ಸ್ಯಾಫ್‌ ಕಪ್‌ ಫುಟ್‌ಬಾಲ್ ಟೂರ್ನಿ: ಭಾರತಕ್ಕೆ ಮಾಲ್ಡಿವ್ಸ್ ಸವಾಲು

7
ಬಂಗಬಂಧು ಅಂಗಣದಲ್ಲಿ ಅಂತಿಮ ಹಣಾಹಣಿ

ಸ್ಯಾಫ್‌ ಕಪ್‌ ಫುಟ್‌ಬಾಲ್ ಟೂರ್ನಿ: ಭಾರತಕ್ಕೆ ಮಾಲ್ಡಿವ್ಸ್ ಸವಾಲು

Published:
Updated:

ಢಾಕಾ: ಅಜೇಯವಾಗಿ ಫೈನಲ್‌ಗೆ ಲಗ್ಗೆ ಇರಿಸಿರುವ ಭಾರತ ತಂಡ ಸ್ಯಾಫ್ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ಪ್ರಶಸ್ತಿಗಾಗಿ ಮಾಲ್ಡಿವ್ಸ್ ಎದುರು ಸೆಣಸಲಿದೆ. ಪಂದ್ಯ ಇಲ್ಲಿನ ಬಂಗಬಂಧು ಕ್ರೀಡಾಂಗಣದಲ್ಲಿ ನಡೆಯಲಿದೆ.

ಗುಂಪು ಹಂತದಲ್ಲಿ ಶ್ರೀಲಂಕಾ ಮತ್ತು ಮಾಲ್ಡಿವ್ಸ್‌ ತಂಡವನ್ನು ಕ್ರಮವಾಗಿ 2–0 ಗೋಲುಗಳಿಂದ ಮಣಿಸಿದ್ದ ಭಾರತ ಸೆಮಿಫೈನಲ್‌ನಲ್ಲಿ 3–1ರಿಂದ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಸುತ್ತಿನ ಹಣಾಹಣಿಗೆ ಸಜ್ಜಾಗಿದೆ. ಒಟ್ಟು 12 ಟೂರ್ನಿಗಳಲ್ಲಿ ಏಳು ಬಾರಿ ಪ್ರಶಸ್ತಿ ಗೆದ್ದಿರುವ ಭಾರತ ಶನಿವಾರವೂ ಗೆದ್ದರೆ ಹ್ಯಾಟ್ರಿಕ್ ಸಾಧನೆ ಮಾಡಿದಂತಾಗುತ್ತದೆ.

ಕಳೆದ ಮೂರು ಬಾರಿ ಸೆಮಿಫೈನಲ್‌ನಲ್ಲಿ ಸೋತಿದ್ದ ಮಾಲ್ಡಿವ್ಸ್‌ ಈ ಬಾರಿ ಪ್ರಶಸ್ತಿ ಗೆಲ್ಲಲು ಶತಾಯಗತಾಯ ಪ್ರಯತ್ನಿಸಲಿದೆ. ಆದರೆ 11 ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿರುವ ಭಾರತವನ್ನು ಮಣಿಸುವುದು ಅಷ್ಟು ಸುಲಭವಲ್ಲ.

ಬಂಗಬಂಧು ಕ್ರೀಡಾಂಗಣದಲ್ಲಿ 2009ರಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲೂ ಭಾರತ ಮತ್ತು ಮಾಲ್ಡಿವ್ಸ್ ತಂಡಗಳು ಮುಖಾಮುಖಿಯಾಗಿದ್ದವು. ನಿಗದಿತ ಅವಧಿಯಲ್ಲಿ ಮತ್ತು ಹೆಚ್ಚುವರಿ ಅವಧಿಯಲ್ಲಿ ಉಭಯ ತಂಡಗಳಿಗೆ ಗೋಲು ಗಳಿಸಲು ಆಗಲಿಲ್ಲ. ಪೆನಾಲ್ಟಿ ಶೂಔಟ್‌ನಲ್ಲಿ ಭಾರತ ಗೆದ್ದಿತ್ತು.

‘ಗುಂಪು ಹಂತದ ಪಂದ್ಯದಲ್ಲಿ ಮಾಲ್ಡಿವ್ಸ್ ತಂಡವನ್ನು ಮಣಿಸಿದ್ದೇವೆ. ಹಾಗೆಂದು ಶನಿವಾರ ಆ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಸೆಮಿಫೈನಲ್‌ನಲ್ಲಿ ನೇಪಾಳವನ್ನು 3–0 ಗೋಲುಗಳಿಂದ ಮಣಿಸಿದ್ದ ಆ ತಂಡ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದೆ’ ಎಂದು ಭಾರತ ತಂಡದ ಕೋಚ್‌ ಸ್ಟೀಫನ್ ಕಾನ್‌ಸ್ಟಂಟೈನ್‌ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !