ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಎಫ್‌ಎಫ್ ವಾರ್ಷಿಕ ಪ್ರಶಸ್ತಿ ಪ್ರಕಟ: ಚೆಟ್ರಿ, ಮನೀಷಾಗೆ ಗೌರವ

Last Updated 9 ಆಗಸ್ಟ್ 2022, 12:37 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಅವರು ಎಐಎಫ್‌ಎಫ್‌ ‘ವರ್ಷದ ಫುಟ್‌ಬಾಲ್‌ ಆಟಗಾರ‘ ಗೌರವ ಪಡೆದುಕೊಂಡಿದ್ದಾರೆ. ಮಹಿಳೆಯರ ವಿಭಾಗದ ಪ್ರಶಸ್ತಿ ಮನೀಷಾ ಕಲ್ಯಾಣ್ ಪಾಲಾಗಿದೆ.

ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) 2021–22ರ ಸಾಲಿನ ಪ್ರಶಸ್ತಿಯನ್ನು ಮಂಗಳವಾರ ಪ್ರಕಟಿಸಿತು.

ಈ ಪ್ರಶಸ್ತಿಗೆ ಚೆಟ್ರಿ ಮತ್ತು ಕಲ್ಯಾಣ್‌ ಅವರ ಹೆಸರುಗಳನ್ನು ರಾಷ್ಟ್ರೀಯ ತಂಡದ ಕೋಚ್‌ಗಳಾದ ಇಗೊರ್‌ ಸ್ಟಿಮ್ಯಾಕ್‌ ಮತ್ತು ಥಾಮಸ್‌ ಡೆನೆರ್ಬಿ ಅವರು ನಾಮನಿರ್ದೇಶನ ಮಾಡಿದ್ದರು.

ಚೆಟ್ರಿ ಅವರು ಏಳನೇ ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. 2007 ರಲ್ಲಿ ಮೊದಲ ಬಾರಿ ‘ವರ್ಷದ ಫುಟ್‌ಬಾಲ್‌ ಆಟಗಾರ’ ಎನಿಸಿಕೊಂಡಿದ್ದರು. ಆ ಬಳಿಕ 2011, 2013, 2014, 2017 ಮತ್ತು 2018–19ರ ಋತುವಿನಲ್ಲೂ ಇದೇ ಗೌರವ ಪಡೆದಿದ್ದರು.

ಮಹಿಳಾ ರಾಷ್ಟ್ರೀಯ ತಂಡದ ಆಟಗಾರ್ತಿ ಮನೀಷಾ ಇದೇ ಮೊದಲ ಬಾರಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು 2020–21 ರಲ್ಲಿ ಉದಯೋನ್ಮುಖ ಆಟಗಾರ್ತಿ ಗೌರವ ಪಡೆದುಕೊಂಡಿದ್ದರು.

ಮನೀಷಾ ಅವರು ಸೈಪ್ರಸ್‌ನ ಕ್ಲಬ್‌ ಅಪೊಲೊನ್‌ ಲೇಡಿಸ್‌ ಪರ ಆಡಲು ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದ್ದರು. ಅಪೊಲೊನ್‌ ಕ್ಲಬ್‌, ಯುಇಎಫ್‌ಎ ಮಹಿಳಾ ಚಾಂಪಿಯನ್ಸ್‌ ಲೀಗ್‌ನ ಅರ್ಹತಾ ಹಂತದಲ್ಲಿ ಆಡುವ ಅವಕಾಶ ಪಡೆದುಕೊಂಡಿದೆ.

ಎಐಎಫ್‌ಎಫ್‌ ವಾರ್ಷಿಕ ಪ್ರಶಸ್ತಿ ವಿವರ:

ಶ್ರೇಷ್ಠ ಆಟಗಾರ: ಸುನಿಲ್‌ ಚೆಟ್ರಿ

ಶ್ರೇಷ್ಠ ಆಟಗಾರ್ತಿ: ಮನೀಷಾ ಕಲ್ಯಾಣ್

ಉದಯೋನ್ಮುಖ ಆಟಗಾರ: ವಿಕ್ರಮ್‌ ಪ್ರತಾಪ್‌ ಸಿಂಗ್

ಉದಯೋನ್ಮುಖ ಆಟಗಾರ್ತಿ: ಮಾರ್ಟಿನಾ ತಾಕ್‌ಚೊಮ್

ಅತ್ಯುತ್ತಮ ರೆಫರಿ: ಕ್ರಿಸ್ಟಲ್‌ ಜಾನ್

ಅತ್ಯುತ್ತಮ ಸಹಾಯಕ ರೆಫರಿ: ಉಜ್ಜಲ್‌ ಹಲ್ದೆರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT