ಔರಾದ್: ತಾಲ್ಲೂಕಿನ ಜೋಜನಾ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಜನಪರ ಉತ್ಸವವನ್ನು ಶಾಸಕ ಪ್ರಭು ಚವಾಣ್ ಭಾನುವಾರ ಉದ್ಘಾಟಿಸಿದರು.
‘ಇದು ಕಲಾವಿದರ ದೊಡ್ಡ ಸಮ್ಮೇಳನ. ತಾಲ್ಲೂಕಿನಲ್ಲಿ ಇಂತಹ ಸಮ್ಮೇಳನ ನಡೆಯುತ್ತಿರುವುದು ಸಂತಸದ ವಿಚಾರ. ಭಾರತೀಯ ಕಲಾ ಪರಂಪರೆ ಶ್ರೀಮಂತಿಕೆಯಿಂದ ಕೂಡಿದೆ. ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದು ಅವರು ಹೇಳಿದರು.
‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾಲ್ಲೂಕಿನ ಕಲಾವಿದರನ್ನು ಕಡೆಗಣಿಸುತ್ತಿದೆ. ಮಾಸಾಶನ ಮಂಜೂರಿಗೆ ಹಣ ಪಡೆಯಲಾಗುತ್ತಿದೆ ಎಂಬ ದೂರುಗಳಿವೆ. ಮಾಸಾಶನ ನಿಯಮ ಸರಳೀಕರಣ ಮಾಡಿ ಗ್ರಾಮೀಣ ಪ್ರದೇಶದ ಅರ್ಹ ಕಲಾವಿದರನ್ನು ಗುರುತಿಸಬೇಕು’ ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಅನಿಲ ಬಿರಾದಾರ ಮಾತನಾಡಿ, ‘ಇಂತಹ ದೊಡ್ಡ ಕಾರ್ಯಕ್ರಮ ಮಾಡುವ ಮುನ್ನ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕೆಲವು ಇಲಾಖೆ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ‘ ಎಂದು ಟೀಕಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಗನ್ನಾಥ ಮೂಲಗೆ, ಜಾನಪದ ಪರಿಷತ್ ಅಧ್ಯಕ್ಷ ಸಂಜುಕುಮಾರ ಜುಮ್ಮಾ, ಉಪನ್ಯಾಸಕ ಗೌತಮ ಸಂಗನೂರ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಧೊಂಡುಬಾಯಿ, ಸತ್ತಾರಮಿಯ್ಯಾ, ಚಂದ್ರಕಾಂತ ಕೌಡಗಾಂವ್, ಜೋಜನಾ ಗ್ರಾ.ಪಂ. ಅಧ್ಯಕ್ಷ ಘಾಳರೆಡ್ಡಿ, ಸಂತಪುರ ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ, ಪಿಡಿಒ ಸಂತೋಷ ಪಾಟೀಲ, ಶಿವಾನಂದ ಔರಾದೆ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಸ್ವಾಗತಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಜನಪದ ಕಲಾ ತಂಡಗಳ ಮೆರವಣಿಗೆ ನಡೆಯಿತು. ಚಿತ್ರದುರ್ಗ ಗಾರುಡಿ ಗೊಂಬೆ ತಂಡ, ದಾವಣಗೆರೆ ನಗಾರಿ ನೃತ್ಯ ತಂಡ, ಬೀದರ್ ತಾಲ್ಲೂಕಿನ ಯೇಸುದಾಸ ತಂಡದ ಮೋಹರಂ ಕುಣಿತ, ಪೈತ್ರಿ ಕುಣಿತ, ಲಂಬಾಣಿ ನೃತ್ಯ ಮೆರವಣಿಗೆಗೆ ಕಳೆ ಕಟ್ಟಿತು.
ಬಹುತೇಕರ ಗೈರು: ಜನಪರ ಉತ್ಸವಕ್ಕೆ ಬಹುತೇಕ ಆಮಂತ್ರಿತರು ಗೈರಾಗಿದ್ದರು. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ಜಿಲ್ಲಾಧಿಕಾರಿ ಭಾಗವಹಿಸಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.