ಈಗರ್ ಮಿಂಚು: ರಷ್ಯಾಗೆ ಜಯ

7
ಗೋಲು ಗಳಿಸಿದ ಆರ್ಟಿಮ್ ಡಿಜುಬಾ; ಪೆನಾಲ್ಟಿಯಲ್ಲಿ ನಿರಾಸೆ ಕಂಡ ಸ್ಪೇನ್

ಈಗರ್ ಮಿಂಚು: ರಷ್ಯಾಗೆ ಜಯ

Published:
Updated:
ರಷ್ಯಾದ ಗೋಲಕೀಪರ್ ಈಗರ್ ಅಕೀನ್‌ಫೀವ್    ಎಎಫ್‌ಪಿ ಚಿತ್ರ

ಮಾಸ್ಕೊ: ಭಾನುವಾರ ರಾತ್ರಿ ಸುರಿದ ಮಳೆಯ ನೀರಿನೊಂದಿಗೆ ರಷ್ಯಾ ತಂಡದ ಆಟಗಾರರ ಆನಂದ ಭಾಷ್ಪ ಮತ್ತು ಸ್ಪೇನ್ ಆಟಗಾರರ ನಿರಾಸೆಯ ಕಣ್ಣೀರು ಕೂಡ ಸೇರಿ ಕೊಂಡಿತು.

ಗೋಲ್‌ಕೀಪರ್ ಈಗರ್ ಅಕೀನ್‌ಫೀವ್ ಅವರ ಅಮೋಘ ಆಟದ ಬಲದಿಂದ ರಷ್ಯಾ ತಂಡವು ಪೆನಾಲ್ಟಿಯಲ್ಲಿ 4–3 ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸಿತು. ಇದರೊಂದಿಗೆ ಆತಿಥೇಯ ತಂಡವು ಎಂಟರ ಘಟ್ಟಕ್ಕೆ ಪ್ರವೇಶಿಸಿತು.

ರಷ್ಯಾದ ಸರ್ಗೈ ಇಗ್ನಾಶೆವಿಕ್ 12ನೇ ನಿಮಿಷದಲ್ಲಿ ನೀಡಿದ್ದ 'ಉಡುಗೊರೆ’ ಗೋಲು ಮತ್ತು  41ನೇ ನಿಮಿಷದಲ್ಲಿ  ಲಭಿಸಿದ್ದ ಪೆನಾಲ್ಟಿಯಲ್ಲಿ  ಆರ್ಟಿಮ್ ಡಿಜುಬಾ ಹೊಡೆದಿದ್ದ ಗೋಲಿನಿಂದ ಉಭಯ ತಂಡಗಳು 1–1ರ ಸಮ ಬಲ ಸಾಧಿಸಿದ್ದವು. ಹೆಚ್ಚುವರಿ ಅವಧಿ ಯಲ್ಲಿಯೂ ಎರಡೂ ತಂಡಗಳು ಗೋಲು ಗಳಿಸಲಿಲ್ಲ.

ಫಲಿತಾಂಶ ಹೊರಹೊಮ್ಮದ ಕಾರಣ ಎರಡೂ ತಂಡಗಳಿಗೆ  5–5 ಪೆನಾಲ್ಟಿ ಅವಕಾಶವನ್ನು ನೀಡಲಾಯಿತು. ಇದರಲ್ಲಿ ಈಗರ್ ಎರಡು ಗೋಲು ಗಳನ್ನು ತಡೆಯುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.

ಮೊದಲ ಅವಕಾಶದಲ್ಲಿ ಸ್ಪೇನ್‌ನ ಆ್ಯಂಡ್ರೆ ಐನೆಸ್ಟಾ ಗೋಲು ಹೊಡೆದು 1–0 ಮುನ್ನಡೆ ನೀಡಿದರು.

ನಂತರದ ಅವಕಾಶದಲ್ಲಿ ರಷ್ಯಾದ  ಫೆದೊ ಸ್ಮೋಲೊವ್ ಗೋಲು ಹೊಡೆದು 1–1ರ ಸಮಬಲ ಸಾಧಿಸಿದರು. ಸ್ಪೇನ್‌ನ ಗೆರಾಲ್ಡ್‌ ಪಿಕು 2–1ರ ಮುನ್ನಡೆ ಗಳಿಸಿಕೊಟ್ಟರು. ತಿರುಗೇಟು ನೀಡಿದ ಆತಿಥೇಯ ತಂಡದ ಸರ್ಗೈ ಇಗ್ನಾಶೆವಿಕ್ ಸಮಬಲಕ್ಕೆ ಕಾರಣರಾದರು.

ನಂತರದ ಅವಕಾಶದಲ್ಲಿ ರಷ್ಯಾದ ಗೋಲ್‌ಕೀಪರ್ ಈಗರ್ ಮಿಂಚಿದರು. ಸ್ಪೇನ್ ತಂಡದ ಕೋಕ್ ಅವರಿಗೆ ಮೂರನೇ ಗೋಲು ಹೊಡೆಯುವ ಅವಕಾಶ ಕೊಡಲಿಲ್ಲ.

ನಂತರ ರಷ್ಯಾದ ಅಲೆಕ್ಸಾಂಡರ್ ಗೊಲೊವಿನ್ ಗೋಲು ಹೊಡೆದು ತಮ್ಮ ತಂಡಕ್ಕೆ 3–2ರ ಮುನ್ನಡೆ ಗಳಿಸಿಕೊಟ್ಟರು. ಸ್ಪೇನ್‌ನ ರಾಮೋಸ್ ತಪ್ಪು ಮಾಡಲಿಲ್ಲ. ಗೋಲು ಹೊಡೆ ಯುವ ಮೂಲಕ ಸಮಬಲ ಸಾಧಿಸಿದರು. ರಷ್ಯಾದ ನಾಲ್ಕನೇ ಅವಕಾಶದಲ್ಲಿ ಡೆನಿಸ್ ಚೆರಿಷೇವ್ ಗುರಿ ತಪ್ಪಲಿಲ್ಲ. ಎದುರಾಳಿ ತಂಡದ ಗೋಲ್‌ಕೀಪರ್ ಡೇವಿಡ್ ಡಿ ಗೀ ಅವರನ್ನು ವಂಚಿಸಿದ ಡೆನಿಸ್ ತಂಡಕ್ಕೆ 4–3ರ ಮುನ್ನಡೆ ಗಳಿಸಿಕೊಟ್ಟರು.

ಸ್ಪೇನ್ ತಂಡವು ತನ್ನ ಕೊನೆಯ ಅವಕಾಶದಲ್ಲಿ ಇಯಾಗೋ ಅಸ್ಪೇಸ್ ಅವರನ್ನು ಕಣಕ್ಕಿಳಿಸಿತು. ಇಯಾಗೋ ಒದ್ದ ಚೆಂಡನ್ನು ಹಿಡಿಯಲು ಗೋಲ್‌ಕೀಪರ್ ಈಗರ್ ತಮ್ಮ ಬಲಕ್ಕೆ ಡೈವ್ ಮಾಡಿದರು.

ಚೆಂಡು ಎಡಬದಿಗೆ ಹಾರಿತ್ತು. ಆದರೆ ಆರಡಿ ಎತ್ತರದ ಈಗರ್‌ ಅವರನ್ನು ದಾಟಲು ಚೆಂಡಿಗೆ ಸಾಧ್ಯವಾ ಗಲಿಲ್ಲ. ಚೆಂಡು ಅವರ ಕಾಲಿಗೆ ಅಪ್ಪಳಿಸಿತು. ರಷ್ಯಾ ಪಾಳೆಯದಲ್ಲಿ ಸಂಭ್ರಮ ಪುಟಿದೆದ್ದಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !