ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಜಪಾನ್‌, ಮೆಕ್ಸಿಕೊಗೆ ಜಯ

ಹ್ಯಾಟ್ರಿಕ್ ಗೋಲು ಗಳಿಸಿದ ರಿಚಾರ್ಲಿಸನ್: ಬ್ರೆಜಿಲ್‌ಗೆ ಗೆಲುವು; ಫ್ರಾನ್ಸ್‌, ಜರ್ಮನಿಗೆ ನಿರಾಸೆ
Last Updated 22 ಜುಲೈ 2021, 16:03 IST
ಅಕ್ಷರ ಗಾತ್ರ

ಟೋಕಿಯೊ: ಆತಿಥೇಯ ಜಪಾನ್ ತಂಡ ಒಲಿಂಪಿಕ್ಸ್ ಫುಟ್‌ಬಾಲ್‌ನ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದೆ. ಗುರುವಾರ ನಡೆದ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಜಪಾನ್ 1–0 ಅಂತರದಲ್ಲಿ ಮಣಿಸಿತು.

ವಿಡಿಯೊ ಅನಲಿಸ್ಟ್ ಮತ್ತು ಇಬ್ಬರು ಆಟಗಾರರಾದ ಜೇಮ್ಸ್‌ ಮೊನ್ಯಾನೆ ಮತ್ತು ಕಮೊಹೆಲೊ ಮಲತ್ಸಿ ಅವರಲ್ಲಿ ಕೊರೊನಾ ಕಾಣಿಸಿಕೊಂಡಿದ್ದ ಕಾರಣ ದಕ್ಷಿಣ ಆಫ್ರಿಕಾಕ್ಕೆ ಕಠಿಣ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಹೀಗಾಗಿ ಅಭ್ಯಾಸದ ಎರಡು ಅವಧಿಗಳು ನಷ್ಟವಾಗಿದ್ದವು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕೋವಿಡ್ ಸೋಂಕಿಗೆ ಒಳಗಾದವರು ನಿರ್ದಿಷ್ಟ ಪಂದ್ಯ ಆರಂಭಕ್ಕೂ ಆರು ತಾಸು ಮೊದಲು ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ಬಂದರೆ ಮಾತ್ರ ಕಣಕ್ಕೆ ಇಳಿಯಲು ಅವಕಾಶವಿದೆ. ಬದಲಿ ಆರು ಆಟಗಾರರನ್ನು ಬಳಸಿಕೊಂಡು ದಕ್ಷಿಣ ಆಫ್ರಿಕಾ ತಂಡ ಪಂದ್ಯದಲ್ಲಿ ಆಡಿತ್ತು.

71ನೇ ನಿಮಿಷದಲ್ಲಿ ದಕ್ಷಿಣ ಆಫ್ರಿಕಾದ ರಕ್ಷಣಾ ವಿಭಾಗಕ್ಕೆ ಚಳ್ಳೆಹಣ್ಣು ತಿನ್ನಿಸಿ ತಕೆಫೂಸಾ ಕುಬೊ ಗೋಲು ಗಳಿಸಿದರು.

ಮೊದಲಾರ್ಧದಲ್ಲಿ ಗೋಲು ಗಳಿಸಲು ಜಪಾನ್‌ಗೆ ಸಾಕಷ್ಟು ಅವಕಾಶಗಳು ಸಿಕ್ಕಿದ್ದವು. ಆದರೆ ಕುಬೊ ಮತ್ತು ಕೊಜಿ ಮಿಯೋಶಿ ಅವರ ಪ್ರಯತ್ನಗಳಿಗೆ ಫಲ ಸಿಗಲಿಲ್ಲ. ಡೈಚಿ ಹಯಾಶಿ ಒದ್ದ ಚೆಂಡು ಬಲೆಯೊಳಗೆ ಸೇರಿತ್ತು. ಆದರೆ ಅಷ್ಟರಲ್ಲಿ ಲೈನ್‌ ಅಂಪೈರ್‌ ಆಫ್‌ಸೈಡ್ ಸಂಕೇತ ತೋರಿದ್ದರು.

ಮೆಕ್ಸಿಕೊಗೆ ಮಣಿದ ಫ್ರಾನ್ಸ್‌

ಮೆಕ್ಸಿಕೊ ಎದುರಿನ ಪಂದ್ಯದಲ್ಲಿ ಫ್ರಾನ್ಸ್‌ 1–4ರಿಂದ ಸೋಲನುಭವಿಸಿತು. ವೇಗಾ (47ನೇ ನಿಮಿಷ), ಕೊರ್ಡೊವಾ (55ನೇ ನಿ), ಆ್ಯಂಟುನಾ (80ನೇ ನಿ) ಮತ್ತು ಅಗ್ಯುರೆ (90ನೇ ನಿ) ಮೆಕ್ಸಿಕೊ ಪರವಾಗಿ ಗೋಲು ಗಳಿಸಿದರೆ 69ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಗಿಗ್ನಾಕ್ ಅವರು ಫ್ರಾನ್ಸ್‌ಗಾಗಿ ಏಕೈಕ ಗೋಲು ಗಳಿಸಿದರು.

ರಿಚಾರ್ಲಿಸನ್ (7, 22, 30ನೇ ನಿ) ಗಳಿಸಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಬ್ರೆಜಿಲ್ 4–2ರಲ್ಲಿ ಜರ್ಮನಿಯನ್ನು ಮಣಿಸಿತು. ಪೌಲಿನ್ಹೊ (90+5ನೇ ನಿ) ಬ್ರೆಜಿಲ್ ಪರ ನಾಲ್ಕನೇ ಗೋಲು ಗಳಿಸಿದರು. ಅಮಿರಿ (57ನೇ ನಿ) ಮತ್ತು ಅಚಿ (84ನೇ ನಿ) ಜರ್ಮನಿಯ ಸೋಲಿನ ಅಂತರ ಕಡಿಮೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT