ಪವಾರ್ಡ್‌ ಮೋಡಿಗೆ ಟೂರ್ನಿಯ ಶ್ರೇಷ್ಠ ಗೋಲ್‌ ಪಟ್ಟ

7

ಪವಾರ್ಡ್‌ ಮೋಡಿಗೆ ಟೂರ್ನಿಯ ಶ್ರೇಷ್ಠ ಗೋಲ್‌ ಪಟ್ಟ

Published:
Updated:
Deccan Herald

ಬೆಂಗಳೂರು: ಫಿಫಾ ವಿಶ್ವಕಪ್‌ನ ಅರ್ಜೆಂಟೀನಾ ವಿರುದ್ಧದ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ನ ಬೆಂಜಮಿನ್‌ ಪವಾರ್ಡ್‌ ಅವರು ದಾಖಲಿಸಿದ್ದ ಅಮೋಘ ಗೋಲು ಈಗ ಟೂರ್ನಿಯ ಶ್ರೇಷ್ಠ ಗೋಲು ಎಂಬ ಹಿರಿಮೆಗೆ ಪಾತ್ರವಾಗಿದೆ ಎಂದು ಫಿಫಾ ಸಂಸ್ಥೆ ತಿಳಿಸಿದೆ. 

ಇತ್ತೀಚೆಗೆ ಮುಕ್ತಾಯಗೊಂಡ ಫಿಫಾ ವಿಶ್ವಕಪ್‌ನಲ್ಲಿ ಫ್ರಾನ್ಸ್‌ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ರಷ್ಯಾದಲ್ಲಿ ನಡೆದ ಈ ಬಾರಿಯ ಟೂರ್ನಿಯ 64 ಪಂದ್ಯಗಳಲ್ಲಿ ಒಟ್ಟು 169 ಗೋಲುಗಳು ದಾಖಲಾಗಿದ್ದವು. ಟೂರ್ನಿಯ ಶ್ರೇಷ್ಠ ಗೋಲುಗಳನ್ನು ಆಯ್ಕೆ ಮಾಡಲು ಫಿಫಾ ಆನ್‌ಲೈನ್‌ ವೋಟಿಂಗ್‌ಗೆ ಅವಕಾಶ ಕಲ್ಪಿಸಿತ್ತು. ಇದಕ್ಕಾಗಿ ಟೂರ್ನಿಯ 17 ಅತ್ಯುತ್ತಮ ಗೋಲುಗಳನ್ನು ಆಯ್ಕೆ ಮಾಡಲಾಗಿತ್ತು. ವಿಶ್ವದಾದ್ಯಂತ 30 ಲಕ್ಷಕ್ಕೂ ಹೆಚ್ಚು ಮಂದಿ ಶ್ರೇಷ್ಠ ಗೋಲು ಆಯ್ಕೆ ಮಾಡಲು ಮತ ಚಲಾಯಿಸಿದ್ದರು. ಇದರಲ್ಲಿ ಬೆಂಜಮಿನ್ ಪವಾರ್ಡ್‌ ಅವರು ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ಗಳಿಸಿದ್ದ ಗೋಲು ಹೆಚ್ಚು ಮತ ಪಡೆದಿದೆ.

ಹದಿನಾರರ ಘಟ್ಟದ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು 2–1ರಿಂದ ಮುನ್ನಡೆ ಗಳಿಸಿತ್ತು. ಅದೇ ವೇಳೆ ಫ್ರಾನ್ಸ್‌ನ ಲುಕಾ ಹರ್ನಾಂಡೆಜ್‌ ಅವರು ಪಾಸ್‌ ಮೂಲಕ ಸಿಕ್ಕ ಚೆಂಡನ್ನು ಅಂಗಳದ ಎಡ ಭಾಗಕ್ಕೆ ಒದ್ದರು. ಚೆಂಡು ತಮ್ಮ ಬಳಿ ಬರುತ್ತಿದ್ದುದನ್ನು ಗಮನಿಸಿದ ಬೆಂಜಮಿನ್‌ ಚುರುಕಾಗಿ ಓಡಿ ಅದನ್ನು ಗುರಿ ಸೇರಿಸಿದರು.

ದೂರದಿಂದ ಅವರು ಒದ್ದ ಚೆಂಡು ಗಾಳಿಯಲ್ಲಿ ತಿರುಗಿ ನೆಟ್‌ ಸೇರಿತ್ತು. ಗೋಲು ದಾಖಲಾಗಬಹುದು ಎಂಬ ಮುನ್ಸೂಚನೆಯು ಎದುರಾಳಿ ತಂಡಕ್ಕೆ ಇಲ್ಲದ ವೇಳೆ ಹಜಾರ್ಡ್‌ ಮೋಡಿ ಮಾಡಿ ತಮ್ಮ ತಂಡ ಸಮಬಲ ಸಾಧಿಸಲು ನೆರವಾಗಿದ್ದರು. ಅವರ ಜಾಣ್ಮೆ ಮತ್ತು ತಂತ್ರಗಾರಿಕೆಗೆ ಅರ್ಜೆಂಟೀನಾದ ಗೋಲ್‌ಕೀಪರ್‌ ಫ್ರಾಂಕೊ ಅರ್ಮಾನಿ ಅರೆಕ್ಷಣ ಅವಾಕ್ಕಾಗಿದ್ದರು. ಈ ಪಂದ್ಯದಲ್ಲಿ ಫ್ರಾನ್ಸ್‌ 4–3ರಿಂದ ಅರ್ಜೆಂಟೀನಾವನ್ನು ಮಣಿಸಿತ್ತು. 

‘ಶ್ರೇಷ್ಠ ಗೋಲು ನನ್ನಿಂದ ದಾಖಲಾಗಿದೆ ಎಂಬ ಜನರ ಅಭಿಪ್ರಾಯ ಸಂತಸ ತಂದಿದೆ’ ಎಂದು ಪವಾರ್ಡ್‌ ಟ್ವೀಟ್‌ ಮಾಡಿದ್ದಾರೆ. 

ಕೊಲಂಬಿಯಾದ ಉವಾನ್‌ ಫರ್ನಾಂಡೊ ಕ್ವಿಂಟೆರೊ ಅವರು ಜಪಾನ್‌ ವಿರುದ್ಧದ ಫ್ರೀ ಕಿಕ್‌ ಅವಕಾಶದಲ್ಲಿ ಹೊಡೆದ ಗೋಲು ಹೆಚ್ಚು ಮತಗಳನ್ನು ಪಡೆದ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಅರ್ಜೆಂಟೀನಾ ತಂಡದ ಎದುರಿನ ಪಂದ್ಯದಲ್ಲಿ ಕ್ರೊವೇಷ್ಯಾ ತಂಡದ ನಾಯಕ ಲೂಕಾ ಮಾಡ್ರಿಕ್‌ ದಾಖಲಿಸಿದ ಗೋಲು ಮೂರನೇ ಸ್ಥಾನ ಪಡೆದಿದೆ. 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !