ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಜಯದ ವಿಶ್ವಾಸದಲ್ಲಿ ಚೆಟ್ರಿ ಪಡೆ

ಮಡಗಾಂವ್: ಈ ಬಾರಿಯ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡಕ್ಕೆ ಶುಭಾರಂಭ ಸಾಧ್ಯವಾಗಿಲ್ಲ. ಆದರೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳದ ಆ ತಂಡವು ಭಾನುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು ಎದುರಿಸಲಿದೆ.
ಸುನಿಲ್ ಚೆಟ್ರಿ ನಾಯಕತ್ವದ, ಮಾಜಿ ಚಾಂಪಿಯನ್ ಬೆಂಗಳೂರು ತಂಡವು ಇದುವರೆಗೆ ನಾಲ್ಕು ಪಂದ್ಯಗಳಲ್ಲಿ ಮೂರು ಡ್ರಾ ಸಾಧಿಸಿದ್ದು, ಒಂದರಲ್ಲಿ ಮಾತ್ರ ಗೆದ್ದಿದೆ. ಕೇರಳ ತಂಡವನ್ನು ಮಣಿಸಿ ಪೂರ್ಣ ಮೂರು ಪಾಯಿಂಟ್ಸ್ ಗಳಿಸುವ ವಿಶ್ವಾಸದಲ್ಲಿ ಬಿಎಫ್‌ಸಿ ಕೋಚ್ ಕಾರ್ಲಸ್ ಕ್ವದ್ರತ್ ಇದ್ದಾರೆ.
‘ಟೂರ್ನಿಯ ಆರಂಭದಲ್ಲಿ ನಾವು ರೂಪಿಸಿದ ತಂತ್ರಗಳು ಅಷ್ಟೊಂದು ಫಲ ಕೊಟ್ಟಿಲ್ಲ. ಆದರೆ ಭವಿಷ್ಯದಲ್ಲಿ ಇದರಿಂದ ಅನುಕೂಲವಾಗಲಿದೆ. ಪರ್ಯಾಯ ತಂತ್ರಗಳೂ ನಮ್ಮಲ್ಲಿವೆ‘ ಎಂದು ಕ್ವದ್ರತ್ ಹೇಳಿದ್ದಾರೆ.
‘ನಾವು ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದೇವೆ. ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಠರಾಗಬೇಕಿದೆ. ಕೆಲವು ತಂಡಗಳು ಉತ್ತಮ ಸಿದ್ಧತೆ ನಡೆಸಿ ಟೂರ್ನಿಗೆ ಕಾಲಿಟ್ಟಿದ್ದರೂ ಮೂರು ಪಾಯಿಂಟ್ಸ್ ಗಳಿಸಲು ಸಾಧ್ಯವಾಗಿಲ್ಲ‘ ಎಂದರು.
ಈ ಋತುವಿನಲ್ಲಿ ಕೇರಳ ತಂಡವು ಎದುರಾಳಿಗೆ ಆರು ಗೋಲುಗಳನ್ನು ಬಿಟ್ಟುಕೊಟ್ಟಿದೆ. ಈ ಕಳವಳವು ಆ ತಂಡದ ಕೋಚ್ ಕಿಬು ವಿಕುನಾ ಅವರ ಧ್ವನಿಯಲ್ಲಿ ವ್ಯಕ್ತವಾಗಿದೆ.
’ಎದುರಾಳಿಗಳು ಗೋಲು ಬಿಟ್ಟುಕೊಡುವ ವಿಷಯದಲ್ಲಿ ನಮ್ಮ ದೌರ್ಬಲ್ಯವನ್ನು ಸುಧಾರಿಸಿಕೊಳ್ಳಬೇಕಿದೆ. ನಾಲ್ಕು ಪಂದ್ಯಗಳಲ್ಲಿ ಕೇವಲ ಎರಡು ಪಾಯಿಂಟ್ಸ್ ಗಳಿಸುತ್ತೇವೆ ಎಂದುಕೊಂಡಿರಲಿಲ್ಲ. ಈ ಪಂದ್ಯದಲ್ಲಿ ಉತ್ತಮ ಸಾಮರ್ಥ್ಯ ತೋರುತ್ತೇವೆ‘ ಎಂದು ಕಿಬು ಹೇಳಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.