ಕ್ರೊವೇಷ್ಯಾ ಆಟಕ್ಕೆ ಬೆದರಿದ ರಷ್ಯಾ

7

ಕ್ರೊವೇಷ್ಯಾ ಆಟಕ್ಕೆ ಬೆದರಿದ ರಷ್ಯಾ

Published:
Updated:

ಮಾಸ್ಕೊ: ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಆತಿಥೇಯ ರಷ್ಯಾ ತಂಡದ ಕನಸು ಶನಿವಾರ ಭಗ್ನಗೊಂಡಿತು. ಗುಂಪು ಹಂತ ಮತ್ತು ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ತಂಡಗಳಿಗೆ ಆಘಾತ ನೀಡಿ ಗಮನ ಸೆಳೆದಿದ್ದ ಈಗರ್‌ ಅಕಿನ್‌ಫೀವ್ ಬಳಗಕ್ಕೆ ಕ್ರೊವೇಷ್ಯಾ ಬಳಗವು ಆಘಾತ ನೀಡಿತು.

ಫಿಶ್ತ್‌ ಒಲಿಂಪಿಕ್‌ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯ ಪೆನಾಲ್ಟಿ ಶೂಟೌಟ್‌ನಲ್ಲಿ  ರಷ್ಯಾ ತಂಡವು   3–4 ಗೋಲುಗಳಿಂದ ಕ್ರೊವೇಷ್ಯಾಕ್ಕೆ ತಲೆಬಾಗಿತು.

ಎರಡು ಗಂಟೆಗಳ ಆಟದಲ್ಲಿ (90+30 ನಿಮಿಷ) ಉಭಯ ತಂಡಗಳು 2–2 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಪೆನಾಲ್ಟಿ ಶೂಟೌಟ್‌ನಲ್ಲಿ ಕ್ರೊವೇಷ್ಯಾ ಮೋಡಿ ಮಾಡಿತು. ಈ ತಂಡದ ನಾಲ್ಕು ಮಂದಿ ಚೆಂಡನ್ನು ಗುರಿ ಮುಟ್ಟಿಸಿ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದರು. ಡ್ಯಾನಿಜೆಲ್‌ ಶುಭಾಸಿಕ್‌ ಅವರ ಅಮೋಘ ಗೋಲ್‌ಕೀಪಿಂಗ್‌ ಕೂಡಾ ಅಭಿಮಾನಿಗಳ ಮನಗೆದ್ದಿತು. ರಷ್ಯಾದ ಮರಿಯೊ ಫರ್ನಾಂಡೀಸ್‌ ಮತ್ತು ಫ್ಯೊಡೊರ್‌ ಸ್ಮೊಲೊವ್‌ ಒದ್ದ ಚೆಂಡನ್ನು ಅವರು ಅಮೋಘ ರೀತಿಯಲ್ಲಿ ತಡೆದು ಕ್ರೊವೇಷ್ಯಾ ಆಟಗಾರರು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.  ತವರಿನ ತಂಡದ ಗೆಲುವು ಕಣ್ತುಂಬಿಕೊಳ್ಳಲು ಕ್ರೀಡಾಂಗಣಕ್ಕೆ ಬಂದಿದ್ದ ರಷ್ಯಾದ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದರು.

ಇದರೊಂದಿಗೆ ಲೂಕಾ ಮಾಡ್ರಿಕ್‌ ಸಾರಥ್ಯದ ಕ್ರೊವೇಷ್ಯಾ ತಂಡ ಈ ಬಾರಿ ಪೆನಾಲ್ಟಿ ಶೂಟೌಟ್‌ನಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದ ಹಿರಿಮೆ ತನ್ನದಾಗಿಸಿಕೊಂಡಿತು. ಡೆನ್ಮಾರ್ಕ್‌ ಎದುರಿನ ಪ್ರೀ ಕ್ವಾರ್ಟರ್‌ ಹಣಾಹಣಿಯಲ್ಲೂ ಶೂಟೌಟ್‌ನಲ್ಲಿ ಗೆದ್ದಿತ್ತು. ಲೂಕಾ ಪಡೆ ವಿಶ್ವಕಪ್‌ನಲ್ಲಿ ಎರಡನೇ ಬಾರಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟ ಸಾಧನೆ ಮಾಡಿತು. 1998ರಲ್ಲಿ ಮೊದಲ ಸಲ ವಿಶ್ವಕಪ್‌ ಆಡಿದ್ದ ತಂಡ ಚೊಚ್ಚಲ ಪ್ರಯತ್ನದಲ್ಲೇ ಮೂರನೇ ಸ್ಥಾನ ಗಳಿಸಿತ್ತು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 70ನೇ ಸ್ಥಾನದಲ್ಲಿರುವ ರಷ್ಯಾ ಈ ಬಾರಿ ಗುಂಪು ಹಂತದಲ್ಲೇ ನಿರ್ಗಮಿಸಲಿದೆ ಎಂದು ಬಹುತೇಕರು ಅಂದಾಜಿಸಿದ್ದರು. ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಮೂಲಕ ಅಕಿನ್‌ಫೀವ್‌ ಬಳಗ ಪುಟ್‌ಬಾಲ್‌ ಪಂಡಿತರ ಈ ನಿರೀಕ್ಷೆಯನ್ನು ಹುಸಿಗೊಳಿಸಿತ್ತು. 16ರ ಘಟ್ಟದಲ್ಲಿ ಸ್ಪೇನ್‌ ವಿರುದ್ಧದ ಗೆಲುವಿನ ನೆನಪಿನೊಂದಿಗೆ ಆತಿಥೇಯರು ಈ ಬಾರಿಯ ಹೋರಾಟ ಮುಗಿಸಿದರು.

ಪ್ರಮುಖ ಅಂಕಿ ಅಂಶ

* ವಿಶ್ವಕಪ್‌ನಲ್ಲಿ ಎರಡನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದ ಹಿರಿಮೆ ತನ್ನದಾಗಿಸಿಕೊಂಡ ಕ್ರೊವೇಷ್ಯಾ.

* ಕ್ರೊವೇಷ್ಯಾ ತಂಡ ಈ ಬಾರಿಯ ಟೂರ್ನಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದ ಎರಡನೇ ಪಂದ್ಯ ಇದಾಗಿದೆ. ಈ ತಂಡದ ಗೋಲ್‌ಕೀಪರ್‌ ಡ್ಯಾನಿಜೆಲ್‌ ಸುಭಾಶಿಕ್‌ ಶೂಟೌಟ್‌ನಲ್ಲಿ ಎದುರಾಳಿ ತಂಡಗಳ ನಾಲ್ಕು ಪ್ರಯತ್ನಗಳನ್ನು ವಿಫಲಗೊಳಿಸಿ ಕ್ರೊವೇಷ್ಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ.

* ವಿಶ್ವಕಪ್‌ ಟೂರ್ನಿಯ ಪೆನಾಲ್ಟಿ ಶೂಟೌಟ್‌ನಲ್ಲಿ ಎದುರಾಳಿಗಳ ನಾಲ್ಕು ಪ್ರಯತ್ನಗಳನ್ನು ವಿಫಲಗೊಳಿಸಿದ ಮೂರನೇ ಗೋಲ್‌ಕೀಪರ್‌ ಎಂಬ ಹಿರಿಮೆ ಸುಭಾಶಿಕ್‌ ಅವರದ್ದಾಗಿದೆ. ಅರ್ಜೆಂಟೀನಾದ ಸರ್ಜಿಯೊ ಗೊಯಕೊಚಿಯಾ ಮತ್ತು ಪಶ್ಚಿಮ ಜರ್ಮನಿಯ ಹೆರಾಲ್ಡ್‌ ಶುಮಾಕರ್‌ ಅವರು ಮೊದಲು ಈ ಸಾಧನೆ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !