ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರೊ ಕಪ್‌: ವಿಶ್ವ ಚಾಂಪಿಯನ್‌ ಫ್ರಾನ್ಸ್‌ಗೆ ಆಘಾತ

ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದ ಸ್ವಿಟ್ಜರ್ಲೆಂಡ್‌ ಕ್ವಾರ್ಟರ್‌ಫೈನಲ್‌ಗೆ
Last Updated 29 ಜೂನ್ 2021, 11:53 IST
ಅಕ್ಷರ ಗಾತ್ರ

ಬುಕಾರೆಸ್ಟ್‌: ಗೋಲ್‌ಕೀಪರ್ ಯಾನ್ ಸೋಮರ್ ಸ್ವಿಟ್ಜರ್ಲೆಂಡ್ ತಂಡದ ಪಾಲಿನ ‘ಹೀರೊ‘ ಎನಿಸಿಕೊಂಡರು. ವಿಶ್ವದ ಶ್ರೇಷ್ಠ ಆಟಗಾರರಲ್ಲೊಬ್ಬರಾದ ಕಿಲಿಯನ್ ಬಾಪೆ ಗೋಲು ಗಳಿಸುವುದನ್ನು ತಡೆದು ತಮ್ಮ ತಂಡವು ಯೂರೊ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ ತಲುಪುವಂತೆ ನೋಡಿಕೊಂಡರು.

ಸೋಮವಾರ ತಡರಾತ್ರಿ ನಡೆದ ಪ್ರೀಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಸ್ವಿಟ್ಜರ್ಲೆಂಡ್ ಪೆನಾಲ್ಟಿ ಶೂಟೌಟ್‌ನಲ್ಲಿ 5–4ರಿಂದ ವಿಶ್ವ ಚಾಂಪಿಯನ್‌ ಫ್ರಾನ್ಸ್ ತಂಡವನ್ನು ಮಣಿಸಿತು. ಆ ಮೂಲಕ 67 ವರ್ಷಗಳಲ್ಲಿ ಮೊದಲ ಬಾರಿ ಪ್ರಮುಖ ಟೂರ್ನಿಯೊಂದರ ಎಂಟರಘಟ್ಟ ತಲುಪಿದ ಸಾಧನೆ ಮಾಡಿತು.

ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 3–3ರ ಸಮಬಲ ಸಾಧಿಸಿದ್ದವು. ಫ್ರಾನ್ಸ್ ಪರ ಕರೀಂ ಬೆಂಜೆಮಾ (57, 59ನೇ ನಿಮಿಷ) ಎರಡು ಗೋಲು ದಾಖಲಿಸಿದ್ದರು. ಪಾಲ್ ಪೋಗ್ಬಾ (75ನೇ ನಿ.) ಒಂದು ಬಾರಿ ಕಾಲ್ಚಳಕ ತೋರಿದರು.

ಹ್ಯಾರಿಸ್‌ ಸ್ಟೆಫೊವಿಚ್‌ (15, 81ನೇ ನಿಮಿಷ) ಮತ್ತು ಮಾರಿಯೊ ಗವ್ರನೊವಿಚ್‌ (90ನೇ ನಿಮಿಷ) ಸ್ವಿಟ್ಜರ್ಲೆಂಡ್ ತಂಡದ ಪರ ಮಿಂಚಿದ್ದರು.

ಪೆನಾಲ್ಟಿ ಶೂಟೌಟ್‌ನಲ್ಲಿ ಸ್ವಿಟ್ಜರ್ಲೆಂಡ್‌ ಐದು ಅವಕಾಶಗಳನ್ನು ಗೋಲಾಗಿಸುವಲ್ಲಿ ಯಶಸ್ವಿಯಾದರೆ, ಫ್ರಾನ್ಸ್ ನಾಲ್ಕು ಬಾರಿ ಮಾತ್ರ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿತು.

ಫ್ರಾನ್ಸ್ ತಂಡದ ಐದನೇ ಅವಕಾಶದಲ್ಲಿ ಕಿಲಿಯನ್ ಬಾಪೆ ಒದ್ದ ಚೆಂಡನ್ನು ಗೋಲ್‌ಕೀಪರ್ ಸೋಮರ್‌ ಬಲಕ್ಕೆ ನೆಗೆದು ಹಿಡಿತಕ್ಕೆ ಪಡೆಯುತ್ತಿದ್ದಂತೆಯೇ ಸ್ವಿಸ್ ತಂಡದ ಸಂಭ್ರಮದ ಕಟ್ಟೆಯೊಡೆಯಿತು.

ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆಯುವ ಎಂಟರಘಟ್ಟದ ಹಣಾಹಣಿಯಲ್ಲಿ ಸ್ವಿಟ್ಜರ್ಲೆಂಡ್‌ ತಂಡವು ಸ್ಪೇನ್ ತಂಡವನ್ನು ಎದುರಿಸಲಿದೆ.

ಸೋಮವಾರ ರಾತ್ರಿ ನಡೆದ 16ರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ 5–3ರಿಂದ ಕ್ರೊವೇಷ್ಯಾ ತಂಡವನ್ನು ಸೋಲಿಸಿತ್ತು.

ಮೆಸ್ಸಿ ದಾಖಲೆ; ಅರ್ಜೆಂಟೀನಾ ಜಯಭೇರಿ: ಅರ್ಜೆಂಟೀನಾದ ಖ್ಯಾತ ಆಟಗಾರ ಲಯೊನೆಲ್ ಮೆಸ್ಸಿ ಅವರು ರಾಷ್ಟ್ರೀಯ ತಂಡದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಬರೆದರು. ಕೋಪಾ ಅಮೆರಿಕ ಟೂರ್ನಿಯಲ್ಲಿ ಬ್ರೆಜಿಲ್‌ನ ಕೂಯಾಬದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು 4–1ರಿಂದ ಬೊಲಿವಿಯಾ ಎದುರು ಗೆದ್ದಿತು.

34 ವರ್ಷದ ಮೆಸ್ಸಿ ಅವರಿಗೆ ಇದು ರಾಷ್ಟ್ರೀಯ ತಂಡದ ಪರ 148ನೇ ಪಂದ್ಯವಾಗಿತ್ತು. ಎರಡು ಗೋಲು (33ನೇ ನಿಮಿಷ ಪೆನಾಲ್ಟಿ ಹಾಗೂ 42ನೇ ನಿ.) ದಾಖಲಿಸಿದ ಅವರು ಪಂದ್ಯವನ್ನು ಸ್ಮರಣೀಯವಾಗಿರಿಸಿಕೊಂಡರು. ಸದ್ಯ ಅವರು ಗಳಿಸಿದ ಗೋಲುಗಳ ಸಂಖ್ಯೆ 75ಕ್ಕೆ ತಲುಪಿದೆ.

ಅರ್ಜೆಂಟೀನಾ ಪರ ಅತಿ ಹೆಚ್ಚು ಪಂದ್ಯಗಳಲ್ಲಿ ಕಣಕ್ಕಿಳಿದ ಈ ಹಿಂದಿನ ದಾಖಲೆ ಜೇವಿಯರ್ ಮಚಾರೆನೊ (147) ಅವರ ಹೆಸರಿನಲ್ಲಿತ್ತು.

ಅರ್ಜೆಂಟೀನಾ ತಂಡವು ಶನಿವಾರ ನಡೆಯುವ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಈಕ್ವೆಡಾರ್ ತಂಡಕ್ಕೆ ಮುಖಾಮುಖಿಯಾಗಲಿದೆ.

ದಿನದ ಇನ್ನೊಂದು ಪಂದ್ಯದಲ್ಲಿ ಉರುಗ್ವೆ 1–0ಯಿಂದ ಪರಾಗ್ವೆ ತಂಡವನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT