ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

1990ರ ಪುಟ್‌ಬಾಲ್‌ ವಿಶ್ವಕಪ್‌ ತಾರೆ ಷಿಲಾಚಿ ಇನ್ನಿಲ್ಲ

Published : 18 ಸೆಪ್ಟೆಂಬರ್ 2024, 13:06 IST
Last Updated : 18 ಸೆಪ್ಟೆಂಬರ್ 2024, 13:06 IST
ಫಾಲೋ ಮಾಡಿ
Comments

ರೋಮ್‌: ಇಟಲಿಯಲ್ಲಿ ನಡೆದಿದ್ದ 1990ರ ಪುಟ್‌ಬಾಲ್‌ ವಿಶ್ವಕಪ್‌ನಲ್ಲಿ ಅತ್ಯಧಿಕ ಗೋಲುಗಳನ್ನು ಗಳಿಸಿದ ಹಿರಿಮೆಗೆ ಭಾಜರಾಗಿದ್ದ ತವರಿನ ಆಟಗಾರ ಸಾಲ್ವಟೋರೆ ‘ಟೊಟೊ’ ಷಿಲಾಚಿ ಅವರು ಕರುಳಿನ ಕ್ಯಾನ್ಸರ್‌ನಿಂದ ಬುಧವಾರ ನಿಧನರಾದರು. ಅವರಿಗೆ 59 ವರ್ಷವಾಗಿತ್ತು.

ಪಾಲೆರ್ಮೊದ ಆಸ್ಪತ್ರೆಯಲ್ಲಿ ಅವರು 11 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

‘ಇಟಾಲಿಯಾ 90’ ವಿಶ್ವಕಪ್‌ನಲ್ಲಿ ಅವರು ಆರು ಗೋಲುಗಳನ್ನು ಗಳಿಸಿದ್ದರು. ಆಸ್ಟ್ರಿಯಾ ಎದುರಿನ ಮೊದಲ ಪಂದ್ಯದಲ್ಲಿ ಸಬ್‌ಸ್ಟಿಟ್ಯೂಟ್ ಆಗಿ ಆಡಿದ ಅವರು ಆ ಪಂದ್ಯದ ಏಕೈಕ ಗೋಲನ್ನು ಗಳಿಸಿದ್ದರು. ನಂತರ ಅವರೇ ಆ ವಿಶ್ವಕಪ್‌ನ ಅತ್ಯಧಿಕ ಸ್ಕೋರರ್‌ ಎನಿಸಿ ‘ಗೋಲ್ಡನ್‌ ಬೂಟ್‌’ ಪುರಸ್ಕಾರಕ್ಕೆ ಪಾತ್ರರಾದರು.

ಷಿಲಾಚಿ ಅವರು 1990ರ ವಿಶ್ವಕಪ್‌ನ ‘ಶ್ರೇಷ್ಠ ಆಟಗಾರ’ ಎನಿಸಿ ‘ಗೋಲ್ಡನ್‌ ಬಾಲ್‌’ ಪುರಸ್ಕಾರಕ್ಕೂ ಪಾತ್ರರಾಗಿದ್ದರು. ಆ ವೇಳೆ ಜರ್ಮನಿಯ ಲೋಥರ್‌ ಮಥಾಯಸ್, ಅರ್ಜೆಂಟೀನಾದ ಡೀಗೊ ಮರಡೋನ ಅವರಂಥ ಘಟಾನುಘಟಿ ಆಟಗಾರರನ್ನು ಹಿಂದೆಹಾಕಿ ಈ ಗೌರವ ಪಡೆದಿದ್ದರು.

‌ಷಿಲಾಚಿ ಅವರು ವೃತ್ತಿ ಜೀವನದ ವೇಳೆ ಮೆಸ್ಸಿನಾ, ಯುವೆಂಟಸ್‌, ಇಂಟರ್‌ ಮಿಲಾನ್ ಮತ್ತು ಜಪಾನ್‌ನ ಜುಬಿಲೊ ಇವಾಟ ತಂಡಗಳಿಗೆ ಆಡಿದ್ದರು. 16 ಪಂದ್ಯಗಳಲ್ಲಿ ಅವರು ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ್ದಾರೆ.

‘ತಡೆಯಲಾಗದ ಸಂಭ್ರಮದ ವೇಳೆ ಅವರ ಮುಖದಲ್ಲಿ ಲಾಸ್ಯವಾಡುತ್ತಿದ್ದ ಖುಷಿ– ಇವೆಲ್ಲವೂ ಇಟಲಿ ಫುಟ್‌ಬಾಲ್ ಚರಿತ್ರೆಯ ಭಾಗವಾಗಿರಲಿದೆ’ ಎಂದು ಇಟಾಲಿಯನ್ ಫುಟ್‌ಬಾಲ್‌ ಫೆಡರೇಷನ್ ಅಧ್ಯಕ್ಷ ಗೇಬ್ರಿಯಲ್ ಗ್ರವಿನಾ ತಿಳಿಸಿದ್ದಾರೆ.

ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಕೂಡ ಕಂಬನಿ ಮಿಡಿದು ‘ಎಕ್ಸ್‌’ನಲ್ಲಿ ಪೋಸ್ಟ್ ಹಾಕಿದ್ದಾರೆ.

1990ರ ವಿಶ್ವಕಪ್‌ ಫೈನಲ್‌ನಲ್ಲಿ ಅರ್ಜೆಂಟೀನಾವನ್ನು ಮಣಿಸಿದ ಜರ್ಮನಿ ಸಾಮ್ರಾಟನಾಗಿ ಮೆರೆದಿತ್ತು. ಆದರೆ ಇಟಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಶೂಟೌಟ್‌ನಲ್ಲಿ ಸೋಲಿಸಿತ್ತು. ಷಿಲಾಚಿ ಅವರ ಪೆನಾಲ್ಟಿ ಕಿಕ್‌ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

‘ನನ್ನ ಆತ್ಮೀಯ ಗೆಳೆಯನಿಗೆ ವಿದಾಯ’ ಎಂದು ಅಂದಿನ (ಮೂರನೇ ಸ್ಥಾನದ) ಪಂದ್ಯದಲ್ಲಿ ಇಟಲಿಯ ಮೊದಲ ಗೋಲು ಗಳಿಸಿದ ರಾಬರ್ಟೊ ಬ್ಯಾಜಿಯೊ ಇನ್‌ಸ್ಟಾದಲ್ಲಿ ಬರೆದಿದ್ದಾರೆ.

1999ರ ವಿಶ್ವಕಪ್‌ಗೆ ಸ್ವಲ್ಪ ಮೊದಲು ಯುಇಎಫ್‌ಎ ಕಪ್‌ ಮತ್ತು ಇಟಾಲಿಯನ್‌ ಕಪ್‌ ಕೂಟಗಳಲ್ಲಿ ಅವರು 21 ಗೋಲುಗಳನ್ನು ಗಳಿಸಿದ್ದು ಅವರಿಗೆ ಹೆಸರು ತಂದುಕೊಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT