ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಸರಿಗಟ್ಟಿದ ರೊನಾಲ್ಡೊ; ಯುವೆಂಟಸ್‌ಗೆ ದಾಖಲೆಯ ಪ್ರಶಸ್ತಿ

Last Updated 27 ಜುಲೈ 2020, 7:51 IST
ಅಕ್ಷರ ಗಾತ್ರ

ಟ್ಯೂರಿನ್: ನಿರೀಕ್ಷೆಯಂತೆಯೇ ಎಲ್ಲವೂ ನಡೆಯಿತು. ಕ್ರಿಸ್ಟಿಯಾನೊ ರೊನಾಲ್ಡೊ ಮತ್ತೊಮ್ಮೆ ಕಾಲ್ಚಳಕ ತೋರಿದರು. ಅವರ ಅಮೋಘ ಆಟದ ನೆರವಿನಿಂದ ಯುವೆಂಟಸ್ ತಂಡ ಸೀರಿ ‘ಎ’ ಫುಟ್‌ಬಾಲ್ ಲೀಗ್‌ನ ಪ್ರಶಸ್ತಿ ಗೆದ್ದು ಸಂಭ್ರಮಿಸಿತು. ಲೀಗ್‌ನಲ್ಲಿ ಯುವೆಂಟಸ್‌ಗೆ ಇದು ಸತತ ಒಂಬತ್ತನೇ ಪ್ರಶಸ್ತಿಯಾಗಿದ್ದುದರಿಂದ ಆಟಗಾರರ ಸಂಭ್ರಮದಲ್ಲಿ ದಾಖಲೆಯ ಸೊಬಗು ಇತ್ತು.

ಭಾನುವಾರ ತಡರಾತ್ರಿ ಸಂಪೋರಿಯಾ ಎದುರು ನಡೆದ ಪಂದ್ಯದ ಕೊನೆಯ ಅವಧಿಯಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ರೊನಾಲ್ಡೊಗೆ ಸಾಧ್ಯವಾಗಲಿಲ್ಲ. ಆದರೆ ಅದಕ್ಕೂ ಮುನ್ನ ಎದುರಾಳಿಗಳ ವಿರುದ್ಧ 2–0 ಅಂತರದ ಗೆಲುವು ಸಾಧಿಸಲು ಬೇಕಾದ ಭೂಮಿಕೆಯನ್ನು ಪೋರ್ಚುಗಲ್‌ನ ಈ ಆಟಗಾರ ಸಿದ್ಧಪಡಿಸಿದ್ದರು.

ಮೊದಲಾರ್ಧದ ಮುಕ್ತಾಯಕ್ಕೆ ನಿಮಿಷಗಳು ಉಳಿದಿರುವಾಗಲೂ ಖಾತೆ ತೆರೆಯಲು ಉಭಯ ತಂಡಗಳಿಗೂ ಸಾಧ್ಯವಾಗಿರಲಿಲ್ಲ. ಆದರೆ ಇಂಜುರಿ ಅವಧಿಯ ಏಳನೇ ನಿಮಿಷದಲ್ಲಿ ಚೆಂಡನ್ನು ಬಲೆಗೆ ತಳ್ಳಿದ ರೊನಾಲ್ಡೊ, ಯುವೆಂಟಸ್‌ಗೆ ಮುನ್ನಡೆ ಗಳಿಸಿಕೊಟ್ಟರು. ರೊನಾಲ್ಡೊಗೆ ಈ ಬಾರಿ ಲೀಗ್‌ನಲ್ಲಿ ಇದು 31ನೇ ಗೋಲಾಗಿತ್ತು. ದ್ವಿತೀಯಾರ್ಧದಲ್ಲಿ ಫೆಡರಿಕೊ ಬೆರ್ನಾಡೆಶಿ (67ನೇ ನಿಮಿಷ) ಗಳಿಸಿದ ಗೋಲಿನ ಮೂಲಕ ತಂಡದ ಮುನ್ನಡೆ ಹೆಚ್ಚಿತು. ತಿರುಗೇಟು ನೀಡಲು ಸಂಪೋರಿಯಾ ನಡೆಸಿದ ಪ್ರಯತ್ನಗಳೆಲ್ಲವೂ ವ್ಯರ್ಥವಾದವು.

ಈ ಜಯದೊಂದಿಗೆ ತಂಡ ಇಂಟರ್ ಮಿಲಾನ್‌ಗಿಂತ ಏಳು ಪಾಯಿಂಟ್‌ಗಳ ಸ್ಪಷ್ಟ ಮುನ್ನಡೆ ಗಳಿಸಿ ಪ್ರಶಸ್ತಿ ಖಚಿತಪಡಿಸಿಕೊಂಡಿತು. ಯುವೆಂಟಸ್ ಬಳಿ ಈಗ 83 ಪಾಯಿಂಟ್‌ಗಳಿದ್ದು ಮಿಲಾನ್ ಖಾತೆಯಲ್ಲಿರುವುದು 76 ಪಾಯಿಂಟ್‌ಗಳು. ಲೀಗ್‌ನಲ್ಲಿ ಯುವೆಂಟಸ್‌ಗೆ ಇನ್ನು ಎರಡು ಪಂದ್ಯಗಳು ಇವೆ. ಜುಲೈ 30ರಂದು ಕಗ್ಲಿಯಾರಿ ಎದುರು ಮತ್ತು ಆಗಸ್ಟ್ ಎರಡರಂದು ರೋಮಾ ವಿರುದ್ಧ ಅದು ಸೆಣಸಲಿದೆ.

ಮೌರಿಜಿಯೊ ಸರಿ ಕೋಚ್ ಆಗಿ ನೇಮಕಗೊಂಡ ನಂತರ ಯುವೆಂಟಸ್‌ಗೆ ಇದು ಮೊದಲ ಫುಟ್‌ಬಾಲ್ ಋತು. ಭಾನುವಾರದ ಪಂದ್ಯಕ್ಕೂ ಮೊದಲು ಐದರಲ್ಲಿ ಕೇವಲ ಒಂದು ಪಂದ್ಯವನ್ನು ಈ ತಂಡ ಗೆದ್ದುಕೊಂಡಿತ್ತು. ಆದ್ದರಿಂದ ಪ್ರಶಸ್ತಿ ಗೆಲ್ಲುವುದು ಅನುಮಾನವಾಗಿತ್ತು. ಸಾರಿ ಅವರಿಗೆ ಇಟಾಲಿಯನ್ ಲೀಗ್‌ಗಳಲ್ಲಿ ಇದು ಮೊದಲ ಅತಿದೊಡ್ಡ ಯಶಸ್ಸು.

ಇಬ್ಬರು ಆಟಗಾರರಿಗೆ ಗಾಯ

ಯುವೆಂಟಸ್‌ನ ಇಬ್ಬರು ಆಟಗಾರರು ಮೊದಲಾರ್ಧದಲ್ಲಿ ಗಾಯಗೊಂಡು ಹೊರಗೆ ಹೋದರು. ಡಿಫೆಂಡರ್ ಡ್ಯಾನಿಲೊ ಅವರು ಗಾಸ್ಟನ್ ರೆಮ್ರೀಜ್‌ಗೆ ಡಿಚ್ಚಿ ಹೊಡೆದು ಗಾಯಗೊಂಡರೆ ಪೌಲೊ ದೈಬಾಲ ಎಡಗಾಲಿನ ಮಾಂಸಖಂಡದ ನೋವಿನಿಂದಾಗಿ ಅಂಗಣ ತೊರೆದರು.

ಮೊದಲಾರ್ಧದಲ್ಲಿ ಮುನ್ನಡೆ ಗಳಿಸಲು ಸಂಪೋರಿಯಾಗೆ ಉತ್ತಮ ಅವಕಾಶ ಲಭಿಸಿತ್ತು. ಫ್ಯಾಬಿಯೊ ಕ್ವಾಂಗ್ರಿಲಾಗೆ ಸುಲಭವಾಗಿ ಚೆಂಡಿನ ಮೇಲೆ ಹಿಡಿತ ಸಾಧಿಸಲು ಅವಕಾಶ ಲಭಿಸಿತ್ತು. ಆದರೆ ಅವರು ಎಡಗಾಲಿನಿಂದ ಒದ್ದ ಚೆಂಡು ನಿಧಾನಕ್ಕೆ ಗೋಲುಪೆಟ್ಟಿಗೆಯತ್ತ ಸಾಗಿತು. ಆದ್ದರಿಂದ ಗೋಲ್‌ಕೀಪರ್ ಒಜಿ ಸೆನಿ ಅವರಿಗೆ ಅದನ್ನು ತಡೆಯಲು ಕಷ್ಟವಾಗಲಿಲ್ಲ. ದ್ವಿತೀಯಾರ್ಧದಲ್ಲೂ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಆ ತಂಡಕ್ಕೆ ಸಾಧ್ಯವಾಗಲಿಲ್ಲ.

ಆದರೆ ಯುವೆಂಟಸ್‌ ಆಕ್ರಮಣಕಾರಿ ಆಟದ ಮೂಲಕ ಎದುರಾಳಿಗಳನ್ನು ಕಂಗೆಡಿಸಿತು. ಫ್ರೀ ಕಿಕ್‌ನಲ್ಲಿ ಮಿರಾಲೆಮ್ ಪಾನಕ್ ಚೆಂಡನ್ನು ರೊನಾಲ್ಡೊ ಬಳಿಗೆ ತಳ್ಳಿದರು. ರೊನಾಲ್ಡೊ ತಡ ಮಾಡದೆ ಅದನ್ನು ಗುರಿ ಮುಟ್ಟಿಸಿದರು. ಎರಡನೇ ಗೋಲಿಗೂ ರೊನಾಲ್ಡೊ ಕಾರಣರಾದರು. ಅವರು ಒದ್ದ ಚೆಂಡನ್ನು ಹಿಡಿತಕ್ಕೆ ಪಡೆಯಲು ಗೋಲ್‌ಕೀಪರ್ ಎಮಿಲ್ ಆಡೆರೊ ವಿಫಲರಾದರು. ಡ್ಯಾನಿಲೊ ಬದಲಿಗೆ ಆಡಲು ಇಳಿದಿದ್ದ ಬರ್ನಾರ್ಡೆಶಿ ಅವರು ರೀಬೌಂಡ್ ಆದ ಚೆಂಡನ್ನು ಸುಲಭವಾಗಿ ಗುರಿ ಸೇರಿಸಿದರು.

ಲೀಗ್‌ನ ಉದ್ದಕ್ಕೂ ಯುವೆಂಟಸ್‌ನ ಯಶಸ್ಸಿಗೆ ರೊನಾಲ್ಡೊ ಕಾಣಿಕೆ ನೀಡುತ್ತ ಬಂದಿದ್ದಾರೆ. ಕೊರೊನಾ ಕಾಟಕ್ಕೂ ಮೊದಲು ಸತತ 11 ಪಂದ್ಯಗಳಲ್ಲಿ ಗೋಲುಗಳನ್ನು ಗಳಿಸಿದ್ದ ರೊನಾಲ್ಡೊ ಪಾರಮ್ಯ ಲೀಗ್ ಪುನರಾರಂಭಗೊಂಡ ನಂತರವೂ ಮುಂದುವರಿಯಿತು. ಯುವೆಂಟಸ್ ಪರವಾಗಿ ಒಂದೇ ಋತುವಿನಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಫೆಲಿಸ್ ಬೊರೆಲ್ ದಾಖಲೆ ಮೀರಿ ನಿಲ್ಲಲು ರೊನಾಲ್ಡೊಗೆ ಇನ್ನು ಒಂದು ಗೋಲು ಬೇಕು. ಫೆಲಿಸ್ 1933–34ರಲ್ಲಿ ದಾಖಲೆ ನಿರ್ಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT