ಶನಿವಾರ, ಮೇ 30, 2020
27 °C

ಶಹಬಾಸ್ ಹಬಾಸ್

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಐಎಸ್ಎಲ್ ಫುಟ್ ಬಾಲ್ ಟೂರ್ನಿಯ ಆರನೇ ಆವೃತ್ತಿ ಮುಕ್ತಾಯಗೊಂಡು ಕೆಲವು ದಿನಗಳು ಕಳೆದಿವೆ. ಈ ಬಾರಿಯ ಚಾಂಪಿಯನ್ ಎಟಿಕೆ ತಂಡದ ಯಶಸ್ಸಿನ ಕುರಿತು ಇನ್ನೂ ಕುತೂಹಲಕಾರಿ ಚರ್ಚೆಗಳು ನಡೆಯುತ್ತಿವೆ. ತಂಡವನ್ನು ಕೋಚ್ ಆ್ಯಂಟೊನಿಯೊ ಹಬಾಸ್ ಯಶಸ್ಸಿನ ಗುಟ್ಟೇನು ಎಂಬುದು ಕೂಡ ಚರ್ಚೆಯ ಪ್ರಮುಖ ವಿಷಯ.

ಸತತ ಎರಡು ವರ್ಷಗಳ ನಿರಾಸೆಯ ನಂತರ ಕೋಲ್ಕತ್ತದ ಎಟಿಕೆ ತಂಡ ಈ ಬಾರಿ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ತಂಡದ ಈ ಸಾಧನೆಯಲ್ಲಿ ಕೋಚ್ ಆ್ಯಂಟೊನಿಯೊ ಲೋಪೆಜ್ ಹಬಾಸ್ ಅವರ ಪಾತ್ರವೇ ಮುಖ್ಯ. ಫೈನಲ್ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ತಂಡವನ್ನು ಮಣಿಸಿದ ನಂತರ ಆಟಗಾರರು ಹಬಾಸ್ ಅವರನ್ನು ಎತ್ತಿ ಗಾಳಿಯಲ್ಲಿ ತೂರಿ ಸಂಭ್ರಮಿಸಿದ ರೀತಿಯೇ ಇದನ್ನು ಸೂಚಿಸುತ್ತಿತ್ತು. 

ಮೂರು ಬಾರಿ ಚಾಂಪಿಯನ್ ಆಗಿರುವ ಎಟಿಕೆ ಆ ಪೈಕಿ ಎರಡು ಬಾರಿ ಹಬಾಸ್ ನೇತೃತ್ವದಲ್ಲೇ ಈ ಸಾಧನೆ ಮಾಡಿದೆ. 2014ರಲ್ಲಿ ಮೊದಲ ಆವೃತ್ತಿಯಲ್ಲಿ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದ ಹಬಾಸ್ ಅವರನ್ನು ಈ ಬಾರಿ ಮತ್ತೆ ತಂಡ ಕರೆಸಿಕೊಂಡಿತ್ತು. ಅದಕ್ಕೆ ಫಲವೂ ಸಿಕ್ಕಿತು.

ಮೊದಲ ಆವೃತ್ತಿಯ ಯಶಸ್ಸಿನ ನಂತರ ಎರಡನೇ ಆವೃತ್ತಿಯಲ್ಲೂ ಎಟಿಕೆ ಸೆಮಿಫೈನಲ್ ವರೆಗೆ ಸಾಗಿತ್ತು. ನಂತರ ತಂಡದ ಸಾಧನೆ ಹೇಳಿಕೊಳ್ಳುವಂತಿರಲಿಲ್ಲ. ಆದರೆ ಈ ಬಾರಿ ಆರಂಭದಿಂದಲೇ ಉತ್ತಮ ಯೋಜನೆ ಹಾಕಿಕೊಂಡಿತ್ತು. ರಾಯ್ ಕೃಷ್ಣ, ಡೇವಿಡ್ ವಿಲಿಯಮ್ಸ್ ಮುಂತಾದ ಆಟಗಾರರು ಈ ಯೋಜನೆಗೆ ಬಲ ತುಂಬಿದರು. ಸಮರ್ಥ ಆಟಗಾರರನ್ನು ಸರಿಯಾಗಿ ಬಳಸಿಕೊಳ್ಳುವ ಕಲೆ ಗೊತ್ತಿರುವ ಹಬಾಸ್ ಮೂರು ಬಾರಿ ಚಾಂಪಿಯನ್ ಆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಎಟಿಕೆ ಪಾತ್ರವಾಗುವಂತೆ ಮಾಡಿದ್ದು ಮಾತ್ರವಲ್ಲ, ಎರಡು ಬಾರಿ ತಂಡಕ್ಕೆ ಪ್ರಶಸ್ತಿ ಗಳಿಸಿಕೊಟ್ಟ ಏಕೈಕ ಕೋಚ್ ಎಂಬ ಗರಿಯನ್ನು ತಮ್ಮ ಮುಡಿಗೆ ಏರಿಸಿಕೊಂಡರು.  

ಆಟಗಾರರ ಬಳಕೆ; ಚೆಂಡು ನಿಯಂತ್ರಣ  

ಸ್ಪೇನ್‌ನ 62 ವರ್ಷದ ಹಬಾಸ್ 24 ಮಂದಿಯ ತಂಡದ ಆಟಗಾರರನ್ನು ಬಳಸಿಕೊಂಡ ವಿಧಾನ ಪ್ರಶಂಸೆ ಗಳಿಸಿದೆ. ಒಂದೋ ಎರಡೋ ಪಂದ್ಯಗಳನ್ನು ಆಡಿದವರಿಗೆ ವಿಶ್ರಾಂತಿ ನೀಡಿ ಉಳಿದವರನ್ನು ಕಣಕ್ಕೆ ಇಳಿಸುವ ಮೂಲಕ ಆಟಗಾರರ ಉತ್ಸಾಹ ಮತ್ತು ಫಿಟ್‌ನೆಸ್ ಕಾಯ್ದುಕೊಳ್ಳಲು ಪ್ರಯತ್ನಿಸಿದ್ದಾರೆ. ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವಲ್ಲೂ ತಂಡವನ್ನು ಸಿದ್ಧಗೊಳಿಸಿದ ವಿಧಾನ ಅಮೋಘ. ಎಟಿಕೆ ಈ ಬಾರಿ ಶೇಕಡಾ 47ರಷ್ಟು ಅವಧಿ ಚೆಂಡನ್ನು ತನ್ನ ಬಳಿಸಿ ಇರಿಸಿಕೊಂಡಿತ್ತು. 

ಆಕ್ರಮಣದಷ್ಟೇ ರಕ್ಷಣಾತ್ಮಕ ಆಟಕ್ಕೂ ಹಬಾಸ್ ಒತ್ತು ನೀಡಿದ್ದಾರೆ. ಒಟ್ಟು 21 ಪಂದ್ಯಗಳಲ್ಲಿ ತಂಡ ಬಿಟ್ಟುಕೊಟ್ಟದ್ದು 19 ಗೋಲು ಮಾತ್ರ. ಪ್ರಬೀರ್ ದಾಸ್, ಮೈಕೆಲ್ ಸುಸೈರಾಜ್, ಜೇವಿಯರ್ ಹೆರ್ನಾಂಡಸ್, ಎಜು ಗಾರ್ಸಿಯಾ ಮತ್ತು ಮಿಖಾಯಲ್ ರೆಜಿನ್ ಈ ತಂತ್ರಕ್ಕೆ ಬಲ ತುಂಬಿದ್ದರು. 

ಆಕ್ರಮಣದ ಆರ್ಭಟ

ಸರಾಸರಿ 1.86 ಗೋಲುಗಳೊಂದಿಗೆ ಒಟ್ಟು 39 ಬಾರಿ ಚೆಂಡನ್ನು ಗುರಿ ಮುಟ್ಟಿಸಿರುವ ಎಟಿಕೆ ಆಕ್ರಮಣಕಾರಿ ಆಟದ ಮೂಲಕ ಎದುರಾಳಿಗಳನ್ನು ದಂಗುಬಡಿಸಿದೆ. ರಾಯ್ ಕೃಷ್ಣ (15 ಗೋಲು), ಡೇವಿಡ್ ವಿಲಿಯಮ್ಸ್ (ಏಳು ಗೋಲು) ಮತ್ತು ಎಜು ಗಾರ್ಸಿಯಾ (ಆರು ಗೋಲು) ಆಕ್ರಮಣ ವಿಭಾಗದಲ್ಲಿ ತಂಡದ ಪ್ರಬಲ ಶಕ್ತಿಯಾಗಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು