ಶುಕ್ರವಾರ, ಡಿಸೆಂಬರ್ 6, 2019
26 °C

ಅತ್ಯಾಚಾರ ಆರೋಪ: ಡಿಎನ್‌ಎ ಮಾದರಿ ನೀಡುವಂತೆ ರೊನಾಲ್ಡೊಗೆ ಸೂಚನೆ

Published:
Updated:
Prajavani

ಲಾಸ್‌ ಏಂಜಲಿಸ್‌: ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಡಿಎನ್‌ಎ ಮಾದರಿ ನೀಡುವಂತೆ ಪೋರ್ಚುಗಲ್‌ನ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ಲಾಸ್‌ ಏಂಜಲೀಸ್ ಪೊಲೀಸರು ಸೂಚಿಸಿದ್ದಾರೆ.

2009ರಲ್ಲಿ ಲಾಸ್‌ ವೆಗಾಸ್‌ನ ‘ಪೆಂಟ್‌ ಹೌಸ್‌ ಸೂಟ್‌’ನಲ್ಲಿ ರೊನಾಲ್ಡೊ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಆ ವಿಷಯ ಬಹಿರಂಗ ಪಡಿಸದಂತೆ ಬೆದರಿಸಿದ್ದ ಅವರು ಆಪ್ತರನ್ನು ನನ್ನ ಬಳಿ ಕಳುಹಿಸಿ ₹2.75 ಕೋಟಿ ಹಣದ ಆಮಿಷ ಒಡ್ಡಿದ್ದರು. ಆಗ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮ್ಮೆ ಹೂಡಲಾಗಿತ್ತು. ಆದರೆ ಪ್ರಕರಣದ ತನಿಖೆ ದಾರಿ ತಪ್ಪಿದ್ದರಿಂದ ನ್ಯಾಯ ಸಿಕ್ಕಿರಲಿಲ್ಲ. ಹೀಗಾಗಿ ಪ್ರಕರಣದ ಮರು ತನಿಖೆ ಮಾಡಬೇಕೆಂದು ನೆವಾಡದ ರೂಪದರ್ಶಿ ಕ್ಯಾತರಿನ್‌ ಮಯೋರ್ಗಾ, ಹೋದ ವರ್ಷದ ಅಕ್ಟೋಬರ್‌ನಲ್ಲಿ ಪೋಲಿಸರಿಗೆ ಒತ್ತಾಯಿಸಿದ್ದರು.

ಮಹಿಳೆಯ ಮನವಿ ಮೇರೆಗೆ ಪ್ರಕರಣದ ಮರು ತನಿಖೆ ನಡೆಸಲು ಮುಂದಾಗಿರುವ ಪೊಲೀಸರು ಈಗ ಡಿಎನ್‌ಎ ಮಾದರಿ ಸಂಗ್ರಹಿಸಲು ನಿರ್ಧರಿಸಿದ್ದಾರೆ.

2009ರ ಜೂನ್‌ 12ರ ರಾತ್ರಿ ನಾನು, ಸ್ನೇಹಿತೆಯರೊಂದಿಗೆ ಪಾಮ್‌ ಹೋಟೆಲ್‌ನ ರೈನ್‌ ನೈಟ್‌ಕ್ಲಬ್‌ಗೆ ಹೋಗಿದ್ದೆ. ಅಲ್ಲಿ ರೊನಾಲ್ಡೊ ಪರಿಚಯವಾಗಿತ್ತು. ಆಗ ಅವರು ಸ್ನೇಹಿತೆಯರ ಜೊತೆ ತಮ್ಮ ಐಷಾರಾಮಿ ‘ಪೆಂಟ್‌ ಹೌಸ್‌ ಸೂಟ್‌’ಗೆ ಬರುವಂತೆ ಆಹ್ವಾನ ನೀಡಿದ್ದರು. ಕೊಠಡಿಯಲ್ಲಿ ಏಕಾಂಗಿಯಾಗಿರುವ ಸಮಯದಲ್ಲಿ ನನ್ನ ಬಳಿ ಬಂದಿದ್ದ ಕ್ರಿಸ್ಟಿಯಾನೊ, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಕೇಳಿಕೊಂಡಿದ್ದರು. ಇದಕ್ಕೆ ಒಪ್ಪದಿದ್ದಾಗ ಅತ್ಯಾಚಾರ ಎಸಗಿದ್ದರು ಎಂದು ಕ್ಯಾತರಿನ್‌ ಅವರು ದೂರಿನಲ್ಲಿ ವಿವರಿಸಿದ್ದರು. ಈ ಆರೋಪಗಳನ್ನು ಕ್ರಿಸ್ಟಿಯಾನೊ ಅಲ್ಲಗಳೆದಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು