ರೆಜಿಲ್‌ ರಾಷ್ಟ್ರೀಯ ತಂಡದ ಆಟಗಾರ ನೇಮರ್‌ ಗೆಲುವಿನ ಗೋಲು ಹೊಡೆದರು. ಇದಕ್ಕೂ ಮೊದಲು ಗೋಲುಗಳಿಕೆಗಾಗಿ ಬಾಪೆ ಅವರು ನಡೆಸಿದ ಪ್ರಯತ್ನವೊಂದನ್ನು ಎದುರಾಳಿ ಗೋಲ್‌ಕೀಪರ್‌ ಜೆಸ್ಸಿ ಮೌಲಿನ್‌ ತಡೆದಿದ್ದರು.

ಪಂದ್ಯಕ್ಕೂ ಮುನ್ನ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್‌‌ ಮ್ಯಾಕ್ರನ್‌ ಆಟಗಾರರನ್ನು ಉದ್ದೇಶಿಸಿ ಮಾತನಾಡಿದರು. ಸ್ಟೇಡ್‌ ಡಿ ಫ್ರಾನ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೆ 5,000 ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು. ಆದರೆ ಕೊರೊನಾ ಉಪಟಳದ ಕಾರಣ 2,805 ಮಂದಿ ಮಾತ್ರ ಹಾಜರಿದ್ದರು.

ಹೋದ ವರ್ಷ ಫ್ರೆಂಚ್‌ ಕಪ್‌ ಟೂರ್ನಿಯ ಫೈನಲ್‌ನಲ್ಲಿ ಪಿಎಸ್‌ಜಿ ತಂಡವು ರೆನ್ನೆಸ್‌ ಲೀಗ್‌ ಎದುರು ಮಣಿದಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಮಾರ್ಚ್‌ 11ರ ಬಳಿಕ ಯಾವುದೇ ಪಂದ್ಯದಲ್ಲಿ ಪಿಎಸ್‌ಜಿ ಆಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT