ಅರ್ಜೇಂಟೀನಾ ಹಾದಿ ದುರ್ಗಮ

7
ಕ್ರೊವೇಷ್ಯಾ ಎದುರಿನ ಪಂದ್ಯದಲ್ಲಿ 3–0 ಅಂತರದ ಸೋಲು; ಲಯೊನೆಲ್ ಮೆಸ್ಸಿ ಭವಿಷ್ಯ ಅತಂತ್ರ

ಅರ್ಜೇಂಟೀನಾ ಹಾದಿ ದುರ್ಗಮ

Published:
Updated:

ನಿಜ್ನಿ ನೊವ್‌ಗರೊಡ್‌: ಎರಡು ಬಾರಿಯ ಚಾಂಪಿಯನ್‌ ಮತ್ತು ಹಾಲಿ ರನ್ನರ್ ಅಪ್ ತಂಡ ಅರ್ಜೆಂಟೀನಾದ ವಿಶ್ವಕಪ್ ಹಾದಿಯ ಮೇಲೆ ಕರಿನೆರಳು ಬಿದ್ದಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಪ್ರಯಾಸದ ಡ್ರಾ ಸಾಧಿಸಿದ ಈ ತಂಡ ಗುರುವಾರದ ಪಂದ್ಯದಲ್ಲಿ ಸೋತ ಕಾರಣ ಮುಂದಿನ ಹಾದಿ ದುರ್ಗಮವಾಗಿದೆ.

ಇದೀಗ ಗುಂಪಿನ ಇತರ ಪಂದ್ಯಗಳ ಫಲಿತಾಂಶದ ಮೇಲೆ ತಂಡದ ಭವಿಷ್ಯ ಅವಲಂಬಿಸಿದೆ. ಇದೇ 26ರಂದು ನಡೆಯಲಿರುವ ನೈಜೀರಿಯಾ ಎದುರಿನ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಲೇಬೇಕಾದ ಒತ್ತಡವನ್ನೂ ತಂಡ ಮೆಟ್ಟಿ ನಿಲ್ಲಬೇಕಿದೆ.

ಗುರುವಾರ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ, ಕ್ರೊವೇಷ್ಯಾ ಎದುರು 0–3 ಗೋಲುಗಳ ಅಂತರದಿಂದ ಸೋತಿತು. ಗುಂಪು ಹಂತದ ಪಂದ್ಯವೊಂದರಲ್ಲಿ ಈ ತಂಡದ ಅತ್ಯಂತ ಹೀನಾಯ ಸೋಲು ಇದು. ಈ ಗೆಲುವಿನೊಂದಿಗೆ ಕ್ರೊವೇಷ್ಯಾ 16ರ ಘಟ್ಟ ಪ್ರವೇಶಿಸಿತು. ವಿಶ್ವಕಪ್‌ನಲ್ಲಿ ಕ್ರೊವೇಷ್ಯಾ ಪ್ರಿ ಕ್ವಾರ್ಟರ್‌ ಘಟ್ಟ ಪ್ರವೇಶಿಸಿದ್ದು ಇದು ಎರಡನೇ ಬಾರಿ.

ಐಸ್‌ಲ್ಯಾಂಡ್ ಎದುರಿನ ಮೊದಲ ಪಂದ್ಯದಲ್ಲಿ ಒಂದು ಗೋಲು ಕೂಡ ಗಳಿಸಲಾಗದ ನಾಯಕ ಲಯೊನೆಲ್ ಮೆಸ್ಸಿ ಕ್ರೊವೇಷ್ಯಾ ಎದುರು ಕೂಡ ಪರದಾಡಿದರು. ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಇಡೀ ತಂಡ ಮುಗ್ಗರಿಸಿತು.

ಮೊದಲಾರ್ಧದಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಆಗಲಿಲ್ಲ. ಆಂಟೆ ರೆಬಿಕ್ 53ನೇ ನಿಮಿಷದಲ್ಲಿ ಗಳಿಸಿಕೊಟ್ಟ ಗೋಲು ಕ್ರೊವೇಷ್ಯಾ ಪಾಳಯದಲ್ಲಿ ಭರವಸೆ ಮೂಡಿಸಿತು.

ಲೂಕಾ ಮಾಡ್ರಿಕ್‌ 80ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. ಇದರಿಂದ ಅರ್ಜೆಂಟೀನಾ ತೀವ್ರ ಒತ್ತಡಕ್ಕೆ ಒಳಗಾಯಿತು. ಆ ತಂಡದ ಗಾಯದ ಮೇಲೆ ಬರೆ ಎಳೆದಂತೆ, 90+1ನೇ ನಿಮಿಷದಲ್ಲಿ ಐವನ್‌ ರ‍್ಯಾಕಿಟಿಕ್‌ ಗೋಲು ಗಳಿಸಿದರು.

ಅಭಿಮಾನಿಗಳ ಆಕ್ರೋಶ: ತಂಡದ ಸೋಲಿನಿಂದ ಬೇಸರಗೊಂಡ ಅರ್ಜೆಂಟೀನಾ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಾಯ್ನಾಡಿನ ಬೀದಿಗಳಲ್ಲಿ ಬೆಂಕಿಯ ಜ್ವಾಲೆಗಳನ್ನು ಹಿಡಿದು ಧಿಕ್ಕಾರ ಕೂಗಿದರು. ನಿಜ್ನಿ ನೊವ್‌ಗರೊಡ್‌ ಕ್ರೀಡಾಂಗಣದಲ್ಲಿ ಹಾಜರಿದ್ದ ಹಿರಿಯ ಆಟಗಾರ ಡೀಗೊ ಮರಡೋನಾ ಕೂಡ ತಾಯ್ನಾಡಿನ ತಂಡದ ಸ್ಥಿತಿಗೆ ಮರುಗಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !